
ಕುರುಗೋಡು: ಇತಿಹಾಸ ಪ್ರಸಿದ್ಧ ಮತ್ತು ಬಳ್ಳಾರಿ ಜಿಲ್ಲೆಯ ಅತಿದೊಡ್ಡ ಜಾತ್ರೆ ಎನ್ನುವ ಹೆಗ್ಗಳಿಕೆಗೆ ಪಾತ್ರವಾದ ಕುರುಗೋಡು ದೊಡ್ಡಬಸವೇಶ್ವರ ಸ್ವಾಮಿಯ ಮಹಾ ರಥೋತ್ಸವದ ಸೊಬಗನ್ನು ಕಣ್ತುಂಬಿಕೊಳ್ಳಲು ಮಂಗಳವಾರ ಮಧ್ಯಾಹ್ನ ಜನ ಸಮೂಹವೇ ಸೇರಿತ್ತು.
ಸುಡುವ ಬಿಸಿಲಿನ ಪ್ರಖರತೆಯ ಮಡುವೆಯೂ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಭಾಗವಹಿಸಿ ರಥೋತ್ಸವದ ಮೆರಗು ಇಮ್ಮಡಿಗೊಳಿಸಿದರು. ಚಂದ್ರ ಗ್ರಹಣದ ಮಧ್ಯಾಹ್ನ 3.18 ರಿಂದ ಆರಂಭಗೊಳ್ಳುವ ಹಿನ್ನೆಲೆಯಲ್ಲಿ ಮಧ್ಯಾಹ್ನ 1.40ಕ್ಕೆ ಪ್ರಾರಂಭಗೊಂಡ ರಥೋತ್ಸವ 2.07ಕ್ಕೆ ಮುಕ್ತಾಯಗೊಂಡಿತು.
ಬಿಸಿಲನ ಜಳಕ್ಕೆ ತತ್ತರಿಸಿದ ಭಕ್ತರು ಹೆಚ್ಚುಹೊತ್ತು ನಿಲ್ಲಲಿಲ್ಲ. ರಥ ಸ್ವಸ್ಥಳದಲ್ಲಿ ನಿಂತ ಕೂಡಲೇ ಮನೆಗಳತ್ತ ಹೆಜ್ಜೆಹಾಕಿದರು.
ಮಹಾ ರಥೋತ್ಸವಕ್ಕೆ ಸಾಕ್ಷಿಯಾದ ಸುಮಾರು ಒಂದು ಲಕ್ಷಕ್ಕೂ ಅಧಿಕ ಭಕ್ತರು ದೊಡ್ಡಬಸವೇಶ್ವರ ಸ್ವಾಮಿಗೆ ಮೊಳಗಿಸಿದ ಜಯಘೋಷಗಳು ಮುಗಿಲುಮುಟ್ಟಿದವು.
ದೇವಸ್ಥಾನದಲ್ಲಿ ರಥೋತ್ಸವದ ಅಂಗವಾಗಿ ಬೆಳಿಗ್ಗೆಯಿಂದಲೇ ವಿಶೇಷ ಪೂಜೆಧಾರ್ಮಿಕ ವಿಧಿವಿಧಾನಗಳು ನೆರವೇರಿದವು. ಬೆಳಗಿನಜಾವ 3 ಗಂಟೆಯಿಂದಲೇ ದೇವರ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿತ್ತು. ರಾಜ್ಯದ ವಿವಿಧ ಜಿಲ್ಲೆಗಳಿಂದ ಬಂದಿದ್ದ ಸಹಸ್ರಾರು ಭಕ್ತರು ಬೆಳಿಗ್ಗೆಯಿಂದ ದೇವಸ್ಥಾನಕ್ಕೆ ಭೇಟಿನೀಡಿ ಸಾಲಿನಲ್ಲಿ ನಿಂತು ದೊಡ್ಡಬಸವೇಶ್ವರ ಸ್ವಾಮಿ ಸಮೀಪ ದರ್ಶನಪಡೆದರು. ಉಚಿತ ದರ್ಶನದ ಜತೆಗೆ ₹50 ಪಾವತಿಸಿದವರಿಗೆ ವಿಶೇಷ ದರ್ಶನದ ವ್ಯವಸ್ಥೆ ಮಾಡಲಾಗಿತ್ತು. ಉಚಿತ ದರ್ಶನಕ್ಕಿಂತ ವಿಶೇಷ ದರ್ಶನದ ಸಾಲಿನಲ್ಲಿ ಹೆಚ್ಚಿನ ಸಂಖ್ಯೆಯ ಭಕ್ತರು ಕಂಡುಬಂದರು.
