ಕಂಪ್ಲಿ: ಕಳೆದ 58 ವರ್ಷಗಳ ಹಿಂದೆ ಆರಂಭಗೊಂಡ ಇಲ್ಲಿಯ ಶಾಖಾ ಗ್ರಂಥಾಲಯಕ್ಕೆ ಶಾಶ್ವತ ಕಟ್ಟಡವಿಲ್ಲದೆ ‘ಸಂಚಾರಿ ಗ್ರಂಥಾಲಯ’ ಎನ್ನುವ ಅಪವಾದಕ್ಕೆ ಗುರಿಯಾಗಿದೆ.
ಇದೀಗ ಪಟ್ಟಣದ ಸೋಮಪ್ಪ ಕೆರೆಯ ಆವರಣದಲ್ಲಿ ₹ 1ಕೋಟಿ ವೆಚ್ಚದಲ್ಲಿ ಪ್ರೀ ಎಂಜನಿಯರ್ಡ್ ಬಿಲ್ಡಿಂಗ್(ಪಿಇಬಿ) ಮಾದರಿಯಲ್ಲಿ ಕಟ್ಟಡ ನಿರ್ಮಾಣವಾಗಿ ಹಲವು ತಿಂಗಳುಗಳೇ ಕಳೆದಿದೆ. ಆದರೆ, ಉದ್ಘಾಟನೆ ಭಾಗ್ಯ ಈವರೆಗೆ ಕೂಡಿ ಬಂದಿಲ್ಲ.
ಸಿಎಸ್‍ಆರ್ ಮತ್ತು ಕೆ.ಕೆ.ಆರ್.ಡಿ.ಬಿ ಯೋಜನೆಯ ತಲಾ ₹ 50ಲಕ್ಷ ವೆಚ್ಚದಲ್ಲಿ ಗ್ರಂಥಾಲಯ ಕಟ್ಟಡ ನಿರ್ಮಿಸಲಾಗಿದೆ. ಕೆರೆ ಪರಿಸರ ಹಸಿರು ವಲಯಕ್ಕೆ ಸೇರ್ಪಡೆಯಾಗಿರುವುದರಿಂದ ಶಾಶ್ವತ ಕಟ್ಟಡ ನಿರ್ಮಾಣಕ್ಕೆ ನಿರ್ಭಂಧವಿದೆ. ಈ ಕಾರಣಕ್ಕೆ ಪ್ರೀ ಎಂಜನಿಯರ್ಡ್ ಬಿಲ್ಡಿಂಗ್(ಪಿಇಬಿ) ಮಾದರಿಯಲ್ಲಿ 10.14x19.19ಮೀಟರ್ ವಿಸ್ತೀರ್ಣದಲ್ಲಿ ನೆಲ ಮತ್ತು ಮೊದಲನೇ ಮಹಡಿಯಲ್ಲಿ ಗ್ರಂಥಾಲಯ ಕಟ್ಟಡ ನಿರ್ಮಿತಿ ಕೇಂದ್ರದವರು ನಿರ್ಮಿಸಿದ್ದಾರೆ.
1967ರಲ್ಲಿ ಪಟ್ಟಣ ಪಂಚಾಯಿತಿ ಕೊಠಡಿಯೊಂದರಲ್ಲಿ ಶಾಖಾ ಗ್ರಂಥಾಲಯ ಆರಂಭಗೊಂಡಿತು. 1997ರಲ್ಲಿ ಪುರಸಭೆ ಆಡಳಿತ ಗ್ರಂಥಾಲಯವನ್ನು ಅಲ್ಲಿಂದ ಎತ್ತಂಗಡಿ ಮಾಡಿದಾಗ ಬಾಡಿಗೆ ಕಟ್ಟಡದಲ್ಲಿ ಆಶ್ರಯ ಪಡೆಯಿತು.
ಬಳಿಕ ಅಂದಿನ ಪುರಸಭೆ ಅಧ್ಯಕ್ಷ ಅಯ್ಯೋದಿ ವೆಂಕಟೇಶ್ ಅವರು 1997ರ ಮಾ.29ರಂದು 60x80 ಅಡಿ ಉದ್ದ ಅಗಲದ ನಿವೇಶನವನ್ನು ಗ್ರಂಥಾಲಯಕ್ಕೆ ನೋಂದಣಿ ಮಾಡಿಸಿದರು. ಈ ವೇಳೆ ಸ್ಥಳಕ್ಕೆ ಸಂಬಂಧಪಟ್ಟಂತೆ ಕಾಲೇಜು ಪ್ರಾಚಾರ್ಯರು ಎನ್‍ಒಸಿ ನೀಡದ ಕಾರಣ ಕಟ್ಟಡ ನಿರ್ಮಾಣಗೊಳ್ಳಲಿಲ್ಲ.
ಸದ್ಯ ತಾಲ್ಲೂಕು ವ್ಯವಸಾಯ ಉತ್ಪನ್ನ ಮಾರಾಟ ಸಹಕಾರ ಸಂಘದ ಬಾಡಿಗೆ ಕಟ್ಟಡದಲ್ಲಿ ಗ್ರಂಥಾಲಯ ಮುಂದುವರಿದಿದೆ. ಇಲ್ಲಿ ಅಗತ್ಯ ಸ್ಥಳವಿಲ್ಲದ ಕಾರಣ ಪುಸ್ತಕಗಳನ್ನು ನೆಲದಲ್ಲಿಯೇ ಜೋಡಿಸಲಾಗಿದೆ. ಜೊತೆಗೆ ಓದುಗರಿಗೆ ಅಗತ್ಯ ಮೂಲ ಸೌಕರ್ಯಗಳು ಮರೀಚಿಕೆಯಾಗಿವೆ.
ತಾಲ್ಲೂಕು ಶಾಖಾ ಗ್ರಂಥಾಲಯ ಉದ್ಘಾಟಿಸಬೇಕು. ಕಾಯಂ ಸಿಬ್ಬಂದಿ ನೇಮಕದೊಂದಿಗೆ ಮೂಲ ಸೌಕರ್ಯ ಕಲ್ಪಿಸಬೇಕುಆರ್.ಜಮನ್‍ಸಿಂಗ್ ಗ್ರಂಥಾಲಯ ಓದುಗರು ಕಂಪ್ಲಿ
ಎಸ್‍ಸಿಎಸ್‍ಪಿಟಿಎಸ್‍ಪಿ ಅನುದಾನದಲ್ಲಿ ಗ್ರಂಥಾಲಯಕ್ಕೆ ಅಗತ್ಯವಿರುವ ಪೀಠೋಪಕರಣ ಖರೀದಿಸಲು ಟೆಂಡರ್ ಪ್ರಕ್ರಿಯೆ ಹಂತದಲ್ಲಿದೆಲಕ್ಷ್ಮಿ ಕಿರಣ್ ಜಿಲ್ಲಾ ಕೇಂದ್ರ ಗ್ರಂಥಾಲಯ ಉಪ ನಿರ್ದೇಶಕಿ ಬಳ್ಳಾರಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.