ADVERTISEMENT

ಜನರಿಗೆ ಬೀದಿ ನಾಯಿಗಳ ಭಯ: ಕುರುಗೋಡಿನಲ್ಲಿ 11 ತಿಂಗಳಲ್ಲಿ 1124 ಜನರ ಮೇಲೆ ದಾಳಿ

ವಾಗೀಶ ಕುರುಗೋಡು
Published 12 ಡಿಸೆಂಬರ್ 2025, 6:27 IST
Last Updated 12 ಡಿಸೆಂಬರ್ 2025, 6:27 IST
ಕುರುಗೋಡಿನ ಮುಖ್ಯರಸ್ತೆಯಲ್ಲಿ ಗುಂಪಾಗಿ ಸಂಚರಿಸುತ್ತಿರುವ ಬೀದಿನಾಯಿಗಳು
ಕುರುಗೋಡಿನ ಮುಖ್ಯರಸ್ತೆಯಲ್ಲಿ ಗುಂಪಾಗಿ ಸಂಚರಿಸುತ್ತಿರುವ ಬೀದಿನಾಯಿಗಳು   

ಕುರುಗೋಡು: ತಾಲ್ಲೂಕಿನಲ್ಲಿ ಬೀದಿನಾಯಿಗಳ ಹಾವಳಿ ಹೆಚ್ಚಾಗಿದ್ದು, ಜನರು ಭಯಭೀತರಾಗಿದ್ದಾರೆ. ಹೋಟೆಲ್, ಗೂಡಂಗಡಿ, ರಸ್ತೆ, ಶಾಲಾ ಕಾಲೇಜುಗಳ ಬಳಿ ಗುಂಪು ಗುಂಪಾಗಿ ಓಡಾಡುವ ಬೀದಿ ನಾಯಿಗಳು ಏಕಾಏಕಿ ದಾಳಿ ನಡೆಸಿ ಜನರಲ್ಲಿ ಭಯ ಹುಟ್ಟಿಸುತ್ತಿದೆ.

ಕಳೆದ ಮೂರು ವರ್ಷಗಳ ಹಿಂದೆ ತಾಲ್ಲೂಕಿನ ಬಾದನಹಟ್ಟಿ ಗ್ರಾಮದಲ್ಲಿ ಸುರಕ್ಷಿತಾ (3) ಮತ್ತು ಶಾಂತಕುಮಾರ್ (7) ನಾಯಿ ಕಡಿತದಿಂದ ಮೃತಪಟ್ಟಿದ್ದರು. ಅದಾದ ಬಳಿಕವೂ ನಾಯಿ ಕಡಿತದ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿರುವುದು ಆತಂಕಕ್ಕೆ ಕಾರಣವಾಗಿದೆ. 

ಜನವರಿ ತಿಂಗಳಿಂದ ನವೆಂಬರ್‌ವರೆಗೆ ಇಲ್ಲಿನ ಸಮುದಾಯ ಆರೋಗ್ಯ ಕೇಂದ್ರ ವ್ಯಾಪ್ತಿಯಲ್ಲಿ ಒಟ್ಟು 678 ಸೇರಿ ತಾಲ್ಲೂಕಿನಲ್ಲಿ ಒಟ್ಟು 1,124 ಜನರು ಬೀದಿನಾಯಿ ಕಡಿತಕ್ಕೆ ಒಳಗಾಗಿದ್ದಾರೆ ಎಂದು ಆರೋಗ್ಯ ಇಲಾಖೆ ಮಾಹಿತಿಯಿಂದ ಗೊತ್ತಾಗಿದೆ. 

ADVERTISEMENT

ಆಹಾರ ಪದಾರ್ಥ ಕೈಯಲ್ಲಿ ಹಿಡಿದುಕೊಂಡಿರುವ ಚಿಕ್ಕಮಕ್ಕಳನ್ನೇ ಬೀದಿ ನಾಯಿಗಳು ಗುರಿಯಾಗಿಸಿಕೊಳ್ಳುತ್ತಿರುವುದು ಜನರನ್ನು ಮತ್ತಷ್ಟು ಭಯಭೀತರನ್ನಾಗಿಸಿದೆ. 