ಭಕ್ತರು ದೇವಸ್ಥಾನದ ಆವರಣದಲ್ಲಿ ಸೂರ್ಯೋದಯಾದಿಮುನ್ನ ದೀಡ್ ನಮಸ್ಕಾರ ಹಾಕಿ ಹರಕೆ ತೀರಿಸಿದರು. ನೂರಾರು ಕಿಲೋಮೀಟರ್ ದೂರದಿಂದ ಪದಯಾತ್ರೆಯಲ್ಲಿ ಬಂದ ಭಕ್ತರು ಸ್ವಾಮಿಯ ದರ್ಶನ ಪಡೆದು ಧನ್ಯತಾಭಾವ ಮೆರೆದರು.
ಕೆಲವು ಭಕ್ತರು ಬೃಹತ್ ಗಾತ್ರದ ಹೂವಿನ ಮಾಲೆಗಳನ್ನು ಮೆರವಣಿಗೆಯಲ್ಲಿ ತಂದು ರಥಕ್ಕೆ ಅರ್ಪಿಸಿ ಭಕ್ತಿ ಮೆರೆದರು.
ಚಂದ್ರ ಗ್ರಹಣದ ಹಿನ್ನೆಲೆಯಲ್ಲಿ ಸಮಯಕ್ಕೆ ಮುನ್ನ ಮಧ್ಯಾಹ್ನ1.40ಕ್ಕೆ 60 ಅಡಿ ಎತ್ತರದ ವಿವಿಧ ಬಣ್ಣದ ಹೂಗಳು ಮತ್ತು ಅಲಂಕಾರಿಕ ವಸ್ತುಗಳು ಮತ್ತು ಗೊಂಬೆಗಳಿಂದ ಅಲಂಕೃತಗೊಂಡಿದ್ದ ರಥವನ್ನು ಎದುರುಬಸವಣ್ಣ ದೇವಸ್ಥಾನದ ವರೆಗೆ ಎಳೆದೊಯ್ದ ಭಕ್ತರು ಪುನಃ ಸ್ವಸ್ಥಳಕ್ಕೆ ಎಳೆದು ತಂದರು. ರಥ ಸಾಗಿದ ದಾರಿಯುದ್ದಕ್ಕೂ ಭಕ್ತರ ಹರ್ಷೋದ್ಘಾರ, ಶಿಳ್ಳೆ, ಕೇಕೆ ಮುಗಿಲುಮುಟ್ಟಿತ್ತು. ರಥೋತ್ಸವದಲ್ಲಿ ಪಾಲ್ಗೊಂಡಿದ್ದ ಅಗಣಿತ ಭಕ್ತರು ಹೂ ಹಣ್ಣು ಎಸೆದು ಕೃತಾರ್ಥರಾದರು. ಜಿಲ್ಲೆಯ ವಿವಿಧ ತಾಲ್ಲೂಕು ಸೇರಿದಂತೆ ನೆರೆಯ ರಾಯಚೂರು, ಕೊಪ್ಪಳ, ಚಿತ್ರದುರ್ಗ, ದಾವಣಗೆರೆ, ಹುಬ್ಬಳ್ಳಿ, ಧಾರವಾಡ, ಹಾವೇರಿ, ಬೆಳಗಾವಿ ಜಿಲ್ಲೆ, ಆಂಧ್ರ, ಮಹಾರಾಷ್ಟ್ರದ ಕೆಲವು ಪ್ರದೇಶಗಳಿಂದ ಬಂದಿದ್ದ ಭಕ್ತರು ರಥ ಬೀದಿಯ ಅಕ್ಕಪಕ್ಕದ ಕಟ್ಟಡಗಳ ಮೇಲೆ ನಿಂತು ರಥದ ಸಮೀಪ ದರ್ಶನ ಪಡೆದು ಪುನೀತರಾದರು.
ರಥದ ಸುತ್ತ ರೋಪ್ ನಿಂದ ಭದ್ರತೆ ಮಾಡುವ ಮೂಲಕ ಯಾವುದೇ ಅಹಿತಕರ ಘಟನೆ ಸಂಭವಿಸದಂತೆ ಪೊಲೀಸ್ ಇಲಾಖೆ ಮುನ್ನೆಚ್ಚರಿಗೆ ಕ್ರಮ ಕೈಗೊಂಡಿತು. ರಥ ಸಾಗುವ ರಸ್ತೆಯ ಎರಡು ಬದಿಯಲ್ಲಿ ಅಂಗಡಿಮುಂಗಟ್ಟುಗಳನ್ನು ತೆರುವುಗೊಳಿಸಿ ರಥ ಸುಗಮವಾಗಿ ಸಾಗಲು ವ್ಯವಸ್ಥೆ ಮಾಡಲಾಗಿತ್ತು.
