ADVERTISEMENT

ಕೂಡ್ಲಿಗಿ | ಸಂತೆ ಸ್ಥಳಾಂತರ: ಮೂಲ ಸೌಕರ್ಯವಿಲ್ಲದೆ ಪರದಾಟ

ಒಂದು ಕಡೆಯಲ್ಲಿ ನಿರ್ದಿಷ್ಟವಾಗಿ ಸಂತೆ ಏರ್ಪಡು ಮಾಡುವಂತೆ ಒತ್ತಾಯ

ಎ.ಎಂ.ಸೋಮಶೇಖರಯ್ಯ
Published 14 ಸೆಪ್ಟೆಂಬರ್ 2025, 5:45 IST
Last Updated 14 ಸೆಪ್ಟೆಂಬರ್ 2025, 5:45 IST
ಕೂಡ್ಲಿಗಿ ಪಟ್ಟಣದ ಶುಕ್ರವಾರ ಎಪಿಎಂಸಿ ಬಾಗಿಲಲ್ಲಿಯೇ ಸಂತೆ ವ್ಯಾಪಾರ ನಡೆಯುತ್ತದೆ
ಕೂಡ್ಲಿಗಿ ಪಟ್ಟಣದ ಶುಕ್ರವಾರ ಎಪಿಎಂಸಿ ಬಾಗಿಲಲ್ಲಿಯೇ ಸಂತೆ ವ್ಯಾಪಾರ ನಡೆಯುತ್ತದೆ   

ಕೂಡ್ಲಿಗಿ: ತಾಲ್ಲೂಕು ಕೇಂದ್ರ್ರವಾದ ಪಟ್ಟಣದಲ್ಲಿ ಪ್ರತಿ ಶುಕ್ರವಾರ ನಡೆಯುವ ಸಂತೆ ಒಂದು ಜಾಗದಿಂದ ಮತ್ತೊಂದು ಜಾಗಕ್ಕೆ ಸ್ಥಳಾಂತರಗೊಳ್ಳುತ್ತಿದೆ. ಹೊಸ ತಾಣದಲ್ಲಿ ಗ್ರಾಹಕರು, ವ್ಯಾಪಾರಿಗಳು ಪರದಾಡುವಂತಾಗಿದ್ದು, ಸೂಕ್ತವಾದ ಸ್ಥಳ, ಶೌಚಾಲಯ, ಕುಡಿಯುವ ನೀರಿನ ವ್ಯವಸ್ಥೆ ಸೇರಿದಂತೆ ಅನೇಕ ಮೂಲ ಸೌಕರ್ಯಗಳ ಕೊರತೆ ಎದ್ದು ಕಾಣುತ್ತಿದೆ.

ಮೊದಲಿನಿಂದಲೂ ಪಟ್ಟಣದ ಹಳೆ ಅಸ್ಪತ್ರೆ ಬಳಿ ಸಂತೆ ನಡೆಯುತ್ತಿತ್ತು. ಆದರೆ ಅಲ್ಲಿ ಜಾಗ ಸಾಕಾಗುವುದಿಲ್ಲ ಹಾಗೂ ಸಂಚಾರಕ್ಕೆ ಅಡಚಣೆಯಾಗುತ್ತದೆ ಎಂದು ಬೆಂಗಳೂರು ರಸ್ತೆಯಲ್ಲಿರುವ ಕೊತ್ತಲಾಂಜನೇಯ ಸ್ವಾಮಿಗೆ ಸೇರಿದ ಜಮೀನಿಗೆ ಐದು ವರ್ಷಗಳ ಹಿಂದೆ ಸ್ಥಳಾಂತರ ಮಾಡಲಾಯಿತು. ಆದರೆ ಅಲ್ಲಿ ಸಮತಟ್ಟಾದ ಜಾಗವಿಲ್ಲದೆ, ಮಳೆ ಬಂದರೆ ಕೆಸರು ಗದ್ದೆಯಾಂತಾಗುವ ಜಾಗದಲ್ಲಿಯೇ ನಡೆಯುತ್ತಿದ್ದ ಸಂತೆಯಲ್ಲಿ ವ್ಯಾಪಾರಿಗಳು ಹಾಗೂ ಗ್ರಾಹಕರು ವ್ಯಾಪಾರ ಮಾಡುತ್ತಿದ್ದರು. ಈ ವರ್ಷವಿಡೀ ನಿರಂತರ ಮಳೆಯಿಂದ ಸಂತೆ ಮೈದಾನದಲ್ಲಿ ಕಾಲಿಡದಂತೆ ಕೆಸರು ತುಂಬಿಕೊಂಡಿತ್ತು. ಇದರಿಂದ ರೋಷಿ ಹೋದ ವ್ಯಾಪಾರಿಗಳು, ಗ್ರಾಹಕರು ಸಂತೆಯನ್ನು ಮೊದಲಿದ್ದ ಜಾಗಕ್ಕೆ ಸ್ಥಳಾಂತರ ಮಾಡುವಂತೆ ಅಧಿಕಾರಿಗಳನ್ನು ಹಾಗೂ ಜನ ಪ್ರತಿನಿಧಿಗಳನ್ನು ಒತ್ತಾಯಿಸಿದ್ದರು.

