ಕುಡತಿನಿ (ಸಂಡೂರು): ‘ಪಟ್ಟಣದ ಇಂದಿರಾನಗರದ 14,15, ವಾರ್ಡ್‍ಗಳಲ್ಲಿನ ಗ್ರಾಮ ಠಾಣಾ ವ್ಯಾಪ್ತಿಯಲ್ಲಿ ಪಟ್ಟಾ, ತೆರಿಗೆ ರಸಿದಿ, ಇತರೆ ಕಂದಾಯದ ಅಧಿಕೃತ ದಾಖಲೆಗಳೊಂದಿಗೆ ಹಲವಾರು ವರ್ಷಗಳಿಂದ ವಾಸ ಮಾಡುವ ಬಡ ಪರಿಶಿಷ್ಟ ಜಾತಿ, ಪಂಗಡ ಜನರಿಗೆ ಫಾರಂ–3 ನೀಡದೇ ಪಟ್ಟಣದಲ್ಲಿನ ಶ್ರೀಮಂತ ರಿಯಲ್ ಎಸ್ಟೇಟ್ ಉದ್ಯಮದಾರರಿಗೆ ಫಾರಂ–3 ನೀಡುತ್ತಿರುವ ಪಟ್ಟಣ ಪಂಚಾಯಿತಿಯ ಕಂದಾಯ ಅಧಿಕಾರಿ, ಮುಖ್ಯಾಧಿಕಾರಿಗಳ ವಿರುದ್ಧ ನಗರಾಭಿವೃದ್ಧಿ ಕೋಶ, ಜಿಲ್ಲಾಡಳಿತವು ಸೂಕ್ತ ಕಠಿಣ ಕಾನೂನು ಕ್ರಮಗಳನ್ನು ಕೈಗೊಳ್ಳವುದರ ಜೊತೆಗೆ ಬಡ ಜನರಿಗೆ ಸರ್ಕಾರವು ತಕ್ಷಣ ಫಾರಂ – 3 ದಾಖಲೆ ನೀಡಬೇಕು’ ಎಂದು ಕುಡತಿನಿ ಪಟ್ಟಣ ಪಂಚಾಯಿತಿಯ ಸ್ಥಾಯಿ ಸಮಿತಿಯ ಅಧ್ಯಕ್ಷ ವಿ.ರಾಜಶೇಖರ್ ಒತ್ತಾಯಿಸಿದರು.
ಪಟ್ಟಣ ಪಂಚಾಯಿತಿ ಸಭಾಂಗಣದಲ್ಲಿ ಶನಿವಾರ ನಡೆದ ಸಾಮಾನ್ಯ ಸಭೆಯಲ್ಲಿ ಅವರು ಮಾತನಾಡಿದರು.
‘ಪಟ್ಟಣದ ಇಂದಿರಾನಗರದಲ್ಲಿ ವಾಸ ಮಾಡುವ ಪರಿಶಿಷ್ಟ ಜನರಿಗೆ ದಿವಗಂತಗ ಮಾಜಿ ಮುಖ್ಯಮಂತ್ರಿ ಬಂಗಾರಪ್ಪ ಅವರ ಅವಧಿಯಲ್ಲಿ ಆಶ್ರಯ ಮನೆಗಳನ್ನು ಮಂಜೂರು ಮಾಡಿ ಪಟ್ಟಾ ಸೇರಿದಂತೆ ಇತರೆ ಕಂದಾಯ ದಾಖಲೆಗಳನ್ನು ನೀಡಲಾಗಿದ್ದು, ಆ ಎಲ್ಲ ಮನೆಗಳಿಗೆ ಗ್ರಾಮ ಪಂಚಾಯಿತಿಯು ಅಧಿಕೃತವಾಗಿ ಖಾತಾ ನೀಡಿದ್ದು, ಮನೆ, ನೀರು, ಇತರೆ ತೆರಿಗೆಗಳನ್ನು ಕಟ್ಟಿಸಿಕೊಳ್ಳುತ್ತಿದ್ದು, ಅಂತಹ ಮನೆಗಳಿಗೆ ಪಟ್ಟಣ ಪಂಚಾಯಿತಿ ಅಧಿಕಾರಿಗಳು ಫಾರಂ–3 ನೀಡದೇ ವಂಚಿಸುತ್ತಿರುವುದು ಎಷ್ಟು ಸರಿ? ಎಂದು ಆಕ್ರೋಶ ವ್ಯಕ್ತಪಡಿಸಿದರು.
