ADVERTISEMENT

ರಾಷ್ಟ್ರ ಧ್ವಜಗಳ ಬಾಕಿ ಪಾವತಿಗೆ ಡಿ.ಸಿ.ಗಳಿಗೆ ಪತ್ರ

ನಿಗದಿತ ಖಾತೆಗಳಿಗೆ ತಕ್ಷಣ ಹಣ ಜಮೆ ಮಾಡುವಂತೆ ಎಸಿಎಸ್‌ ಸೂಚನೆ

ಹೊನಕೆರೆ ನಂಜುಂಡೇಗೌಡ
Published 11 ಡಿಸೆಂಬರ್ 2022, 19:22 IST
Last Updated 11 ಡಿಸೆಂಬರ್ 2022, 19:22 IST
   

ಬಳ್ಳಾರಿ: ಸ್ವಾತಂತ್ರ್ಯದ ಸುವರ್ಣ ಮಹೋತ್ಸವದ ಸಂದರ್ಭದಲ್ಲಿ ನಡೆದ ಮೂರು ದಿನಗಳ ‘ಹರ್‌ ಘರ್‌ ತಿರಂಗಾ ಅಭಿಯಾನ’ಕ್ಕೆ ಕೇಂದ್ರ ಸರ್ಕಾರ ಪೂರೈಸಿದ್ದ ರಾಷ್ಟ್ರಧ್ವಜಗಳ ₹ 4,39,92,843 ಬಾಕಿಯನ್ನು ತಕ್ಷಣ ಪಾವತಿಸುವಂತೆ ತಾಕೀತು ಮಾಡಿ ರಾಜ್ಯ ಸರ್ಕಾರ ಜಿಲ್ಲಾಧಿಕಾರಿಗಳಿಗೆ ಎರಡನೇ ಪತ್ರ ಬರೆದಿದೆ.

ಆಗಸ್ಟ್ 13ರಿಂದ 15ರವರೆಗೆ ಮನೆಗಳು, ಕಚೇರಿಗಳು ಹಾಗೂ ವಾಹನಗಳ ಮೇಲೆ ರಾಷ್ಟ್ರ ಧ್ವಜ ಹಾರಾಡಿದ್ದವು. ‘ಏಳು ದಶಕಗಳಿಂದ ಬಳಸುತ್ತಿದ್ದ ಖಾದಿ ಬಟ್ಟೆಯ ತ್ರಿವರ್ಣ ಧ್ವಜಗಳಿಗೆ ಇತಿಶ್ರೀ ಹೇಳಿ, ತೆಳು ಬಟ್ಟೆಯಿಂದ ಮಾಡಿದಧ್ವಜಗಳನ್ನು ಪೂರೈಸಲಾಗಿದೆ’ ಎಂಬ ಟೀಕೆಗಳು ಕೇಳಿ ಬಂದಿದ್ದವು. ಸಾಮಾಜಿಕ ಜಾಲತಾಣಗಳಲ್ಲೂ ಈ ಬಗ್ಗೆ ಚರ್ಚೆಯಾಗಿತ್ತು.

ಕೇಂದ್ರ ಸರ್ಕಾರವು ರಾಜ್ಯಕ್ಕೆ 50,22,000 ತ್ರಿವರ್ಣ ಧ್ವಜಗಳನ್ನು ಪೂರೈಸಿತ್ತು. ಪ್ರತಿ ಧ್ವಜಕ್ಕೆ ₹ 22 ನಿಗದಿಪಡಿಸಿತ್ತು. ಅದರಂತೆ, ರಾಜ್ಯ ಸರ್ಕಾರ ₹ 11,048,4000 ಪಾವತಿ ಸಬೇಕಿತ್ತು. ‘ಹರ್‌ ಘರ್‌ ತಿರಂಗಾ ಅಭಿಯಾನ’ದ ರಾಜ್ಯದ ನೋಡಲ್‌ ಅಧಿಕಾರಿಯೂ ಆಗಿದ್ದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ರಜನೀಶ್‌ ಗೋಯಲ್‌ ಸೆಪ್ಟೆಂಬರ್‌ 28ರಂದು ಜಿಲ್ಲಾಧಿಕಾರಿಗಳಿಗೆ ಮೊದಲ ಪತ್ರ ಬರೆದ ಬಳಿಕ ₹ 6,64,96,032 ಪಾವತಿಯಾಯಿತು. ಮಿಕ್ಕ ಹಣವನ್ನು ತಕ್ಷಣ ಪಾವತಿಸುವಂತೆ ನವೆಂಬರ್‌ ಕೊನೆ ವಾರ ಜಿಲ್ಲಾಧಿಕಾರಿಗಳಿಗೆ ಎರಡನೇ ಪತ್ರ ರವಾನೆಯಾಗಿದೆ.

