ADVERTISEMENT

‘ಮಹದೇವ ಮೈಲಾರ’ ಮೈದಾನದಲ್ಲಿ ಮೂಲಸೌಕರ್ಯ ಕೊರತೆ: ಅಭಿವೃದ್ಧಿ ಕಾಣದ ಕ್ರೀಡಾಂಗಣ

​ಪ್ರಜಾವಾಣಿ ವಾರ್ತೆ
Published 30 ಜೂನ್ 2025, 5:43 IST
Last Updated 30 ಜೂನ್ 2025, 5:43 IST
ಕೂಡ್ಲಿಗಿ ಪಟ್ಟಣದ ಮಹದೇವ ಮೈಲಾರ ಕ್ರೀಡಾಂಗಣದಲ್ಲಿನ ಬಾಸ್ಕೆಟ್ ಬಾಲ್ ಅಂಗಣದ ಸುತ್ತ ಗಿಡಗಳು ಬೆಳೆದಿವೆ
ಕೂಡ್ಲಿಗಿ ಪಟ್ಟಣದ ಮಹದೇವ ಮೈಲಾರ ಕ್ರೀಡಾಂಗಣದಲ್ಲಿನ ಬಾಸ್ಕೆಟ್ ಬಾಲ್ ಅಂಗಣದ ಸುತ್ತ ಗಿಡಗಳು ಬೆಳೆದಿವೆ   

ಕೂಡ್ಲಿಗಿ: ಪಟ್ಟಣದಲ್ಲಿರುವ ತಾಲ್ಲೂಕು ಕ್ರೀಡಾಂಗಣವು ಮೂಲಸೌಕರ್ಯಗಳ ಕೊರತೆಯಿಂದ  ಸೊರುಗುತ್ತಿದೆ. ಸೂಕ್ತ ನಿರ್ವಹಣೆ ಇಲ್ಲದೆ ಕಳಾಹೀನವಾಗಿದೆ.

ಮುಂದಿನ ಪೀಳಿಗೆಯ ಹಿತಾಸಕ್ತಿಗಾಗಿ ರೈತರು ಬೆಲೆ ಬಾಳುವ ಜಮೀನುಗಳನ್ನು ಕ್ರೀಡಾಂಗಣಕ್ಕಾಗಿ ದಾನ ನೀಡಿದ್ದಾರೆ. ಜನರಲ್ ಕಾರ್ಯಪ್ಪ ಅವರಿಂದ ಉದ್ಘಾಟನೆಗೊಂಡ ‘ಮಹದೇವ ಮೈಲಾರ’ ಹೆಸರಿನ ಕ್ರೀಡಾಂಗಣವು ಅಭಿವೃದ್ಧಿಯನ್ನೇ ಕಂಡಿಲ್ಲ.

ಸುಮಾರು 8 ಎಕರೆಯ ಮೈದಾನಗದಲ್ಲಿ ಅಭ್ಯಾಸ ನಡೆಸಿದ ಅನೇಕ ಕ್ರೀಡಾಪಟುಗಳು ವಿವಿಧ ಸ್ಪರ್ಧೆಗಳಲ್ಲಿ ರಾಜ್ಯಮಟ್ಟದಲ್ಲಿ ಜಯ ಗಳಿಸಿದ್ದಾರೆ. ಇಂತಹ ಮೈದಾನಕ್ಕೀಗ ಸೌಕರ್ಯ ಮರೀಚಿಕೆಯಾಗಿದೆ. ವರ್ಷಕ್ಕೊಮ್ಮ ನಡೆಯುವ ವಲಯ ಹಾಗೂ ತಾಲ್ಲೂಕುಮಟ್ಟದ ಕ್ರೀಡಾಕೂಟಗಳಿಗೆ ಬೇಕಾದಷ್ಟು ಅಂಗಣಗಳನ್ನು ಮಾತ್ರ ಶಿಕ್ಷಣ ಇಲಾಖೆ ಸಿದ್ಧಪಡಿಸುತ್ತದೆ. ನಂತರ ಕ್ರೀಡಾಂಗಣವನ್ನು ಮರೆಯಲಾಗುತ್ತಿದೆ. ಲಕ್ಷಾಂತರ ರೂಪಾಯಿ ವೆಚ್ಚ ಮಾಡಿ ಸಿದ್ಧಪಡಿಸಿದ್ದ ರನ್ನಿಂಗ್ ಟ್ರ್ಯಾಕ್ ಸಂಪೂರ್ಣ ಹಾಳಾಗಿದೆ.

