ADVERTISEMENT

ಕುಡತಿನಿ: ರಸ್ತೆ, ಬೆಳೆ ಆವರಿಸಿದ ಕಚ್ಚಾ ಬೂದಿ

​ಪ್ರಜಾವಾಣಿ ವಾರ್ತೆ
Published 13 ನವೆಂಬರ್ 2025, 5:44 IST
Last Updated 13 ನವೆಂಬರ್ 2025, 5:44 IST
ಕುಡತಿನಿಯ ಹೊರ ವಲಯದ ರಸ್ತೆಯಲ್ಲಿ ಹಾಕಿರುವ ಕಚ್ಚಾ ಬೂದಿ
ಕುಡತಿನಿಯ ಹೊರ ವಲಯದ ರಸ್ತೆಯಲ್ಲಿ ಹಾಕಿರುವ ಕಚ್ಚಾ ಬೂದಿ   

ಕುಡತಿನಿ (ಸಂಡೂರು): ಪಟ್ಟಣದ ಹೊರ ವಲಯದಲ್ಲಿನ ಕುಡತಿನಿಯಿಂದ ಕುರುಗೋಡು ಪಟ್ಟಣಕ್ಕೆ ಸಂಪರ್ಕ ಕಲ್ಪಿಸುವ ಪ್ರಮುಖ ರಸ್ತೆಯಲ್ಲಿನ ಗುಂಡಿಗಳನ್ನು ಮುಚ್ಚಲು ಕಚ್ಚಾ ಬೂದಿ ಹಾಕಿದ್ದರಿಂದ ರೈತರ ಎತ್ತಿನಗಾಡಿ, ಬಸ್, ಬೈಕ್, ಆಟೊ ಸೇರಿದಂತೆ ಇತರೆ ವಾಹನಗಳ ಸವಾರರು ನಿತ್ಯ ದೂಳಿನ ಮಜ್ಜನಕ್ಕೆ ಬೇಸತ್ತಿದ್ದಾರೆ.

ರೈಲ್ವೆ ಇಲಾಖೆಯವರು ನೂತನ ರೈಲ್ವೆ ಸೇತುವೆಯ ಕಾಮಗಾರಿ ಹಮ್ಮಿಕೊಂಡಿದ್ದರಿಂದ ಸಾರ್ವಜನಿಕರ ನಿತ್ಯದ ಸಂಚಾರಕ್ಕಾಗಿ ರೈಲ್ವೆ ಹಳಿಯ ಪಕ್ಕದಲ್ಲಿ ಪರ್ಯಾಯ ಮಣ್ಣಿನ ರಸ್ತೆಯನ್ನು ನಿರ್ಮಿಸಿಲಾಗಿದ್ದು, ಕೈಗಾರಿಗಳ ಭಾರಿ ವಾಹನಗಳ ಸಂಚಾರದಿಂದ ರಸ್ತೆಯು ಸಂಪೂರ್ಣವಾಗಿ ಹದಗೆಟ್ಟಿದೆ.

ರಸ್ತೆಯಲ್ಲಿನ ಗುಂಡಿಗಳನ್ನು ಮುಚ್ಚಲು ಗುಣಮಟ್ಟದ ಮಣ್ಣು ಹಾಕುವ ಬದಲು ಕೈಗಾರಿಕೆಯಲ್ಲಿನ ಕಚ್ಚಾ ಬೂದಿಯನ್ನು ಹಾಕಲಾಗಿದೆ. ವಾಹನಗಳ ಸಂಚಾರದಿಂದ ದೂಳು ಹಾರಿ ಎತ್ತಿನ ಗಾಡಿ, ಬೈಕ್, ಇತರೆ ವಾಹನಗಳ ಸವಾರರಿಗೆ ದಾರಿ ಕಾಣದಂತಾಗುತ್ತಿದೆ.

ADVERTISEMENT
ರಸ್ತೆ ಗುಂಡಿಗಳಿಗೆ ಹಾಕಿದ ಕಚ್ಚಾ ಬೂದಿಯನ್ನು ಶೀಘ್ರವಾಗಿ ತೆರವುಗೊಳಿಸಲಾಗುವುದು. ಸಂಬಂಧಪಟ್ಟ ಕೈಗಾರಿಕಾ ಮಾಲೀಕರ ಜತೆ ಚರ್ಚಿಸಿ ಸಮಸ್ಯೆ ಇತ್ಯಾರ್ಥಪಡಿಸಲಾಗುವುದು.
ಮಂಜುನಾಥ ಕುಡತಿನಿ, ಪಟ್ಟಣ ಪಂಚಾಯಿತಿ ಪ್ರಭಾರಿ ಮುಖ್ಯಾಧಿಕಾರಿ

ಅತಿಯಾದ ದೂಳು ರಸ್ತೆ ಬದಿಯ ರೈತರ ಜಮೀನುಗಳಲ್ಲಿನ ತೊಗರಿ, ಮೆಕ್ಕೆಜೋಳ, ಹತ್ತಿ, ಕಡಲೆ ಇತರೆ ಬೆಳೆಗಳಿಗೂ ಆವರಿಸಿದ್ದು, ಬೆಳೆ ನಷ್ಟದ ಆತಂಕ ಎದರಾಗಿದೆ. ಈ ಬೂದಿಯನ್ನು ಬೇರೆಡೆಗೆ ಸ್ಥಳಾಂತರಿಸಿ ಗರಸು ಮಣ್ಣನ್ನು ಹಾಕುವಂತೆ ಜನರು ಒತ್ತಾಯಿಸಿದ್ದಾರೆ.

‘ರಸ್ತೆಯಲ್ಲಿನ ಗುಂಡಿಗಳಿಗೆ ಕಚ್ಚಾ ಬೂದಿಯನ್ನು ಹಾಕಿರುವುದು ಸರಿಯಲ್ಲ. ರೈತರು, ಕಾರ್ಮಿಕರು ಈ ರಸ್ತೆಯಲ್ಲಿ ಸಂಚಾರ ಮಾಡಲು ನಿತ್ಯ ಪರಿತಪಿಸುತ್ತಿದ್ದು, ಸಂಬಂಧಪಟ್ಟ ಅಧಿಕಾರಿಗಳು ರಸ್ತೆಗೆ ಹಾಕಿದ ಬೂದಿಯನ್ನು ಶೀಘ್ರವಾಗಿ ತೆರವುಗೊಳಿಸಿ, ಸಮಸ್ಯೆ ಪರಿಹರಿಸಬೇಕು’ ಎಂದು ಕುಡತಿನಿ ಪಟ್ಟಣದ ನಿವಾಸಿ ಎ.ಗಣೇಶ್ ಒತ್ತಾಯಿಸಿದ್ದಾರೆ.

ಕುಡತಿನಿಯ ಹೊರ ವಲಯದ ರಸ್ತೆಯಲ್ಲಿನ ಕಚ್ಚಾ ಬೂದಿಯ ದೂಳು ಪಕ್ಕದ ಹೊಲದಲ್ಲಿನ ತೊಗರಿ ಬೆಳೆಗೆ ಆವರಿಸಿದೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.