
ಕುರುಗೋಡು: ಇಲ್ಲಿನ ಪುರಸಭೆ ಕಚೇರಿಯಲ್ಲಿ ಶನಿವಾರ ಆಯೋಜಿಸಿದ್ದ ಬಜೆಟ್ ಪೂರ್ವಭಾವಿ ಸಭೆಯಲ್ಲಿ ಆಯವ್ಯಯ ಕುರಿತು ಯಾವುದೇ ಮಹತ್ವದ ವಿಷಯಗಳು ಚರ್ಚೆಯಾಗಲಿಲ್ಲ. ಬದಲಾಗಿ, ಸದಸ್ಯರು ತಮ್ಮ ವಾರ್ಡ್‍ಗಳ ಸಮಸ್ಯೆಗಳ ಕುರಿತು ಚರ್ಚಿಸಿದರು.
ಪಟ್ಟಣದ ಸಾರ್ವಜನಿಕರಿಗೆ ಅಗತ್ಯವಿರುವ ಸೌಲಭ್ಯ, ಕೈಗೊಳ್ಳಬೇಕಾದ ಕಾಮಗಾರಿಗಳ ವಿಷಯಗಳ ಕುರಿತು ಚರ್ಚೆ ನಡೆಯದ ಕಾರಣ, ಸಭೆಯಲ್ಲಿ ಭಾಗವಹಿಸಿದ್ದ ಮುಖಂಡರು ಬೇಸರ ವ್ಯಕ್ತಪಡಿಸಿದರು.
‘ಮುಖ್ಯವೃತ್ತದ ಸುತ್ತ ವರ್ತಕರು ಕೊಳೆತ ಹಣ್ಣು ಮತ್ತು ತರಕಾರಿ ಬೀದಿಗೆ ಬಿಸಾಡುತ್ತಿದ್ದಾರೆ. ಇದರಿಂದ ವಾತಾವರಣ ಕಲುಷಿತವಾಗುತ್ತಿದೆ. ಅದನ್ನು ತಿನ್ನಲು ಬಿಡಾಡಿ ದನಗಳು ಬರುತ್ತಿವೆ. ಈ ಬಗ್ಗೆ ಪುರಸಭೆ ಸಿಬ್ಬಂದಿ ಮೌನವಹಿಸಿರುವುದು ಏಕೆ’ ಎಂದು ಸದಸ್ಯ ಮಂಜುನಾಥ ಪ್ರಶ್ನಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಪುರಸಭೆ ಅಧ್ಯಕ್ಷ ಶೇಖಣ್ಣ, ‘ನಿತ್ಯ ಬೆಳಿಗ್ಗೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಸ್ವಚ್ಛತೆ ಬಗ್ಗೆ ಅರಿವು ಮೂಡಿಸಬೇಕು. ನಿಯಮ ಪಾಲಿಸದವರಿಗೆ ದಂಡ ವಿಧಿಸಿ’ ಎಂದು ಆರೋಗ್ಯ ನಿರೀಕ್ಷಕರಿಗೆ ಸೂಚಿಸಿದರು.
‘ಕಳೆದ ಬಾರಿ ಬಜೆಟ್‍ನಲ್ಲಿ ಅನುಮೋದನೆ ಪಡೆದ ಅಭಿವೃದ್ಧಿ ಕಾಮಗಾರಿಗಳು ಈವರೆಗೂ ಅನುಷ್ಠಾನಗೊಂಡಿಲ್ಲ. ಬಜೆಟ್ ಮಂಡನೆಯು ನೆಪ ಮಾತ್ರಕ್ಕೆ ಎಂಬಂತಾಗಿದೆ’ ಸದಸ್ಯ ನರಸಪ್ಪ ಯಾದವ್ ಬೇಸರ ವ್ಯಕ್ತಪಡಿಸಿದರು.
ಉದ್ಯಾನದ ಜಾಗ ಹಸ್ತಾಂತರ ಬೇಡ: ‘ಮುಖ್ಯವೃತ್ತದಲ್ಲಿರುವ ಈಶ್ವರ ಉದ್ಯಾನದ ಜಾಗವನ್ನು ಬಸ್‌ನಿಲ್ದಾಣ ನಿರ್ಮಾಣಕ್ಕೆ ನೀಡಬಾರದು. ಕೊಟ್ಯಂತರ ರೂಪಾಯಿ ಬೆಲೆ ಇರುವ ಸ್ಥಳವನ್ನು ಸದ್ಬಳಕೆ ಮಾಡಿಕೊಳ್ಳಬೇಕು. ಪ್ರಯಾಣಿಕರ ತಂಗುದಾಣ, ಸಾರ್ವಜನಿಕ ಶೌಚಾಲಯ, ವಾಣಿಜ್ಯ ಮಳಿಗೆ ನಿರ್ಮಿಸುವುದು ಸೂಕ್ತ’ ಎಂದು ಸದಸ್ಯರಾದ ನರಸಪ್ಪ ಯಾದವ್, ನಾಗಭೂಷಣಂ, ಲಕ್ಷ್ಮಿ, ವೀರೇಶ್ ಮತ್ತು ಗುರುಮೂರ್ತಿ ಒತ್ತಾಯಿಸಿದರು.
ವಿವಿಧ ವಾರ್ಡ್‍ಗಳಲ್ಲಿ ನೀರು ಸರಬರಾಜು ಕೊಳವೆ ಅಳವಡಿಕೆಗಾಗಿ ಅಗೆದ ರಸ್ತೆಗಳನ್ನು ಸಮರ್ಪಕವಾಗಿ ಮುಚ್ಚದಿರುವುದು, ಚರಂಡಿ ಇಲ್ಲದೆ ಕಲುಷಿತ ನೀರು ರಸ್ತೆಯಲ್ಲಿ ಹರಿಯುವುದು, ಮಾಂಸ ಮಾರುಕಟ್ಟೆ ಸ್ಥಳಾಂತರ, ಶಿಥಿಲಗೊಂಡ ವಿದ್ಯುತ್ ಕಂಬಗಳ ಬದಲಾವಣೆ, ಬೀದಿನಾಯಿ, ಕೋತಿ ಮತ್ತು ಬಿಡಾಡಿ ದನಗಳ ಹಾವಳಿ ನಿಯಂತ್ರಣ ಕುರಿತು ಚರ್ಚೆ ನಡೆಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.