
ಕೂಡ್ಲಿಗಿ: ತಾಲ್ಲೂಕಿನ ಮೊರಬದ ವೀರಭದ್ರೇಶ್ವರಸ್ವಾಮಿ ರಥೋತ್ಸವ ಗುರುವಾರ ಸಂಜೆ ವಿಜೃಂಭಣೆಯಿಂದ ಜರುಗಿತು. ಸಾವಿರಾರು ಭಕ್ತರು ರಥೋತ್ಸವದಲ್ಲಿ ಪಾಲ್ಗೊಂಡಿದ್ದರು.
ನಾಡಿನಾದ್ಯಂತ ಭಕ್ತರನ್ನು ಹೊಂದಿರುವ ಹಾಗೂ ಮನೆದೇವರೆಂದು ಪೂಜಿಸಲ್ಪಡುವ ವೀರಭದ್ರೇಶ್ವರ ಸ್ವಾಮಿಯ ರಥೋತ್ಸದ ಅಂಗವಾಗಿ ಗುರುವಾರ ಸಮಾಳ, ನಂದಿಕೋಲು, ಉರಿಮೆ ಮುಂತಾದ ವಾದ್ಯಗಳೊಂದಿಗೆ ಸ್ವಾಮಿಯ ಉತ್ಸವ ಮೂರ್ತಿಯನ್ನು ದೇವಸ್ಥಾನದಿಂದ ಪಲ್ಲಕ್ಕಿಯಲ್ಲಿ ಮೆರವಣಿಗೆಯಲ್ಲಿ ತರಲಾಯಿತು. ನಂತರ ರಥಕ್ಕೆ 3 ಬಾರಿ ಪ್ರದಕ್ಷಿಣೆ ಹಾಕಿದ ಸ್ವಾಮಿಯನ್ನು ರಥದಲ್ಲಿ ಪ್ರತಿಷ್ಠಾಪಿಸಲಾಯಿತು. ಇದೇ ಸಂದರ್ಭದಲ್ಲಿ ಹರಾಜು ಮಾಡಲಾದ ಸ್ವಾಮಿಯ ಪಟವನ್ನು ದಾವಣಗೆರೆ ಬಣಕಾರ ಕೊಟ್ರೇಶಪ್ಪ ₹2,60101ಕ್ಕೆ ಪಡೆದುಕೊಂಡರು.
ನಂತರ ನೆರೆದ ಭಕ್ತ ಸಮೂಹ ಸ್ವಾಮಿಗೆ ಜಯವಾಗಲಿ ಎಂದು ಜಯಘೋಷ ಕೂಗುತ್ತ ಅಲಂಕೃತ ರಥವನ್ನು ಎಳೆಯಿತು. ಭಕ್ತರು ರಥಕ್ಕೆ ಬಾಳೆಹಣ್ಣು, ಉತ್ತತ್ತಿಗಳನ್ನು ತೂರಿ ಭಕ್ತಿ ಮೆರೆದರು. ಪಾದಗಟ್ಟೆಯವರೆಗೆ ಸಾಗಿ, ನಂತರ ರಥವು ಮರಳಿ ಬಂದು ನೆಲೆ ನಿಲ್ಲುವ ಮೂಲಕ ರಥೋತ್ಸವ ಸಂಪನ್ನವಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.