ಬಳ್ಳಾರಿ: ಬಳ್ಳಾರಿ ಗ್ರಾಮಾಂತರ ಠಾಣೆಯ ವ್ಯಾಪ್ತಿಯಲ್ಲಿ 2020ರ ಮೇ ತಿಂಗಳಲ್ಲಿ ನಡೆದಿದ್ದ ನಾಗರಾಜ್ ಅಲಿಯಾಸ್ ಮಣಿ ಹತ್ಯೆ ಪ್ರಕರಣದ ಅಪರಾಧಿಗಳಿಗೆ ನ್ಯಾಯಾಲಯ ಜೀವಾವಧಿ ಶಿಕ್ಷೆ ಮತ್ತು ₹25 ಸಾವಿರ ದಂಡ ವಿಧಿಸಿದೆ.
ದಂಡ ಪಾವತಿಸಲು ವಿಫಲವಾದಲ್ಲಿ ಇನ್ನೂ ಆರು ತಿಂಗಳ ಸಾದಾ ಸಜೆ ಅನುಭವಿಸಬೇಕು ಎಂದು 2ನೇ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾದೀಶ ವಿದ್ಯಾಧರ ಶಿರಹಟ್ಟಿ ಅವರು ತೀರ್ಪು ನೀಡಿದ್ದಾರೆ. ಪ್ರಕರಣದಲ್ಲಿ ಸರ್ಕಾರದ ಪರ ಸರ್ಕಾರಿ ಅಭಿಯೋಜಕಿ ಲಕ್ಷ್ಮಿದೇವಿ ಪಾಟೀಲ್ ಅವರು ವಾದ ಮಂಡಿಸಿದ್ದರು.
ಪ್ರಕರಣದಲ್ಲಿ ಅಪರಾಧಿಗಳಿಗೆ ಶಿಕ್ಷೆಯಾಗುವಂತೆ ಮಾಡಿದ ಗ್ರಾಮೀಣ ಪೊಲೀಸ್ ಠಾಣೆಯ ತನಿಖಾಧಿಕಾರಿಗಳಾದ ಶ್ರೀನಿವಾಸ ಮಾನೆ, ಸಿಪಿಐ ರಾಮಣ್ಣ ಬಿರದಾರ, ತನಿಖಾ ಸಹಾಯಕರಾದ ಎಎಸ್ಐ ಶ್ರೀನಿವಾಸ, ಸಿಬ್ಬಂದಿಯಾದ ರವಿ, ಪ್ರಕಾಶ್, ಶರಣಪ್ಪ, ಮುಸ್ತಾಫ್ ಅಲಿ, ಗೋವಿಂದ, ರಾಮಾಂಜಿನಿ ಕಾರ್ಯವನ್ನು ಪೊಲೀಸ್ ವರಿಷ್ಠಾಧಿಕಾರಿ ಶ್ಲಾಘಿಸಿದ್ದಾರೆ.
ಪ್ರಕರಣದ ವಿವರ: ಬಳ್ಳಾರಿಯ ಹರಿಶ್ಚಂದ್ರ ನಗರದಲ್ಲಿ ವಾಸವಾಗಿದ್ದ ನಾಗರಾಜ್ ಎಂಬಾತ ಕುಸುಮಾ ಎಂಬುವವರನ್ನು ಪ್ರೀತಿಸಿ ವಿವಾಹವಾಗಿದ್ದರು. ಕುಸುಮಾ ಅವರ ಸಹೋದರಿಯನ್ನು ಹರಿಶ್ಚಂದ್ರ ನಗರದ ಈಶ್ವರ ಎಂಬಾತ ತಿಪ್ಪೇಸ್ವಾಮಿ ಎಂಬುವವರ ಮಗ ಮಲ್ಲಿಕಾರ್ಜುನ್ ನೆರವಿನೊಂದಿಗೆ ಕರೆದುಕೊಂಡು ಹೋಗಿದ್ದ. ಈ ವಿಷಯವಾಗಿ ತಿಪ್ಪೇಸ್ವಾಮಿ ಮಕ್ಕಳಾದ ಕೃಷ್ಣ, ಮಲ್ಲಿಕಾರ್ಜುನ, ಗಣೇಶ್ ಮತ್ತು ನಾಗರಾಜ ನಡುವೆ ವೈಷಮ್ಯ ಬೆಳೆದಿತ್ತು. ಇದೇ ವಿಚಾರವಾಗಿ ಇವರ ನಡುವೆ ಆಗಾಗ್ಗೆ ಜಗಳವೂ ಆಗಿತ್ತು ಎಂದು ಎಫ್‌ಐಆರ್‌ನಲ್ಲಿ ಉಲ್ಲೇಖಿಸಲಾಗಿತ್ತು.
2020ರ ಮೇ 12ರಂದು ರಾತ್ರಿ 8ರ ಸುಮಾರಿನಲ್ಲಿ ಹರಿಶ್ಚಂದ್ರ ಕಾಲೊನಿಯ ವಾಸವಿ ಲೇಔಟ್‌ನಲ್ಲಿ ಕೃಷ್ಣ, ಮಲ್ಲಿಕಾರ್ಜುನ, ಗಣೇಶ ಮತ್ತು ಮೃತ ನಾಗರಾಜ ನಡುವೆ ಗಲಾಟೆ ಆಗಿತ್ತು. ಈ ವೇಳೆ ಮೂರು ಜನ ಸೇರಿ ನಾಗರಾಜನ ಮೇಲೆ ತೀವ್ರ ಹಲ್ಲೆ ನಡೆಸಿದ್ದರು. ಕಲ್ಲುಗಳ ಮೂಲಕ ತಲೆ ಭಾಗಕ್ಕೆ ಬಲವಾಗಿ ಹೊಡೆದಿದ್ದರು. ನಂತರ ಚರಂಡಿಯಲ್ಲಿ ಎತ್ತಿ ಹಾಕಿ ಪರಾರಿಯಾಗಿದ್ದರು. ನಾಗರಾಜನನ್ನು ಬಳ್ಳಾರಿಯ ವಿಮ್ಸ್ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತಾದರೂ, ಅಷ್ಟರೊಳಗೆ ಆತ ಮೃತಪಟ್ಟಿದ್ದ. ಈ ಸಂಬಂಧ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.