ADVERTISEMENT

ಕುರುಗೋಡು: ಬೆಳೆ ಹಾನಿಯಿಂದ ಹತಾಶೆ, ರೈತ ಆತ್ಮಹತ್ಯೆ

​ಪ್ರಜಾವಾಣಿ ವಾರ್ತೆ
Published 12 ಡಿಸೆಂಬರ್ 2021, 15:31 IST
Last Updated 12 ಡಿಸೆಂಬರ್ 2021, 15:31 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಕುರುಗೋಡು: ಅಕಾಲಿಕ ಮಳೆಯ ಪರಿಣಾಮ ಸಾಲಮಾಡಿ ಬೆಳೆದಿದ್ದ ಭತ್ತದ ಬೆಳೆ ನಷ್ಟವಾಗಿದ್ದರಿಂದ ಹತಾಶರಾದ ರೈತರೊಬ್ಬರು ಕ್ರಿಮಿನಾಶಕ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಸಿರುಗುಪ್ಪ ತಾಲ್ಲೂಕಿನ ದರೂರು ಕ್ಯಾಂಪಿನಲ್ಲಿ ಶನಿವಾರ ಜರುಗಿದೆ.

ವೀರೇಶ (42) ಮೃತ ರೈತ. ಪತ್ನಿಯ ಹೆಸರಿನಲ್ಲಿರುವ 2 ಎಕರೆ ಜಮೀನಿದ್ದು, 5 ಎಕರೆ ಹೊಲವನ್ನು ಗುತ್ತಿಗೆಗೆ ಹಿಡಿದು ಭತ್ತ ಬೆಳೆದಿದ್ದರು. ಪ್ರತಿ ಎಕರೆಗೆ 40 ಸಾವಿರ ಖರ್ಚು ಮಾಡಿದ್ದರು. ಪ್ರಗತಿ ಕೃಷ್ಣ ಗ್ರಾಮೀಣ ಬ್ಯಾಂಕ್ ನಲ್ಲಿ ಪತ್ನಿ ಹೆಸರಲ್ಲಿ ₹ 1ಲಕ್ಷ ಸಾಲ ಪಡೆದಿದ್ದಾರೆ. ಕ್ರಿಮಿನಾಶಕ, ರಸಗೊಬ್ಬ ಮತ್ತು ಕೃಷಿ ಖರ್ಚಿಗೆ ₹ 3 ಲಕ್ಷ ಕೈಸಾಲ ಮಾಡಿಕೊಂಡಿದ್ದು, ಒಟ್ಟು 4 ಲಕ್ಷ ಸಾಲವಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.

ಶನಿವಾರ ಸಂಜೆ 5.30ಕ್ಕೆ ಮನೆಯಲ್ಲಿ ಕ್ರಿಮಿನಾಶಕ ಸೇವಿಸಿದ್ದರು. ವಿಷಯ ತಿಳಿದ ಪತ್ನಿ ಮುತ್ತಮ್ಮ ರಾತ್ರಿ ಅವರನ್ನು ಬಳ್ಳಾರಿ ವಿಮ್ಸ್‌ಗೆ ಕರೆತಂದು ದಾಖಲಿಸಿದ್ದರು. ಚಿಕಿತ್ಸೆಗೆ ಸ್ಪಂದಿಸದೆ ರಾತ್ರಿ ವೀರೇಶ ಮೃತಪಟ್ಟಿದ್ದಾರೆ.

ADVERTISEMENT

ಅವರಿಗೆ ಎರಡು ಗಂಡು ಮತ್ತು ಒಂದು ಹೆಣ್ಣು ಮಕ್ಕಳಿವೆ. ಸಿರಿಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸಿರುಗುಪ್ಪ ತಹಶೀಲ್ದಾರ್ ಮಂಜುನಾಥ ಸ್ವಾಮಿ, ತೆಕ್ಕಲಕೋಟೆ ಸಿಪಿಐ ಕಾಳಿಕೃಷ್ಣ, ಸಿರಿಗೇರಿ ಪಿಎಸ್‍ಐ ಭರತ್ ಪ್ರಕಾಶ್ ಭೇಟಿನೀಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.