ADVERTISEMENT

2021ನೇ ಸಾಲಿನಲ್ಲಿ ಎನ್.ವೈ. ಗೋಪಾಲಕೃಷ್ಣ ಅವರು ಶಾಸಕರಾಗಿದ್ದಾಗ ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯ (ಕೆಕೆಆರ್‌ಡಿಬಿ) ₹3 ಕೋಟಿ ಅನುದಾನದಲ್ಲಿ ಕ್ರೀಡಾಂಗಣದ ಕೆಲ ಭಾಗದಲ್ಲಿ ಪ್ರೇಕ್ಷಕರ ಗ್ಯಾಲರಿ ನಿರ್ಮಿಸಿ, ಮೇಲೆ ಶೀಟ್ ಹಾಕಿಸಲಾಗಿತ್ತು. ಇದೇ ಅನುದಾನದಲ್ಲಿ ಬಾಸ್ಕೆಟ್ ಬಾಲ್ ಅಂಗಣ ನಿರ್ಮಾಣ ಮಾಡಲಾಗಿತ್ತು. ಇದರ ಸುತ್ತ ಹಾಕಿರುವ ತಂತಿ ಜಾಲರ ಕಿತ್ತು ಹೋಗಿದೆ.

ಕ್ರೀಡಾಂಗಣದಲ್ಲಿ ಆಧುನಿಕ ಶೌಚಾಲಯ ನಿರ್ಮಿಸಿ, ಶುದ್ಧ ಕುಡಿಯುವ ನೀರಿನ ಸೌಲಭ್ಯ ಕಲ್ಪಿಸಬೇಕೆಂಬ ಸಾರ್ವಜನಿಕರ ಹಾಗೂ ಕ್ರೀಡಾಪಟುಗಳ ಬೇಡಿಕೆ ಈವರೆಗೆ ಈಡೇರಿಲ್ಲ. ದೈಹಿಕ ಶಿಕ್ಷಣ  ಶಿಕ್ಷಕ ಬಿಂದು ಮಾಧವರಾವ್ ನೇತೃತ್ವದಲ್ಲಿ ವಿದ್ಯಾರ್ಥಿಗಳು ನಿರ್ಮಿಸಿದ್ದ ಸ್ವಾತಂತ್ರ್ಯ ಭವನವನ್ನು ಕೆಡವಲಾಗಿದ್ದು, ನೂತನ ಕಟ್ಟಡ  ನಿರ್ಮಾಣ ಮಾಡುವ ಯೋಜನೆ ನನೆಗುದಿಗೆ ಬಿದ್ದಿದೆ.

ಕೂಡ್ಲಿಗಿ ಪಟ್ಟಣದ ಮಹದೇವ ಮೈಲಾರ ಕ್ರೀಡಾಂಗಣದಲ್ಲಿರುವ ಹೈಮಾಸ್ಟ್‌ ವಿದ್ಯುತ್‌ ಕಂಬದ ವೈರ್‌ಗಳು ಹೊರಬಂದಿವೆ 

