ADVERTISEMENT

ಕೂಡ್ಲಿಗಿ | ರಾಜ್ಯದ ಮೊದಲ ಹುಣಸೆ, ಶೇಂಗಾ ಸಂಸ್ಕರಣಾ ಘಟಕ: ನಾಳೆ ಉದ್ಘಾಟನೆ

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ನಾಳೆ ಉದ್ಘಾಟನೆ

​ಪ್ರಜಾವಾಣಿ ವಾರ್ತೆ
Published 16 ಅಕ್ಟೋಬರ್ 2025, 6:54 IST
Last Updated 16 ಅಕ್ಟೋಬರ್ 2025, 6:54 IST
ಕೂಡ್ಲಿಗಿ ತಾಲ್ಲೂಕಿನ ಗುಡೇಕೋಟೆ ಹೊಬಳಿಯ ಕಸಾಪುರ ಬಳಿ ಸ್ಥಾಪನೆಯಾಗಿರುವ ಹುಣಸೆ ಹಣ್ಣು ಹಾಗೂ ಶೇಂಗಾ ಸಂಸ್ಕರಣಾ ಘಟಕ
ಕೂಡ್ಲಿಗಿ ತಾಲ್ಲೂಕಿನ ಗುಡೇಕೋಟೆ ಹೊಬಳಿಯ ಕಸಾಪುರ ಬಳಿ ಸ್ಥಾಪನೆಯಾಗಿರುವ ಹುಣಸೆ ಹಣ್ಣು ಹಾಗೂ ಶೇಂಗಾ ಸಂಸ್ಕರಣಾ ಘಟಕ   

ಕೂಡ್ಲಿಗಿ: ತಾಲ್ಲೂಕಿನ ಗುಡೇಕೋಟೆ ಹೋಬಳಿಯ ಕಸಾಪುರದ ಬಳಿ ಸ್ಥಾಪನೆ ಮಾಡಿರುವ ರಾಜ್ಯದ ಮೊದಲ ಹುಣಸೆ ಹಣ್ಣು ಹಾಗೂ ಶೇಂಗಾ ಸಂಸ್ಕರಣ ಘಟಕ (ಕೃಷಿ ಸಂಸ್ಕರಣೆಗಾಗಿ ರೈತರಿಗೆ ತರಬೇತಿ ಮತ್ತು ಸೌಲಭ್ಯಗಳ ಕೇಂದ್ರ)ವನ್ನು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಮ್ ಅವರು ಅಕ್ಟೋಬರ್ 17ರಂದು ಉದ್ಘಾಟನೆ ಮಾಡಲಿದ್ದಾರೆ.

ಶಾಸಕ ಡಾ.ಶ್ರೀನಿವಾಸ್ ಅವರ ಪ್ರಯತ್ನದ ಫಲವಾಗಿ ಕೇಂದ್ರ ಹಣಕಾಸು ಇಲಾಖೆ ಅನುದಾನ ಮತ್ತು ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ರಾಷ್ಟ್ರೀಯ ಬ್ಯಾಂಕ್(ನಬಾರ್ಡ್)ನ ₹4.50 ಕೋಟಿ ಅನುದಾನದಲ್ಲಿ ನಿರ್ಮಾಣ ಮಾಡಿರುವ ಈ ಘಟಕದಲ್ಲಿ ಹುಣಸೆ ಹಣ್ಣು ಹಾಗೂ ಶೇಂಗಾ ಸಂಸ್ಕರಣದ ಎರಡು ಪ್ರತ್ಯೇಕ ವಿಭಾಗಗಳಿವೆ.

