ಕಂಪ್ಲಿ: ಪಟ್ಟಣದ ದಿನವಹಿ, ವಾರದ ತರಕಾರಿ ಸಂತೆ ಮಾರುಕಟ್ಟೆ ಮೂಲಸೌಕರ್ಯಗಳ ಕೊರತೆಯಿಂದ ಸೊರಗುತ್ತಿದೆ.
ಮಾರುಕಟ್ಟೆಯಲ್ಲಿ 22 ಮಳಿಗೆಗಳಿದ್ದು, ಅದರಲ್ಲಿ 10-15 ಮಳಿಗೆಗಳನ್ನು ಮಾತ್ರ ತರಕಾರಿ ವ್ಯಾಪಾರಿಗಳು ಬಳಸಿಕೊಳ್ಳುತ್ತಿದ್ದಾರೆ. ಹಿಂಭಾಗದ ಕೆಲ ಮಳಿಗೆಗಳು ನಿರ್ವಹಣೆ ಕೊರತೆಯಿಂದ ಹಾಳಾಗಿವೆ. ಮೂತ್ರಾಲಯ, ಶೌಚಾಲಯ ದುರಸ್ತಿ ಇಲ್ಲದೆ ಗಬ್ಬುನಾರುತ್ತಿವೆ. ಸಂತೆ ಮೈದಾನವನ್ನು ಗ್ರಾಹಕ, ಮಾರಾಟಗಾರರ ಜತೆಗೆ ಕೆಲ ಸ್ಥಳೀಯರು ಮೂತ್ರ ಮತ್ತು ಶೌಚಕ್ಕೆ ಬಳಸಿಕೊಳ್ಳುತ್ತಿರುವುದರಿಂದ ಇಡೀ ಮಾರುಕಟ್ಟೆ ಪರಿಸರ ಸದಾ ಕೊಳಕಿನಿಂದ ಆವೃತ್ತವಾಗಿರುತ್ತದೆ.
ಇನ್ನು ಕುಡಿಯುವ ನೀರು ಮರೀಚಿಕೆಯಾಗಿದೆ. ಸಂಜೆಯಾಗುತ್ತಿದ್ದಂತೆ ಮದ್ಯವ್ಯಸನಿಗಳಿಗೂ ಈ ಮಾರುಕಟ್ಟೆಯೇ ಆಶ್ರಯ ತಾಣ. ಮಾರುಕಟ್ಟೆಯಲ್ಲಿ ಬಿಡಾಡಿ ದನಗಳು, ಹಂದಿಗಳ ಹಾವಳಿಯಿಂದ ಗ್ರಾಹಕರು, ವ್ಯಾಪಾರಿಗಳು ರೋಸಿಹೋಗಿದ್ದಾರೆ.
ಪ್ರತಿ ಮಂಗಳವಾರ ನಡೆಯುವ ಸಂತೆಯು ತರಕಾರಿ ಮಾರುಕಟ್ಟೆ ಅದ್ವಾನ ಸ್ಥಿತಿಯಿಂದ ಮೈದಾನದ ಹೊರ ಭಾಗದ ರಸ್ತೆ ಅತಿಕ್ರಮಿಸುವಂತಾಗಿದೆ. ಹೀಗಾಗಿ ಸುಗಮ ಸಂಚಾರದಲ್ಲಿ ವ್ಯತ್ಯಯವಾಗುತ್ತಿದೆ.
ವ್ಯಾಪಾರಿಗಳಿಗೆ ನೆರಳು ವ್ಯವಸ್ಥೆ ಇಲ್ಲದ ಕಾರಣ ಈ ಬಿರು ಬೇಸಿಗೆಯಲ್ಲಂತೂ ತರಕಾರಿಗಳು ಬೇಗ ಬಾಡಿ ಹಾಳಾಗುತ್ತಿವೆ. ತಾಜಾ ತರಕಾರಿ ಎಂದು ಕೊಳ್ಳಲು ಬರುವ ಗ್ರಾಹಕರು ಖರೀದಿ ಮಾಡದೆ ಹೋಗುತ್ತಾರೆ ಎಂದು ಕೆಲ ವ್ಯಾಪಾರಿಗಳು ಅಳಲು ತೋಡಿಕೊಂಡರು.
ಇದಕ್ಕೆಲ್ಲ ಪರಿಹಾರ ಸಿಗಬೇಕಿದ್ದರೆ ನೂತನ ಮಾರುಕಟ್ಟೆ ಆದಷ್ಟು ಬೇಗ ನಿರ್ಮಾಣವಾಗಬೇಕು ಎಂಬ ಒತ್ತಾಯ ವ್ಯಾಪಾರಿಗಳು, ನಾಗರಿಕರಿಂದ ಕೇಳಿಬಂದಿದೆ.
