ಕುಡತಿನಿ (ಸಂಡೂರು): ಪಟ್ಟಣದಲ್ಲಿನ ಬೀದಿ ನಾಯಿಗಳು ಸಾರ್ವಜನಿಕರ ಮೇಲೆ ನಿರಂತರವಾಗಿ ದಾಳಿ ನಡೆಸಿ ಕಚ್ಚುವುದರಿಂದ ಪಟ್ಟಣದಲ್ಲಿನ ಮಕ್ಕಳು, ಮಹಿಳೆಯರು, ವೃದ್ಧರು ಹೆಚ್ಚಿನ ಆತಂಕಕ್ಕೆ ಒಳಗಾಗಿ ಪ್ರಾಣಭಯದಲ್ಲೆ ಸಂಚರಿಸುವಂತಾಗಿದೆ.
ಹತ್ತು ದಿನಗಳಲ್ಲಿ ಶಾಲಾ ಮಕ್ಕಳು, ಆಶಾಕಾರ್ಯಕರ್ತೆ ಸೇರಿ ಒಟ್ಟು ಏಳು ಜನರ ಮೇಲೆ ಬೀದಿ ನಾಯಿಗಳು ಸಾರ್ವಜನಿಕ ಸ್ಥಳಗಳಲ್ಲಿ ದಾಳಿ ನಡೆಸಿ, ಕಚ್ಚಿದ್ದರಿಂದ ಎಲ್ಲರು ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಮನೆಗೆ ತೆರಳಿದ್ದಾರೆ.
ಆ.8ರಂದು ಪಟ್ಟಣದ ರಾಘವೇಂದ್ರ ಕಾಲೊನಿಯಲ್ಲಿ ಶಾಲಾ ಬಾಲಕ ಸೇರಿ ಮೂರು ಜನರ ಮೇಲೆ ಬೀದಿ ನಾಯಿಯು ದಾಳಿ ನಡೆಸಿ ಕಚ್ಚಿತ್ತು. ನಂತರ ಆ.17ರಂದು ಪಟ್ಟಣದ ಎಸ್‍ಬಿಐ ಬ್ಯಾಂಕ್, ನಾಲ್ಕನೇ ವಾರ್ಡ್‍ನ ಅಂಗನವಾಡಿ ಕೇಂದ್ರ, 17ನೇ ವಾರ್ಡ್‍ನ ಅಂಬೇಡ್ಕರ್ ವೃತ್ತ ಸೇರಿದಂತೆ ಇತರೆ ಕಡೆಗಳಲ್ಲಿ ಬೀದಿ ನಾಯಿಗಳು ದಾಳಿ ನಡೆಸಿ ಶಾಲಾ ಮಕ್ಕಳು, ಒಬ್ಬ ಆಶಾಕಾರ್ಯಕರ್ತೆ ಸೇರಿ ಒಟ್ಟು ನಾಲ್ಕು ಜನರಿಗೆ ಏಕಕಾಲಕ್ಕೆ ಕಚ್ಚಿದ್ದರಿಂದ ಜನರು ಭಯಬೀತರಾಗಿದ್ದಾರೆ.
ಪಟ್ಟಣದಲ್ಲಿನ ಚಿಕನ್, ಮಟನ್, ಮೀನು, ಇತರೆ ಮಾಂಸ ಮಾರಾಟದ ಅಂಗಡಿಗಳಲ್ಲಿ, ಬೀದಿ ಬದಿಯ ಫಾಸ್ಟ್‌ಪುಡ್‍ಗಳ ಬಳಿಯಲ್ಲಿ ಬಿದ್ದಿರುವ ಆಹಾರಕ್ಕಾಗಿ ಬೀದಿ ನಾಯಿಗಳು ಗುಂಪು ಗುಂಪಾಗಿ ಸೇರಿ ಆಹಾರಕ್ಕಾಗಿ ಕಚ್ಚಾಡುವುದು, ಜನರ ಮೇಲೆ ದಾಳಿ ನಡೆಸುವುದು ಸಾಮಾನ್ಯವಾಗಿದೆ.