ಒಂದು ಕಡೆ ಶೇಂಗಾ ಚಿಕ್ಕಿ ತಯಾರಿಕೆ, ಶೇಂಗಾ ಬೀಜಕ್ಕೆ ಮಸಾಲೇ ಹಾಕಿ ಪ್ಯಾಕ್ ಮಾಡುವುದು ಹಾಗೂ ಶೇಂಗಾ ಬೀಜದಿಂದ ಬೆಣ್ಣೆ ತೆಗೆಯುವ ಕೆಲಸ ಮಾಡಲಾಗುತ್ತದೆ. ಮತ್ತೊಂದು ಭಾಗದಲ್ಲಿ ಹುಣಸೆ ಹಣ್ಣಿನ ಸಿಪ್ಪೆ ತೆಗೆದು, ಬೀಜ ಹಾಗೂ ನಾರನ್ನು ಪ್ರತ್ಯೇಕಿಸಿ ಹಣ್ಣನ್ನು ಸಂಸ್ಕರಣ ಮಾಡಿ ಪ್ಯಾಕ್ ಮಾಡುವುದು. ಇದರ ಜೊತೆಗೆ ಹುಣಸೆ ಲ್ಯಾಹವನ್ನು(ಹುಳಿ) ತಯಾರಿಸಲಾಗುತ್ತದೆ. ಇದರ ನಿರ್ವಹಣೆಯನ್ನು ಗುಡೇಕೋಟೆಯ ರೈತ ಉತ್ಪನ್ನಗಳ ಸಂಘಕ್ಕೆ ನೀಡಲಾಗಿದ್ದು, ಯಂತ್ರ ನಿರ್ವಹಣೆಗೆ ಐಟಿಐ ಮಾಡಿದ ಇಬ್ಬರಿಗೆ ತರಬೇತಿ ನೀಡಲಾಗಿದ್ದು. ಶೇಂಗಾ ಹಾಗೂ ಹುಣಸೆ ಸಂಸ್ಕರಣ ಮಾಡಲು ರೈತ ಉತ್ಪಧಕ ಸಂಘದ ಸದಸ್ಯರಿಗೆ ತರಬೇತಿ ನೀಡಲಾಗಿದೆ.

ADVERTISEMENT

’ವಾರ್ಷಿಕವಾಗಿ ಅಂದಾಜು 400 ಟನ್ ಶೇಂಗಾ ಹಾಗೂ 200 ಟನ್ ಹುಣಸೆ ಹಣ್ಣನ್ನು ಬಳಕೆ ಮಾಡಿಕೊಳ್ಳಲಾಗುವುದು. ಈ ಭಾಗದಲ್ಲಿ ಶೇಂಗಾ ಹಾಗೂ ಹುಣಸೆ ಹಣ್ಣನ್ನು ಹೆಚ್ಚಾಗಿ ಬೆಳೆಯುವುದರಿಂದ ರೈತರಿಗೆ ವರದಾನವಾಗಲಿದೆ’ ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.

ಆಕ್ಟೋಬರ್ 17ರಂದು ನಡೆಯಲಿರುವ ಕಾರ್ಯಕ್ರಮಕ್ಕೆ ಘಟಕದ ಬಳಿ ಸಿದ್ಧತೆಗಳು ಭರದಿಂದ ಸಾಗಿದ್ದು, ಸಾವಿರಕ್ಕೂ ಹೆಚ್ಚು ಜನಕ್ಕೆ ಆಸನದ ವ್ಯವಸ್ಥೆ ಮಾಡಲಾಗುತ್ತಿದೆ. ಈಚೆಗೆ ಜಿಲ್ಲಾಧಿಕಾರಿ ಕವಿತ ಎಸ್ ಮನ್ನಿಕೇರಿ, ಹಾಗೂ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಜಾಹ್ನವಿ ಎಸ್. ಕಸಾಪುರಕ್ಕೆ ಭೇಟಿ ನೀಡಿ ಸ್ಥಳ ಪರಿಶೀಲನೆ ಮಾಡಿದ್ದಾರೆ.

ಕೂಡ್ಲಿಗಿ ತಾಲ್ಲೂಕಿನ ಗುಡೇಕೋಟೆ ಹೋಬಳಿಯ ಕಸಾಪುರ ಬಳಿ ಸ್ಥಾಪನೆ ಮಾಡಿರುವ ಹುಣಸೆ ಹಣ್ಣು ಹಾಗೂ ಶೇಂಗಾ ಸಂಸ್ಕರಣಾ ಘಟಕದಲ್ಲಿರುವ ಶೇಂಗಾ ಸಂಸ್ಕರಣಾ ಯಂತ್ರಗಳು
ಗುಡೇಕೋಟೆ ಭಾಗದಲ್ಲಿ ಹೆಚ್ಚಾಗಿ ಶೇಂಗಾ ಬೆಳೆಯಲಾಗುತ್ತಿದೆ ಹಾಗೂ ತಾಲ್ಲೂಕಿನಲ್ಲಿ ಸಾವಿರಾರು ಹಣಸೆ ಮರಗಳಿದ್ದು ರೈತರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಶೇಂಗಾ ಹಾಗೂ ಹುಣಸೆ ಹಣ್ಣಿನ ಸಂಸ್ಕರಣ ಘಟಕ ಸ್ಥಾಪನೆ ಮಾಡಲಾಗಿದೆ
ಡಾ. ಶ್ರೀನಿವಾಸ್ ಎನ್.ಟಿ. ಶಾಸಕರು ಕೂಡ್ಲಿಗಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.