ADVERTISEMENT

‘ಹರ್‌ ಘರ್‌ ತಿರಂಗಾ ಅಭಿಯಾನಕ್ಕೆ ಬೇಕಾಗುವ ಧ್ವಜಗಳನ್ನು ಪೂರೈಸುವಂತೆ ಕೇಂದ್ರಕ್ಕೆ ಕೇಳಲಾಗಿತ್ತು. ಇದರ ವೆಚ್ಚವನ್ನು ಆನಂತರ ಭರಿಸುವುದಾಗಿ ತಿಳಿಸಲಾಗಿತ್ತು. ರಾಜ್ಯದ ಮನವಿ ಮೇಲೆ ಪೂರೈಸಿದ ತ್ರಿವರ್ಣ ಧ್ವಜಗಳಿಗೆ ಇದುವರೆಗೆ ಹಣ ಪಾವತಿಸದಿರುವುದು ಕೇಂದ್ರದ ಸಹಕಾರಕ್ಕೆ ಅಗೌರವ ತೋರಿದಂತೆ’ ಎಂದು ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಮೊದಲ ಪತ್ರದಲ್ಲಿ ಅಸಮಾಧಾನ ವ್ಯಕ್ತಪಡಿಸಿದ್ದರು.

ಆನಂತರ ವಿವಿಧ ಜಿಲ್ಲೆಗಳಿಂದ ರಾಜ್ಯ ಸರ್ಕಾರ ಸೂಚಿಸಿದ ಖಾತೆಗಳಿಗೆ ₹6,64,96,032 ಪಾವತಿಯಾಗಿದೆ. ಕಲಬುರಗಿ ಜಿಲ್ಲೆ ಅತ್ಯಧಿಕ ಅಂದರೆ,2,26,000 ತ್ರಿವರ್ಣ ಧ್ವಜಗಳನ್ನು ಖರೀದಿಸಿದ್ದು, ₹ 49,72,000 ಜಮೆ ಮಾಡಬೇಕಿದೆ. ಇದರಲ್ಲಿ ₹43,837,387 ಪಾವತಿಸಿದ್ದು, ₹5,84,613 ಮಾತ್ರ ಬಾಕಿ ಉಳಿಸಿದೆ. ದಕ್ಷಿಣ ಕನ್ನಡ ಜಿಲ್ಲೆ ಹೆಚ್ಚು ತ್ರಿವರ್ಣ ಧ್ವಜಗಳನ್ನು ಪಡೆದಿರುವ ಎರಡನೇ ಜಿಲ್ಲೆ ಆಗಿದ್ದು, ₹ 1,55,986 ಮಾತ್ರ ಬಾಕಿ ಕೊಡಬೇಕಿದೆ.