ಅಪಾಯವೊಡ್ಡುವ ವಿದ್ಯುತ್ ತಂತಿ: ಕ್ರೀಡಾಂಗಣಕ್ಕೆ ಬೆಳಕು ನೀಡಲು ಗಾಂಧಿ ಚಿತಾಭಸ್ಮವಿರುವ ಹುತಾತ್ಮರ ಸ್ಮಾರದ ಮುಂದೆ ಹಾಗೂ ಧ್ವಜಸ್ತಂಭದ ಪಕ್ಕದಲ್ಲಿ ಹೈಮಾಸ್ಟ್‌ ಕಂಬಗಳನ್ನು ಹಾಕಲಾಗಿದೆ. ಅವುಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸುವ ಪೆಟ್ಟಿಗೆಯ ಬಾಗಿಲು ಮುರಿದುಹೋಗಿದೆ. ಒಳಗಿನ ತಂತಿಗಳು ಹೊರಬಿದ್ದಿವೆ.

ಇವುಗಳ ಪಕ್ಕದಲ್ಲೇ ಆಟೋಟಗಳು ನಡೆಯುತ್ತವೆ. ಆಕಸ್ಮಿಕವಾಗಿ ಯಾರಾದರೂ ಅವುಗಳನ್ನು ಮುಟ್ಟಿದರೆ ಅಪಾಯ ಕಟ್ಟಿಟ್ಟಬುತ್ತಿ ಎಂಬಂತಾಗಿದೆ. ಇನ್ನಾದರೂ ಅಧಿಕಾರಿಗಳು, ಜನಪ್ರತಿನಿಧಿಗಳು ಎಚ್ಚೆತ್ತುಕೊಂಡು ಕ್ರಿಡಾಂಗಣಕ್ಕೆ ಮೂಲಸೌಕರ್ಯ ಕಲ್ಪಿಸಬೇಕು ಎನ್ನುವುದು ಕ್ರೀಡಾ ಪ್ರೇಮಿಗಳ ಒತ್ತಾಯ.

ಕ್ರೀಡಾಂಗಣಕ್ಕೆ ಕಲುಷಿತ ನೀರು ಬಿಡದಂತೆ ಆಸ್ಪತ್ರೆ ಅಧಿಕಾರಿಗಳಿಗೆ ನೋಟಿಸ್ ನೀಡಲಾಗಿತ್ತು. ಇದು ಮುಂದುವರಿದಿದ್ದು ಮತ್ತೆ ನೋಟಿಸ್ ನೀಡಲಾಗುವುದು.
– ಟಿ. ಬಸವರಾಜ, ಉಪ ಪ್ರಾಚಾರ್ಯ ಸರ್ಕಾರಿ ಪದವಿ ಪೂರ್ವ ಕಾಲೇಜು (ಪ್ರೌಢ ಶಾಲಾ ವಿಭಾಗ)

ಕ್ರೀಡಾಂಗಣಕ್ಕೆ ಕಲುಷಿತ ನೀರು

ಕ್ರೀಡಾಂಗಣದ ಪಕ್ಕದಲ್ಲಿರುವ ಸಾರ್ವಜನಿಕ ಅಸ್ಪತ್ರೆಯ ಕಲುಷಿತ ನೀರು ಮೈದಾನಕ್ಕೆ ಬರುತ್ತಿದೆ. ಇದರಿಂದ ವಾಯುವಿಹಾರಕ್ಕೆ ಬರುವವರು ಮೂಗು ಮುಚ್ಚಿಕೊಂಡು ಓಡಾಡಬೇಕಾದ ಪರಿಸ್ಥಿತಿ ಇದೆ. ಈ ಬಗ್ಗೆ ಆಸ್ಪತ್ರೆ ಅಧಿಕಾರಿಗಳಿಗೆ ಹೇಳಿದರೂ ಪ್ರಯೋಜನವಾಗಿಲ್ಲ ಎಂದು ನಾಗರಿಕರು ದೂರುತ್ತಾರೆ. ಬಾಸ್ಕೆಟ್ ಬಾಲ್ ಅಂಗಣ ಸುತ್ತ ಸೇರಿದಂತೆ ಕ್ರೀಡಾಂಗಣದ ಅನೇಕ ಕಡೆ ಗಿಡ ಗಂಟಿಗಳು ಬೆಳೆದಿದ್ದು ವಿಷ ಜಂತುಗಳ ಅವಾಸಸ್ಥಾನವಾಗಿವೆ. ಕ್ರೀಡಾಪಟುಗಳು ಆತಂಕದಿಂದಲೇ ಕ್ರೀಡಾಭ್ಯಾಸದಲ್ಲಿ ತೊಡಗಬೇಕಿದೆ. ಬಯಲು ರಂಗಮಂದಿರವು ಕಸದಿಂದ ತುಂಬಿದ್ದು ಗಬ್ಬೆದ್ದು ನಾರುತ್ತಿದೆ. ರಾಷ್ಟ್ರೀಯ ಹಬ್ಬಗಳು ಬಂದಾಗ ಮಾತ್ರ ಸ್ವಚ್ಛತಾ ಕಾರ್ಯ ನಡೆಯುತ್ತದೆ.