ಹೆಚ್ಚು ಸಂಚಾರ ದಟ್ಟಣೆಯಿರುವ ರಸ್ತೆಗಳಲ್ಲಿ ಗುಂಪುಗುಂಪಾಗಿ ಓಡಾಡುವ ಬೀದಿ ನಾಯಿಗಳು ಏಕಾಏಕಿ ಅಡ್ಡಬರುತ್ತವೆ. ಇದರಿಂದ ವಾಹನ ಸವಾರರರು ಬಿದ್ದು ಕೈಕಾಲು ಮುರಿದುಕೊಂಡ ಪ್ರಕರಣಗಳು ಜರುಗಿವೆ.

ಪಶುಸಂಗೋಪನೆ ಇಲಾಖೆ 2019ರಲ್ಲಿ ನಡೆಸಿದ ಗಣತಿ ಪ್ರಕಾರ ಕುರುಗೋಡು ಪಟ್ಟಣದಲ್ಲಿ 406 ಮತ್ತು ತಾಲ್ಲೂಕಿನಲ್ಲಿ 3,175 ಬೀದಿನಾಯಿಗಳಿವೆ ಎಂದು ಇಲಾಖೆಯ ಸಹಾಯಕ ನಿರ್ದೇಶಕ ಪ್ರದೀಪ್ ಮಾಹಿತಿ ನೀಡಿದರು. ಆದರೆ ಈಗ ಬೀದಿ ನಾಯಿಗಳ ಸಂಖ್ಯೆ ದುಪ್ಪಟ್ಟಾಗಿದೆ ಎನ್ನುತ್ತಾರೆ ಜನ. 

ಬೀದಿನಾಯಿ ಕಡಿತಕ್ಕೆ ಒಳಗಾದವರು ವೈದ್ಯರ ಸಲಹೆಯಂತೆ ಸಕಾಲಕ್ಕೆ ಸರ್ಕಾರಿ ಆಸ್ಪತ್ರೆಯಲ್ಲಿ ಉಚಿತವಾಗಿ ನೀಡುವ ಚುಚ್ಚುಮದ್ದು ಹಾಕಿಸಿಕೊಳ್ಳಬೇಕು. ಬೇಜವಾಬ್ದಾರಿ ತೋರಿದರೆ ಪ್ರಾಣ ಕಳೆದುಕೊಳ್ಳಬೇಕಾದ ಪರಿಸ್ಥಿತಿ ನಿರ್ಮಾಣವಾಗಬಹುದು ಎಂದು ತಾಲ್ಲೂಕು ಆರೋಗ್ಯಾಧಿಕಾರಿ ಡಾ. ಮಂಜುನಾಥ ಜವಳಿ ಸಲಹೆ ನೀಡಿದ್ದಾರೆ.  

ನಿರ್ವಹಣೆ ಮಾಡುವವರಿಗೆ ಸ್ವಾಗತ
ಸರ್ಕಾರಿ ಖಾಸಗಿ ಶಿಕ್ಷಣ ಸಂಸ್ಥೆಗಳು ಆಸ್ಪತ್ರೆ ಕ್ರೀಡಾ ಸಂಕೀರ್ಣ ಬಸ್ ನಿಲ್ದಾಣಗಳಲ್ಲಿ ಬೀದಿನಾಯಿಗಳಿರುವ ಬಗ್ಗೆ ಮಾಹಿತಿ ನೀಡುವಂತೆ ಮುಖ್ಯಸ್ಥರಿಗೆ ಸೂಚಿಸಲಾಗಿದೆ. ಸಂತಾನ ನಿಯಂತ್ರಣ ಶಸ್ತ್ರಚಿಕಿತ್ಸೆ ನಡೆಸಲು ಟೆಂಡರ್ ಕರೆಯಲಾಗಿದೆ. ಪ್ರಕ್ರಿಯೆ ಪೂರ್ಣಗೊಂಡ ನಂತರ ಶಸ್ತ್ರಚಿಕಿತ್ಸೆ ಪ್ರಕ್ರಿಯೆ ಪ್ರಾರಂಭಗೊಳ್ಳಲಿದೆ. ಸ್ವಯಂ ಪ್ರೇರಣೆಯಿಂದ ಬೀದಿನಾಯಿಗಳನ್ನು ದತ್ತುಪಡೆಯಲು ಇಚ್ಚಿಸುವವರು ಕಚೇರಿಯಲ್ಲಿ ಸಂಪರ್ಕಿಸಬಹುದು ಎಂದು ಪುರಸಭೆ ಮುಖ್ಯಾಧಿಕಾರಿ ದತ್ತಾತ್ರೇಯ ಹೆಗಡೆ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.