‘ಪಟ್ಟಣದಲ್ಲಿ ಗ್ರಾಮ ಠಾಣಾ ವ್ಯಾಪ್ತಿಯಲ್ಲಿ ಸುಮಾರು 4000 ಸಾವಿರ ಮನೆಗಳಿದ್ದು, ಪಂಚಾಯಿತಿಯವರು ಕೇವಲ 80ಮನೆಗಳಿಗೆ ಮಾತ್ರ ಫಾರಂ– 3 ನೀಡಿ ಬಡ ಜನರನ್ನು ವಂಚಿಸಿದ್ದಾರೆ. ಆದರೆ, ರಿಯಲ್ ಎಸ್ಟೇಟ್ ಉದ್ಯಮದಾರರ ಖಾಲಿ ನಿವೇಶನಗಳಿಗೆ ಕೆಲವೇ ತಿಂಗಳಲ್ಲಿ 566 ಫಾರಂ–3ಗಳನ್ನು ನೀಡಲಾಗಿದೆ. ಶ್ರೀಮಂತರ ಪರ ಕೆಲಸ ಮಾಡುವ ಅಧಿಕಾರಿಗಳನ್ನು ತಕ್ಷಣ ವರ್ಗಾವಣೆ ಮಾಡಬೇಕು’ ಎಂದು ಆಗ್ರಹಿಸಿದರು.
‘ಪಟ್ಟಣದಲ್ಲಿನ ಜನರ ಮನೆಗಳಿಗೆ ಹಕ್ಕು ಪತ್ರ ಸೇರಿದಂತೆ ಇತರೆ ಕಂದಾಯ ದಾಖಲೆಗಳು ಲಭ್ಯವಿಲ್ಲದಿರುವುದರಿಂದ ಫಾರಂ–3 ನೀಡಲು ಆಗಿಲ್ಲ. ಸರ್ಕಾರಿ ಆದೇಶದ ಅನುಸಾರ ಪಟ್ಟಣದಲ್ಲಿನ ಅರ್ಹ ಜನರಿಗೆ ಇ–ಖಾತಾ, ಬಿ - ಖಾತಾಗಳನ್ನು ವಿತರಣೆ ಮಾಡಲಾಗಿದೆ’ ಎಂದು ಕಂದಾಯ ನಿರೀಕ್ಷಿಕಿ ತಾಯಮ್ಮ ಸಭೆಗೆ ತಿಳಿಸಿದರು.
‘ಪಟ್ಟಣದ ಇಂದಿರಾನಗರದಲ್ಲಿನ ಅರ್ಹ ಪರಿಶಿಷ್ಟ ಜನರ ಮನೆಗಳಿಗೆ ಫಾರಂ – 3 ನೀಡಲು ತಹಶೀಲ್ದಾರ್ ಬಳಿ ಚರ್ಚಿಸಿ ಸರ್ಕಾರದ ನಿಯಮದ ಪ್ರಕಾರ ಸೂಕ್ತ ಕ್ರಮವಹಿಸಲಾಗುವುದು. ಕುಡತಿನಿ ಪಂಚಾಯಿತಿಗೆ ವೇಣಿವೀರಾಪುರ ಗ್ರಾಮವನ್ನು ಸೇರಿಸಿ ಪುರಸಭೆಯನ್ನಾಗಿ ಮಾಡಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು’ ಎಂದು ಪಟ್ಟಣ ಪಂಚಾಯಿತಿಯ ಮುಖ್ಯಾಧಿಕಾರಿ ತೀರ್ಥಪ್ರಸಾದ್ ಹೇಳಿದರು.
‘ಪಟ್ಟಣದಲ್ಲಿನ 19ನೇ ವಾರ್ಡ್‍ನಲ್ಲಿ ವಾಸ ಮಾಡುವ ಬಡ ಜನರ ಕೆಲ ಮನೆಗಳಿಗೆ ಪಂಚಾಯಿತಿಯ ಹಕ್ಕು ಪತ್ರಗಳಿದ್ದು, ಅಂತಹ ಮನೆಗಳಿಗೆ ಫಾರಂ – 3 ನೀಡಲು ಅಧಿಕಾರಿಗಳು ಸೂಕ್ತ ಕ್ರಮವಹಿಸಬೇಕು’ ಎಂದು ನಿವಾಸಿ ರಾಮಚಂದ್ರಪ್ಪ ಒತ್ತಾಯಿಸಿದರು.
ಪಟ್ಟಣ ಪಂಚಾಯಿತಿ ಉಪಾಧ್ಯಕ್ಷ ಕನ್ನಿಕೇರಿ ಪಂಪಾಪತಿ, ಸದಸ್ಯರಾದ ವೆಂಕಟರಮಣ ಬಾಬು, ಮಂಜುನಾಥ, ರಾಮಲಿಂಗಪ್ಪ, ಸುನಿಲ್, ಲೆನಿನ್, ಶಂಕ್ರಮ್ಮ, ಭಾಗ್ಯಲಕ್ಷ್ಮಿ, ಸಾಲಮ್ಮ, ಅಧಿಕಾರಿಗಳು ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.