ಕುಡತಿನಿ (ಸಂಡೂರು): ಪಟ್ಟಣದ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರವು ಹಲವಾರು ವರ್ಷಗಳಿಂದ ಶಿಥಿಲಗೊಂಡಿದ್ದು, ಆಸ್ಪತ್ರೆಯಲ್ಲಿನ ವೈದ್ಯರು, ಅಧಿಕಾರಿ, ಸಿಬ್ಬಂದಿ ನಿತ್ಯ ಜೀವ ಭಯದಲ್ಲಿಯೇ ಕಾರ್ಯನಿರ್ವಹಿಸುವಂತಾಗಿದೆ.
ಆಸ್ಪತ್ರೆ ನಿರ್ಮಾಣಗೊಂಡು 25 ವರ್ಷಗಳಾಗಿದ್ದು, ಕಟ್ಟಡವು ಅವನತಿಯ ಅಂಚಿಗೆ ತಲುಪಿದೆ. ಎರಡು ಹಾಲ್, ಆರು ಕೊಠಡಿಗಳನ್ನು ಆಸ್ಪತ್ರೆ ಹೊಂದಿದೆ. ವೈದ್ಯರ ಕಚೇರಿ, ಹೆರಿಗೆ, ರಕ್ತ ಪರೀಕ್ಷೆ, ಲೇಬರ್, ಔಷಧ ದಾಸ್ತಾನು, ರೋಗಿಗಳ ಚಿಕಿತ್ಸಾ ಕೊಠಡಿಗಳು ಸೇರಿದಂತೆ ಸಿಬ್ಬಂದಿಯ ಶೌಚಾಲಯಗಳಿವೆ.
ಎಲ್ಲ ಕೊಠಡಿಗಳು ಶಿಥಿಲಗೊಂಡಿದ್ದು ಪ್ರತಿ ವರ್ಷ ಮಳೆಗಾಲದಲ್ಲಿ ಸೋರುವುದು ಸಾಮಾನ್ಯ. ಕಟ್ಟಡದ ಚಾವಣಿಯ ಸಿಮೇಂಟ್ ಕಾಂಕ್ರೀಟ್ ನಿರಂತರವಾಗಿ ಕಳಚಿ ಬಿಳುತ್ತಿದ್ದು, ಕಬ್ಬಿಣದ ಸರಳುಗಳು ಸಹ ಹೊರ ಚಾಚಿಕೊಂಡಿವೆ.
ಕೇಂದ್ರದಲ್ಲಿನ ಪುರಷ, ಮಹಿಳೆಯರ ವಾರ್ಡ್‍ಗಳು ಹಾಳಾಗಿದ್ದು, ಕಳೆದ ವರ್ಷ ಸರ್ಕಾರದ ಅನುದಾನದ ₹10 ಲಕ್ಷ ವೆಚ್ಚದಲ್ಲಿ ಆಸ್ಪತ್ರೆಯ ನವೀಕರಣ ಮಾಡಲಾಗಿದೆ. ಆದರೆ, ಕೆಲ ಕಟ್ಟಡಗಳಿಗೆ ಸಿಮೇಂಟ್ ತೆಪೆ ಹಾಕಿ ಸುಣ್ಣ ಬಣ್ಣ ಬಳಿದು ಅಲಂಕಾರ ಮಾಡಿದ್ದಾರೆ. ಆದರೆ ಕಳಪೆ ಕಾಮಗಾರಿಯಿಂದ ಆಸ್ಪತ್ರೆಯು ಮತ್ತೆ ಶಿಥಿಲಾವಸ್ಥೆಗೆ ತಲುಪಿದೆ.