ಕಂಪ್ಲಿಯ ದಿನವಹಿ ತರಕಾರಿ ಮಾರುಕಟ್ಟೆ ಮಲ, ಮೂತ್ರ, ಅನೈತಿಕ ಅಡ್ಡೆಯಾಗಿದೆ. ಈ ಸ್ಥಳದಲ್ಲಿ ತರಕಾರಿಗಳ ಮಾರಾಟ ಮಾಡಲಾಗುತ್ತದೆ. ಸ್ಥಳೀಯ ಆಡಳಿತ ನಡೆಸುವವರು ಎದೆ ತಟ್ಟಿಕೊಂಡು ಹೇಳಿ ಅನುದಾನವನ್ನು ಎಷ್ಟರ ಮಟ್ಟಿಗೆ ಸದ್ಬಳಕೆ ಮಾಡಿದ್ದೀರೆಂದು?
ವಸಂತರಾಜ ಕಹಳೆ, ರಾಜ್ಯ ಸಮಿತಿ ಸದಸ್ಯರು, ಕರ್ನಾಟಕ ಜನಶಕ್ತಿ
ಪ್ರತಿ ಮಂಗಳವಾರ ಗಂಗಾವತಿಯಿಂದ ತರಕಾರಿ ಮಾರಾಟಕ್ಕೆ ಬರುತ್ತೇನೆ. ₹150 ತೆರಿಗೆ ಪುರಸಭೆಗೆ ಪಾವತಿಸುತ್ತೇನೆ. ಕನಿಷ್ಠ ಮೂಲ ಸೌಕರ್ಯವಿರಲಿ, ನಾವು ಕುಳಿಕೊಳ್ಳುವ ಸ್ಥಳದಲ್ಲಿ ಬ್ಲಿಚಿಂಗ್ ಪೌಡರ್ ಸಹ ಸಿಂಪಡಣೆ ಮಾಡುವುದಿಲ್ಲ
ರಾಜಸಾಬ್, ತರಕಾರಿ ವ್ಯಾಪಾರಿ
ದಿನಕ್ಕೆ ನಾನು ₹30 ತೆರಿಗೆ ಪಾವತಿಸುತ್ತೇನೆ. ಅದೇ ರೀತಿ ಉಳಿದ ತರಕಾರಿ ವ್ಯಾಪಾರಿಗಳು ₹10, 20 ತೆರಿಗೆ ಕಟ್ಟುತ್ತಾರೆ. ಆದರೆ, ಮಾರುಕಟ್ಟೆಯಲ್ಲಿ ಕುಡಿಯುವ ನೀರು, ಶೌಚಾಲಯ ವ್ಯವಸ್ಥೆ ಇಲ್ಲದೆ ತುಂಬಾ ತೊಂದರೆಯಾಗಿದೆ
ಎಸ್. ಮೈನುದ್ದೀನ್, ದಿನವಹಿ ತರಕಾರಿ ವ್ಯಾಪಾರಿ
ನೂತನ ತರಕಾರಿ ಮಾರುಕಟ್ಟೆ ನಿರ್ಮಿಸಲು ಎಸ್.ಎಫ್.ಸಿ ವಿಶೇಷ ನಿಧಿಯಡಿ ₹1.70ಕೋಟಿ ಮಂಜೂರಾಗಿದ್ದು, ರಿ-ಟೆಂಡರ್ ಹಂತದಲ್ಲಿದೆ. ಅಲ್ಲಿಯವರೆಗೆ ಮಾರುಕಟ್ಟೆಗೆ ಸ್ವಚ್ಛತೆಗೆ ಆದ್ಯತೆ ನೀಡಲಾಗುವುದು.
ಕೆ. ದುರುಗಣ್ಣ, ಮುಖ್ಯಾಧಿಕಾರಿ, ಪುರಸಭೆ
ನೂತನ ಮಾರುಕಟ್ಟೆ ನಿರ್ಮಾಣದ ರಿ-ಟೆಂಡರ್ ಪ್ರಕ್ರಿಯೆ ಮುಗಿಯುತ್ತಿದ್ದಂತೆ ಮೂಲಸೌಲಭ್ಯ ಸಹಿತ ಸುಸಜ್ಜಿತ, ಮಾದರಿ ತರಕಾರಿ ಮಾರುಕಟ್ಟೆ ನಿರ್ಮಿಸಲಾಗುವುದು
ಭಟ್ಟಾ ಪ್ರಸಾದ್, ಅಧ್ಯಕ್ಷರು, ಪುರಸಭೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.