ಮಾಂಸದ ರುಚಿ ಕಂಡಿರುವ ನಾಯಿಗಳು ರಸ್ತೆಯಲ್ಲಿ ಸಂಚರಿಸುವ ಜನರ ಮೇಲೆ ಏಕಾಏಕಿ ದಾಳಿ ನಡೆಸಿ ಕಚ್ಚುವುದು, ಮಾಂಸದ ಅಂಗಡಿ, ಬೀದಿ ಬದಿಯ ಹೋಟೆಲ್ ಮಾಲಿಕರು ವ್ಯರ್ಥವಾದ ಆಹಾರವನ್ನು ಸರಿಯಾಗಿ, ವ್ಯವಸ್ಥಿತವಾಗಿ ದೂರದ ಸ್ಥಳಗಳಿಗೆ ವಿಲೆವಾರಿ ಮಾಡದೇ ಅಲ್ಲೆ ಬಿಸಾಡುವುದರಿಂದ ಪಟ್ಟಣದಲ್ಲಿ ಬೀದಿ ನಾಯಿಗಳು ಸಂಖ್ಯೆಯು ಹೆಚ್ಚಳವಾಗುವುದಕ್ಕೆ ಪ್ರಮುಖ ಕಾರಣವಾಗಿದೆ.
ಪಟ್ಟಣದಲ್ಲಿನ ಬೀದಿ ನಾಯಿಗಳು ಸಾರ್ವಜನಿಕ ವಾಸದ ಮನೆಗಳ ಬಳಿ, ಓಣಿಗಳಲ್ಲಿ ಹೆಚ್ಚಾಗಿ ಸಂಚಾರ ಮಾಡುವುದು, ಕಸ, ಇತರೆ ತ್ಯಾಜ್ಯದ ಸಂಗ್ರಹದ ಸ್ಥಳಗಳಲ್ಲಿ ವಾಸಮಾಡುವುದರಿಂದ ಮಕ್ಕಳು, ಮಹಿಳೆಯರು, ವೃದ್ಧರು ಪ್ರಾಣ ಭಯದಿಂದ ಸಂಚರಿಸಬೇಕಾಗಿದೆ.
ನಾಯಿಗಳ ಹಾವಳಿಯ ನಿಯಂತ್ರಣಕ್ಕಾಗಿ ಪಟ್ಟಣ ಪಂಚಾಯಿತಿಯವರು ಹೆಣ್ಣು ನಾಯಿಗಳಿಗೆ ಸಂತಾನಹರಣ ಚಿಕಿತ್ಸೆ ಮಾಡಿಸಬೇಕು. ಜನರ ಸಂರಕ್ಷಣೆಯ ದೃಷ್ಠಿಯಿಂದ ಬೀದಿ ನಾಯಿಗಳಿಗೆ ರೇಬಿಸ್ ವ್ಯಾಕ್ಸಿನ್ ಕಡ್ಡಾಯವಾಗಿ ಹಾಕಬೇಕು ಎಂದು ಪಟ್ಟಣದ ಜನರ ಒತ್ತಾಯವಾಗಿದೆ.
ಪಟ್ಟಣದಲ್ಲಿ ಬೀದಿ ನಾಯಿಗಳ ಹಾವಳಿಯು ಹೆಚ್ಚಾಗಿದೆ. ಪಟ್ಟಣ ಪಂಚಾಯಿತಿ ಅಧಿಕಾರಿಗಳು ಬೀದಿ ನಾಯಿಗಳ ನಿಯಂತ್ರಣಕ್ಕೆ ಸೂಕ್ತ ಕ್ರಮವಹಿಸಬೇಕುನಾಗೇಂದ್ರ ಕುಡಿತಿನಿ ಪಟ್ಟಣದ ನಿವಾಸಿ
ಪಟ್ಟಣದಲ್ಲಿನ ಚಿಕನ್ ಮಟನ್ ಮಾರಾಟ ಮಾಡುವ ವ್ಯಾಪಾರಿಗಳಿಗೆ ಬೀದಿ ಬದಿಯ ಅಂಗಡಿಗಳ ಮಾಲಿಕರಿಗೆ ತ್ಯಾಜ್ಯ ಆಹಾರವನ್ನು ವ್ಯವಸ್ಥಿತವಾಗಿ ದೂರದ ಸ್ಥಳಗಳಿಗೆ ವಿಲೆವಾಡುವಂತೆ ಜಾಗೃತಿ ಮಾಡಿಸಲಾಗುವುದು. ಬೀದಿ ನಾಯಿಗಳ ಹಾವಳಿ ತಡೆಯಲು ಸೂಕ್ತ ಕ್ರಮವಹಿಸಲಾಗುವುದುತೀರ್ಥಪ್ರಸಾದ್ ಮುಖ್ಯಾಧಿಕಾರಿ ಕುಡತಿನಿ ಪಟ್ಟಣ ಪಂಚಾಯಿತಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.