ಆಸ್ಪತ್ರೆಯ ಆವರಣದಲ್ಲಿ 2021ರಲ್ಲಿ ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿಯ ಅನುದಾನದಲ್ಲಿ ₹52 ಲಕ್ಷ ವೆಚ್ಚದಲ್ಲಿ ಎರಡು ನೂತನ ಕೊಠಡಿಗಳನ್ನು ನಿರ್ಮಿಸಲಾಗಿದೆ. ಹಳೆಯ ಆಸ್ಪತ್ರೆಯಲ್ಲಿ ಕೆಲ ಅವಶ್ಯಕ ಸೇವೆಗಳನ್ನು ಈ ಕೊಠಡಿಗಳಿಗೆ ಸ್ಥಳಾಂತರಿಸಿರುವುದರಿಂದ ಅಧಿಕಾರಿಗಳು ತುಸು ನಿಟ್ಟಿಸಿರು ಬಿಡುವಂತಾಗಿದೆ.
ಕನಸಾಗಿ ಉಳಿದ ಸಮುದಾಯ ಆರೋಗ್ಯ
ಕೇಂದ್ರ ಕುಡತಿನಿ ಪಟ್ಟಣ ಸುತ್ತಲಿನ ಗ್ರಾಮಗಳ ಜನಸಂಖ್ಯೆಗೆ ಅನುಗುಣವಾಗಿ ಪ್ರಸ್ತುತ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಮೇಲ್ದರ್ಜೆಗೇರಿಸಿ ನೂತನ ಸಮುದಾಯ ಆರೋಗ್ಯ ಕೇಂದ್ರವನ್ನು ನಿರ್ಮಿಸುವಂತೆ ವಿವಿಧ ಸಂಘಟನೆಗಳ ಮುಖಂಡರು ಪಟ್ಟಣದ ಸಾರ್ವಜನಿಕರು ಸಂಡೂರು ಕ್ಷೇತ್ರದ ಶಾಸಕಿ ಸಂಸದ ಜಿಲ್ಲಾಧಿಕಾರಿಗೆ ಹಲವಾರು ಬಾರಿ ಒತ್ತಾಯಿಸಿದ್ದರೂ ಪ್ರಯೋಜನವಾಗಿಲ್ಲ. ಸಮುದಾಯ ಆರೋಗ್ಯ ಕೇಂದ್ರದ ಕನಸು ಕನಾಸಗಿ ಉಳಿದಿದ್ದರಿಂದ ಜನರು ಅಧಿಕಾರಿ ಜನ ಪ್ರತಿನಿಧಿಗಳ ವಿರುದ್ಧ ಆಕ್ರೋಶಗೊಂಡಿದ್ದಾರೆ.
ಪಟ್ಟಣದ ಆರೋಗ್ಯ ಕೇಂದ್ರ ಶಿಥಿಲಗೊಂಡು ಅಪಾಯ ಆಹ್ವಾನಿಸುತ್ತಿದೆ. ಅಧಿಕಾರಿ ಸಿಬ್ಬಂದಿ ಜೀವ ಭಯದಲ್ಲೇ ಕೆಲಸ ಮಾಡುತ್ತಿದ್ದಾರೆ. ಸರ್ಕಾರ ಈ ಹಳೆಯ ಕಟ್ಟಡವನ್ನು ಶೀಘ್ರವಾಗಿ ತೆರವುಗೊಳಿಸಬೇಕುಕೆ.ಎಂ.ಹಾಲಪ್ಪ, ಪಟ್ಟಣ ಪಂಚಾಯಿತಿ ಸದಸ್ಯರು ಕುಡತಿನಿ
ಹಳೆಯ ಕಟ್ಟಡವನ್ನು ₹10ಲಕ್ಷ ವೆಚ್ಚದಲ್ಲಿ ನವೀಕರಿಸಲಾಗಿದೆ. ಜನರ ಸುರಕ್ಷತೆಯ ದೃಷ್ಠಿಯಿಂದ ಕೆಲ ಸೇವೆಗಳನ್ನು ನೂತನ ಕಟ್ಟಡಕ್ಕೆ ಸ್ಥಳಾಂತರಿಸಲಾಗಿದೆ. ನೂತನ ಸಮುದಾಯ ಆರೋಗ್ಯ ಕೇಂದ್ರದ ಆದೇಶವು ಇನ್ನು ಜಾರಿಯಾಗಿಲ್ಲ.ಡಾ.ಗುರುಬಸವರಾಜ, ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಕುಡತಿನಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.