ಇದರಿಂದ ಸಂತೆಯನ್ನು ಪಟ್ಟಣದ ಹಳೇ ಸಂತೆ ಜಾಗದಲ್ಲಿಯೇ ಸಂತೆ ಮಾಡುವಂತೆ ಮೂರು ವಾರಗಳ ಹಿಂದೆ ಪಟ್ಟಣ ಪಂಚಾಯಿತಿಯಲ್ಲಿ ನಿರ್ಣಯ ಕೈಗೊಳ್ಳಲಾಗಿತ್ತು. ಆದರೆ ಎರಡು ವಾರಗಳಿಂದ ಎಪಿಸಿಎಂಸಿಗೆ ಸ್ಥಳಾಂತರ ಮಾಡಲಾಗಿದ್ದು, ಅನೇಕರು ಎಪಿಎಂಸಿ ಮುಖ್ಯ ಬಾಗಿಲು ಸೇರಿದಂತೆ ಬೆಂಗಳೂರು ರಸ್ತೆಯಲ್ಲಿಯೇ ವ್ಯಾಪಾರ ಮಾಡಲು ಮುಂದಾಗಿರುವುದರ ಜೊತೆಗೆ ಗ್ರಾಹಕರು ತಮ್ಮ ವಾಹನಗಳನ್ನು ರಸ್ತೆಯ ಎರಡು ಬದಿಯಲ್ಲಿ ನಿಲ್ಲಿಸಿದ್ದರಿಂದ ರಾಷ್ಟ್ರೀಯ ಹೆದ್ದಾರಿಗೆ ಹೋಗಿ ಬರುವ ವಾಹನಗಳ ಸಂಚಾರಕ್ಕೆ ಅಡಚಣೆಯಾಗಿದ್ದು, ಚಾಲಕರು ಪರದಾಡುವಂತಾಗಿತ್ತು. ಬಸ್ ನಿಲ್ದಾಣ ಪಟ್ಟಣದ ಬೇರೆ ಬೇರೆ ವಾರ್ಡುಗಳಿಂದ ಇಲ್ಲಿಗೆ ಬಂದು ಹೋಗಲು ₹80ರಿಂದ ₹160 ಆಟೊ ಬಾಡಿಗೆ ಗ್ರಾಹಕರಿಗೆ ಮತ್ತೊಷ್ಟು ಹೊರೆಯಾಗಿದೆ. ಜೋಳ ಕಟಾವು ಆರಂಭವಾಗಿದ್ದು, ಎಪಿಎಂಸಿಯಲ್ಲಿ ಖರೀದಿಗೆ ಚಾಲನೆ ನೀಡಿದರೆ ಅಲ್ಲಿಯೂ ಜಾಗ ಖಾಲಿ ಮಾಡಬೇಕಾಗುತ್ತದೆ. ಮುಂದೆ ಎಲ್ಲಿ ಎಂಬ ಪ್ರಶ್ನೆ ಎಲ್ಲರನ್ನು ಕಾಡುತ್ತಿದೆ.

ADVERTISEMENT

ಸಂತೆ ನಡೆಯುವ ಸ್ಥಳವನ್ನು ಪದೇ ಪದೇ ಬದಲಾಯಿಸುತ್ತಿರುವುದರಿಂದ ಕುಡಿಯುವ ನೀರು, ಶೌಚಾಲಯ ವ್ಯವಸ್ಥೆಯಂತೂ ಕೇಳುವಂತಿಲ್ಲ. ಸಂತೆಯಲ್ಲಿ ವ್ಯಾಪಾರ ಮಾಡುವ ಮಹಿಳೆಯರ ಸ್ಥಿತಿ ಹೇಳ ತೀರದಾಗಿದೆ. ಒಂದು ನಿರ್ದಿಷ್ಟ ಜಾಗದಲ್ಲಿ ಸಂತೆ ಮೈದಾನವನ್ನು ಕಾಯಂ ಮಾಡಿ ಅಲ್ಲಿ ಮೂಲ ಸೌಕರ್ಯಗಳನ್ನು ಕಲ್ಪಿಸಬೇಕು ಎಂದು ವ್ಯಾಪಾರಿಗಳು ಒತ್ತಾಯಿಸಿದ್ದಾರೆ.

ಕೂಡ್ಲಿಗಿ ಪಟ್ಟಣದ ಎಪಿಎಂಸಿ ಪ್ರಹಾಂಗಣದಲ್ಲಿ ವಾರದ ಸಂತೆ ನಡೆಯುತ್ತಿರುವುದರಿಂದ ಬೆಂಗಳೂರು ರಸ್ತೆಯ ಎರಡು ಬದಿಯಲ್ಲಿ ನಿಂತಿರುವ ವಾಹನಗಳು
ಮಳೆಗಾಲ ಇರುವುದರಿಂದ ವ್ಯಾಪಾರಿಗಳಿಗೆ ಗ್ರಾಹಕರಿಗೆ ತೊಂದರೆಯಾಗದಂತೆ ಎಪಿಎಂಸಿಗೆ ಸ್ಥಳಾಂತರ ಮಾಡಲಾಗಿದೆ. ಮುಂದಿನ ದಿನಗಳಲ್ಲಿ ಸೂಕ್ತ ಜಾಗ ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದು
ವಿ.ಕೆ. ನೇತ್ರಾವತಿ ತಹಶೀಲ್ದಾರ್ ಕೂಡ್ಲಿಗಿ
ಶಾಸಕರು ಹಾಗೂ ತಹಶೀಲ್ದಾರರೊಂದಿಗೆ ಚರ್ಚೆ ಮಾಡಿ ಮತ್ತೆ ಅಂಜನೇಯ ಸ್ವಾಮಿ ಜಮೀನಿನಲ್ಲಿಯೇ ಸಂತೆ ಮುಂದುವರಿಸುವ ಪ್ರಯತ್ನ ಮಾಡುತ್ತವೆ
ಕಾವಲ್ಲಿ ಶಿವಪ್ಪ ನಾಯಕ ಪಟ್ಟಣ ಪಂಚಾಯ್ತಿ ಅಧ್ಯಕ್ಷ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.