ADVERTISEMENT

ಕುಡುತಿನಿ ಸಮಸ್ಯೆ ಬಿಜೆಪಿ ಕಾಲದ್ದು: ತುಕಾರಾಂ

​ಪ್ರಜಾವಾಣಿ ವಾರ್ತೆ
Published 18 ಸೆಪ್ಟೆಂಬರ್ 2025, 4:58 IST
Last Updated 18 ಸೆಪ್ಟೆಂಬರ್ 2025, 4:58 IST
ತುಕಾರಾಂ
ತುಕಾರಾಂ   

ಬಳ್ಳಾರಿ: ‘ಕುಡುತಿನಿಯಲ್ಲಿ ಕೈಗಾರಿಕೆಗಳಿಗಾಗಿ ಭೂಮಿ ವಶಪಡಿಸಿಕೊಳ್ಳುವಾಗ ಆಗಿರುವ ತಪ್ಪು ಬಿಜೆಪಿ ಕಾಲದ್ದು. ಅಂದು ಬಳ್ಳಾರಿ ರಿಪಬ್ಲಿಕ್‌ ವ್ಯವಸ್ಥೆ ಇತ್ತು. ಅದನ್ನು ಸರಿಪಡಿಸುವ ಕೆಲಸ ನಮ್ಮ ಸರ್ಕಾರ ಮಾಡುತ್ತಿದೆ’ ಎಂದು ಸಂಸದ ಇ. ತುಕಾರಾಂ ಹೇಳಿದರು. 

ಬಳ್ಳಾರಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ‘2010ರಲ್ಲಿ ಬಿಜೆಪಿ ಸರ್ಕಾರದ ಅವಧಿಯಲ್ಲಿ ಭೂಮಿ ವಶಪಡಿಸಿಕೊಳ್ಳಲಾಗಿತ್ತು. ಕೈಗಾರಿಕೆ ಹಾಕುವವರಿಗೆ ಭೂಮಿ ಕೊಟ್ಟು ಒಪ್ಪಂದ ಮಾಡಿಕೊಳ್ಳಿ ಎಂದು ನಾನು ರೈತರಿಗೆ ಅಂದೇ ಹೇಳಿದ್ದೆ’ ಎಂದರು.  

‘ಕಬ್ಬಿಣದ ಕಾರ್ಖಾನೆ ಆರಂಭಿಸಲು ಎನ್‌ಎಂಡಿಸಿಯು ಜಾಗ ಪಡೆದುಕೊಂಡಿದೆ. ಕಾರ್ಖಾನೆ ಆರಂಭಿಸುವಂತೆ ಕೇಂದ್ರ ಉಕ್ಕು ಸಚಿವ ಎಚ್‌.ಡಿ ಕುಮಾರಸ್ವಾಮಿ ಅವರೊಂದಿಗೂ ಕಳೆದ ವಾರ ಚರ್ಚಿಸಲಾಗಿದೆ. ಪಿಪಿಪಿ ವ್ಯವಸ್ಥೆಯಲ್ಲಿ ಕುಡುತಿನಿಯಲ್ಲಿ ಕಾರ್ಖಾನೆ ಆರಂಭಿಸಲು ಮನವಿ ಮಾಡಿದ್ದೇನೆ’ ಎಂದರು. 

ADVERTISEMENT

‘ಮಿತ್ತಲ್‌ ಕಂಪನಿ ವಿಶಾಖ ಪಟ್ಟಣಂನಲ್ಲಿ ಕಾರ್ಖಾನೆ ಆರಂಭಿಸಿರುವುದರಿಂದ ಬಳ್ಳಾರಿಯಲ್ಲಿ ಘಟಕ ಹಾಕುವುದಿಲ್ಲ ಎಂದು ಹೇಳಿದೆ. ಅಲ್ಲಿಗೆ ಯಾರು ಬರಲಿದ್ದಾರೆ ಎಂಬುದನ್ನು ನೋಡಬೇಕಾಗಿದೆ.  ಇದನ್ನೇ ಭೂಸಂತ್ರಸ್ತರಿಗೆ ಮನವರಿಕೆ ಮಾಡಿಕೊಟ್ಟಿದ್ದೇನೆ. ಭೂಸಂತ್ರಸ್ತರು ಉದ್ಯೋಗವನ್ನೂ ಕೇಳಿದ್ದಾರೆ. ₹5000 ಕೋಟಿ ಬಂಡವಾಳದ 1500 ಜನರಿಗೆ ಉದ್ಯೋಗ ಕಲ್ಪಿಸುವ ಕಾರ್ಖಾನೆಯೊಂದು ಈಗ ಬಂದಿದೆ. ಇದನ್ನೇ ರೈತರಿಗೆ ಹೇಳಿದ್ದೇನೆ. ಪರಿಹಾರವನ್ನು ಕಂಪನಿಯೊಂದಿಗೆ ಚರ್ಚಿಸಿ ಪಡೆಯುವಂತೆ ತಿಳಿಸಿದ್ದೇನೆ’ ಎಂದರು. 