ರಥದ ಕಳಸ ನೋಡಲು ಬಂದಿದ್ದ ಹೊಸದಾಗಿ ಮದುವೆಯಾದ ದಂಪತಿಗಳು ಕೈಕೈ ಹಿಡಿದು ಜಾತ್ರೆಯಲ್ಲಿ ಸುತ್ತಾಟ ನಡೆಸುತ್ತಿದ್ದ ದೃಶ್ಯಕಂಡುಬಂತು.
ಇಂದಿನಿಂದ ಒಂದುವಾರದ ವರೆಗೆ ಸುತ್ತಮುತ್ತಲಿನ ಹಳ್ಳಿಗಳ ಜನರು ಜಾತ್ರೆಯಲ್ಲಿ ಬಳೆ, ಪಾತ್ರೆ ಸಾಮಾನು, ಮುಠಾಯಿ, ಮಕ್ಕಳ ಆಟಿಕೆ ವಸ್ತುಗಳನ್ನು ಖರೀದಿಸಲು ಬರುವುದರಿಂದ ಪಟ್ಟಣ ಜನದಟ್ಟಣೆಯಿಂದ ಕೂಡಿರುತ್ತದೆ.
ಬಿಗಿ ಬಂದೋಬಸ್ತ್
ರಥೋತ್ಸವಕ್ಕೆ ಸೂಕ್ತ ಬಂದೋಬಸ್ತ್ ಕಲ್ಪಿಸಲು 1 ಡಿವೈಎಸ್‌ಪಿ 3 ಸಿಪಿಐ 8 ಪಿಎಸ್‍ಐ 38 ಎಎಸ್‍ಐ 169 ಪೊಲೀಸರು 11 ಮಹಿಳಾ ಪೊಲೀಸ್ ಮತ್ತು 80 ಗೃಹರಕ್ಷಕರು ಜತೆಗೆ ಒಂದು ಕೆಎಸ್‍ಆರ್‌ಪಿ ಮತ್ತು ಒಂದು ಡಿಎಆರ್ ತುಕಡಿ ನಿಯೋಜಿಸಲಾಗಿತ್ತು. ಸ್ವತ್ತು ಅಪರಾಧ ಪತ್ತೆ ತಂಡದಂತೆ 12 ಜನರನ್ನೊಳಗೊಂಡ ತಂಡ ಕಾರ್ಯನಿರ್ವಹಿಸಿತು ಎಂದು ಸಿಪಿಐ ಬಾಳನಗೌಡ.ಎಸ್.ಮಾನಶೆಟ್ಟಿ ಮತ್ತು ಪಿಎಸ್‍ಐ ಸುಪ್ರಿತ್ ತಿಳಿಸಿದರು.
ಸುದೀಪ್ –ದರ್ಶನ್ ಅಭಿಮಾನಿಗಳ ಪುಂಡಾಟ
ಕುರುಗೋಡು ಜಾತ್ರೆಯಲ್ಲಿ ಅಭಿಮಾನಿಗಳ ಎರಡು ಗುಂಪು ಪ್ರತ್ಯೇಕವಾಗಿ ದರ್ಶನ್ ಮತ್ತು ಸುದೀಪ್ ಅವರ ಚಿತ್ರಪಟಗಳನ್ನು ಕೈಯಲ್ಲಿ ಹಿಡಿದು ಪ್ರದರ್ಶನದಲ್ಲಿ ತೊಡಗಿ ರಥದ ಬಳಿ ತೆರಳಲು ಪ್ರಯತ್ನಿಸಿದರು. ಅಭಿಮಾನಿಗಳ ಎರಡು ಗುಂಪುಗಳ ಮಧ್ಯೆ ವಾಗ್ದಾದ ಜರುಗಿ ಕೈಕೈ ಮಿಲಾಯಿಲು ಮುಂದಾದ ಸಂದರ್ಭದಲ್ಲಿ ಪೊಲೀಸರು ಮಧ್ಯಪ್ರವೇಶಿಸಿ ಪರಿಸ್ಥಿತಿ ನಿಯಂತ್ರಿಸಿದ ಘಟನೆ ಮಂಗಳವಾರ ರಥೋತ್ಸವ ಸಂದರ್ಭದಲ್ಲಿ ಜರುಗಿತು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.