ಕೂಡ್ಲಿಗಿಯಮಹದೇವ ಮೈಲಾರ ಕ್ರೀಡಾಂಗಣದಲ್ಲಿ ಸಾರ್ವಜನಿಕ ಆಸ್ಪತೆಯ ಕೊಳಚೆ ನೀರು ಹರಿಯಿತು

ಯಾರು? ಏನಂತಾರೆ?

ಗಾಂಧಿ ಚಿತಾಭಸ್ಮವಿರುವ ಹುತಾತ್ಮರ ಸ್ಮಾರಕಕ್ಕೆ ಅಪಮಾನವಾಗುವಂತೆ ಮಹಾದೇವ ಮೈಲಾರ ಕ್ರೀಡಾಂಗಣ ಹಲವು ಸಮಸ್ಯೆಗಳನ್ನು ಎದುರಿಸುತ್ತಿದೆ. ಈ ಸಮಸ್ಯೆಗಳನ್ನು ನಿವಾರಿಸುವತ್ತ ಶಾಸಕರು ಅಧಿಕಾರಿಗಳು ಗಮನ ಹರಿಸಬೇಕು.
– ಎಂ. ವೆಂಕಟೇಶ್, ಪ್ರಧಾನ ಕಾರ್ಯದರ್ಶಿ ಜಿಲ್ಲಾ ವಾಲಿಬಾಲ್ ಸಂಸ್ಥೆ 
ಆಸ್ಪತ್ರೆ ಕಟ್ಟಡವನ್ನು ವಿಸ್ತರಿಸುವ ಯೋಜನೆ ಇದ್ದು ಕಟ್ಟಡದ ನಕ್ಷೆ ಪೂರ್ಣಗೊಂಡ ತಕ್ಷಣ ಆಸ್ಪತ್ರೆಯ ಕೊಳಚೆ ನೀರು ಹರಿಯಲು ಒಳ ಚರಂಡಿ ಸಂಪರ್ಕ ಕಲ್ಪಿಸಲಾಗುವುದು. ಇದಕ್ಕಾಗಿ ಅನುದಾನವನ್ನೂ ಕಾಯ್ದಿರಿಸಲಾಗಿದೆ.
– ಡಾ. ಶ್ರೀನಿವಾಸ್ ಎನ್.ಟಿ. ಶಾಸಕರು, ಕೂಡ್ಲಿಗಿ
ಅನೇಕ ಐತಿಹಾಸಿಕ ಕ್ಷಣಗಳಿಗೆ ಸಾಕ್ಷಿಯಾಗಿರುವ ಕ್ರೀಡಾಂಗಣವನ್ನು ಸಂಪೂರ್ಣವಾಗಿ ಅಭಿವೃದ್ಧಿ ಮಾಡಿ ಕ್ರೀಡಾಪಟುಗಳಿಗೆ ಅನುಕೂಲ ಮಾಡಿಕೊಡಬೇಕು.
– ಅಜೇಯ ಎನ್., ಸ್ಥಳೀಯ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.