‘ಜನಾರ್ದನ ರೆಡ್ಡಿ ಅವರ ಬ್ರಹ್ಮಿಣಿ ಕಂಪನಿ ಎಕರೆಗೆ ₹5 ಲಕ್ಷದಂತೆ ರೈತರಿಂದ ಭೂಮಿ ಖರೀದಿಸಿತು. ಕಂಪನಿಯನ್ನು ಬೇರೊಂದು ಕಂಪನಿಯಲ್ಲಿ ವಿಲೀನಗೊಳಿಸಿ ಭೂಮಿಯನ್ನೂ ಹಸ್ತಾಂತರ ಮಾಡಲಾಗಿದೆ. ಇಲ್ಲಿ ರಿಯಲ್‌ ಎಸ್ಟೇಟ್‌ ನಡೆದಿದೆ. ಉತ್ತಮ್‌ ಗಾಲ್ವಾ ಕಂಪನಿಯನ್ನು ಜನಾರ್ದನ ರೆಡ್ಡಿ ಕರೆತರಬೇಕು. ರೈತರಿಗೆ ಉತ್ತರ ಕೊಡಬೇಕು’ ಎಂದು ಅವರು ಆಗ್ರಹಿಸಿದರು.  

‘ಕೆಐಒಸಿಎಲ್‌ನ ದೇವದಾರಿ ಗಣಿಗೆ ಸಂಬಂಧಿಸಿದಂತೆ ನ್ಯಾಯಾಲಯದಲ್ಲಿ ಪ್ರಕರಣ ನಡೆಯುತ್ತಿದೆ. ಅದರ ಬಗ್ಗೆ ನಾನು ಈ ಹಂತದಲ್ಲಿ ಏನೂ ಮಾತನಾಡುವುದಿಲ್ಲ’ ಎಂದರು. 

ತುಕಾರಾಂ ಮಾತಿನ ಚಕಮಕಿ ‌

ಅರ್ಸೆಲರ್‌ ಮಿತ್ತಲ್‌ನ ಕೈಗಾರಿಕೆಗಾಗಿ ವಶಪಡಿಸಿಕೊಂಡಿರುವ ಭೂಮಿಯಲ್ಲಿ ಜೆಎಸ್‌ಡಬ್ಲ್ಯುಗೆ ನೀಡಿರುವುದನ್ನು ವಿರೋಧಿಸಿ, ಭೂಮಿ ಹಿಂದಿರುಗಿಸುವಂತೆ ಒತ್ತಾಯಿಸಿ ಪ್ರತಿಭಟನೆ ತೀವ್ರಗೊಳಿಸಿರುವ ಕುಡುತಿನಿ ಭೂ ಸಂತ್ರಸ್ತ ರೈತರನ್ನು ಸಂಸದ ಇ.ತುಕಾರಾಂ ಮಂಗಳವಾರ ಸಂಜೆ ಭೇಟಿಯಾದರು. 

ಈ ವೇಳೆ ಹೋರಾಟಗಾರರೊಂದಿಗೆ ತುಕಾರಾಂ ವಾಗ್ವಾದಕ್ಕೆ ಇಳಿದರು. ‘ಈ ಸಮಸ್ಯೆ ಸೃಷ್ಟಿಮಾಡಿದ್ದು ಜನಾರ್ದನ ರೆಡ್ಡಿ, ಹೋಗಿ ಅವರ ಬಳಿ ಇದನ್ನು ಹೇಳು’ ಎಂದು ರೈತರೊಬ್ಬರನ್ನು ಗದರಿದರು. ಇದಕ್ಕೆ ಆಕ್ರೋಶಗೊಂಡ ಹೋರಾಟಗಾರರು ತುಕಾರಾಂ ವಿರುದ್ಧ ತಿರುಗಿಬಿದ್ದ ಘಟನೆ ನಡೆಯಿತು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.