48,000 ಧ್ವಜಗಳನ್ನು ಖರೀದಿಸಿರುವ ಚಾಮರಾಜನಗರ ಒಂದು ನಯಾ ಪೈಸೆ ಕಟ್ಟಿಲ್ಲ. 78 ಸಾವಿರ ಧ್ವಜಗಳನ್ನು ತರಿಸಿಕೊಂಡಿದ್ದ ಚಿಕ್ಕಮಗಳೂರು ಜಿಲ್ಲೆ ಸಂಪೂರ್ಣವಾಗಿ ಹಣ ಪಾವತಿಸಿದ ಏಕೈಕ ಜಿಲ್ಲೆ ಎನಿಸಿದೆ. 15 ಲಕ್ಷ ಧ್ವಜಗಳನ್ನು ಖರೀದಿಸಿದ್ದ ಬೃಹತ್‌ ಬೆಂಗಳೂರು ಮಹಾನಗರಪಾಲಿಕೆ ಇನ್ನೂ ₹ 1,69,73,671 ಕೊಡಬೇಕಾಗಿದೆ. ಪೊಲೀಸ್‌ ಇಲಾಖೆ ಮತ್ತು ಕೆಪಿಟಿಸಿಲ್‌ ಕ್ರಮವಾಗಿ 1,00,000 ಮತ್ತು 66,000 ತ್ರಿವರ್ಣ ಧ್ವಜ ತರಿಸಿಕೊಂಡಿದ್ದು, ಸಂಪೂರ್ಣ ಹಣ ಕಟ್ಟಬೇಕಿದೆ. ಬಳ್ಳಾರಿ ಜಿಲ್ಲೆ 1,25,000 ಧ್ವಜಗಳನ್ನು ಖರೀದಿಸಿದ್ದು, ₹ 7,45,701 ಕೊಡಬೇಕಿದೆ.

ಜಿಲ್ಲಾಧಿಕಾರಿಗಳಿಗೆ ಕಳುಹಿಸಿರುವ ಪತ್ರದಲ್ಲಿ ಈ ವಿವರಗಳಿದ್ದು, ಕೂಡಲೇ ಹಣ ಕಳುಹಿಸುವಂತೆ ಕೇಂದ್ರ ಸರ್ಕಾರ ಕೇಳಿರುವುದಾಗಿ ತಿಳಿಸಲಾಗಿದೆ.

‘ಖಾದಿ ಕೈಬಿಟ್ಟಿದ್ದು ಸರಿಯಲ್ಲ’

‘ಕೇಂದ್ರ ಸರ್ಕಾರವು ಸ್ವಾತಂತ್ರ್ಯ ಸುವರ್ಣ ಮಹೋತ್ಸವಕ್ಕೆ ಖಾದಿ ತ್ರಿವರ್ಣ ಧ್ವಜ ಗಳನ್ನು ಕೈಬಿಟ್ಟು, ಫಾಲಿ‍ಪೈಬರ್‌ ರೀತಿಯ ಬಟ್ಟೆಯಿಂದ ಮಾಡಿದ ಧ್ವಜಗಳನ್ನು ಪೂರೈಸಿದ್ದು ಸಮರ್ಥನೀಯ ಕ್ರಮವಲ್ಲ’ ಎಂದು ಧಾರವಾಡ ತಾಲ್ಲೂಕು ಸೇವಾ ಸಂಘದ ಕಾರ್ಯದರ್ಶಿ ಎನ್.ಕೆ. ಕಾಗಿನೆಲಿ ಅಭಿಪ್ರಾಯಪಟ್ಟರು.

‘ಕಳೆದ ವರ್ಷ ತಯಾರಿಸಿದ ಧ್ವಜಗಳೇ ಮಾರಾಟವಾಗದೆ ಉಳಿದಿದ್ದು, ಈ ವರ್ಷ ಹೊಸದಾಗಿ ಧ್ವಜಗಳನ್ನು ತಯಾರಿಸಿಲ್ಲ.ಖಾದಿ ಕ್ಷೇತ್ರದಲ್ಲಿ ಸಾವಿರಾರು ಮಂದಿ ದುಡಿಯುತ್ತಿದ್ದಾರೆ. ಸರ್ಕಾರದ ಇಂಥ ನೀತಿಗಳಿಂದ ಖಾದಿ ಕಾರ್ಯಕರ್ತರ ಉದ್ಯೋಗಕ್ಕೆ ಕುತ್ತು ಬರಲಿದೆ. ಈಗಾಗಲೇ ಕೊಪ್ಪಳ, ಕುಕನೂರು, ಯಲಬುರ್ಗಾ ಹಾಗೂ ರಾಯಚೂರು ಖಾದಿ ಕೇಂದ್ರಗಳು ಬಂದ್‌ ಆಗಿವೆ’ ಎಂದು ಸ್ಪಷ್ಟಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.