ADVERTISEMENT

ಕೊಡಲಿಯಿಂದ ಹೊಡೆದು ಕೊಲೆವ್ಯಕ್ತಿಗೆ ಜೀವಾವಧಿ ಶಿಕ್ಷೆ

​ಪ್ರಜಾವಾಣಿ ವಾರ್ತೆ
Published 13 ಜನವರಿ 2021, 13:40 IST
Last Updated 13 ಜನವರಿ 2021, 13:40 IST

ಹೊಸಪೇಟೆ: ಹೆಂಡತಿಯ ಬಗ್ಗೆ ಇಲ್ಲಸಲ್ಲದ ಮಾತುಗಳನ್ನು ಆಡುತ್ತ, ತನಗೆ ಚೇಷ್ಟೆ ಮಾಡುತ್ತಿದ್ದ ವ್ಯಕ್ತಿಯನ್ನು ಕೊಡಲಿಯಿಂದ ಹೊಡೆದು ಸಾಯಿಸಿದ ಕುಂಬಾರ ಕೊಟ್ರೇಶ ಎಂಬುವರಿಗೆ ಇಲ್ಲಿನ ಮೂರನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶ ಕೆ.ಎಂ. ರಾಜಶೇಖರ್‌ ಅವರು ಜೀವಾವಧಿ ಶಿಕ್ಷೆ ವಿಧಿಸಿ ಬುಧವಾರ ಆದೇಶ ಹೊರಡಿಸಿದ್ದಾರೆ.

ಶಿಕ್ಷೆಯ ಜತೆಗೆ ₹25,000 ದಂಡ ವಿಧಿಸಿ, ಕೊಲೆಗೀಡಾದ ರಾಮಪ್ಪನ ಮಕ್ಕಳಿಗೆ ₹1 ಲಕ್ಷ ಪರಿಹಾರ ನೀಡುವಂತೆಯೂ ಆದೇಶದಲ್ಲಿ ತಿಳಿಸಿದ್ದಾರೆ.

2017ರ ಜೂನ್‌ 30ರಂದು ಹಗರಿಬೊಮ್ಮನಹಳ್ಳಿ ತಾಲ್ಲೂಕಿನ ನಂದಿಬಂಡಿಯ ವಾಸಿ ಈಡಿಗರ ರಾಮಪ್ಪ ಗ್ರಾಮದ ಅರಳಿಮರ ಕಟ್ಟೆಯ ಮೇಲೆ ಕುಳಿತುಕೊಂಡಿದ್ದರು. ಈ ವೇಳೆ ಕುಂಬಾರ ಕೊಟ್ರೇಶ ಅವರು ಹಿಂದಿನಿಂದ ಬಂದು, ಕೊಡಲಿಯಿಂದ ರಾಮಪ್ಪ ಅವರ ಕುತ್ತಿಗೆ ಭಾಗಕ್ಕೆ ಹೊಡೆದಿದ್ದರಿಂದ ಅವರು ಗಂಭೀರ ಗಾಯಗೊಂಡು ಸ್ಥಳದಲ್ಲೇ ಮೃತಪಟ್ಟಿದ್ದರು. ಈ ಕುರಿತು ಠಾಣೆಯಲ್ಲಿ ಐಪಿಸಿ 302 ಕಲಂ ಅಡಿ ಪ್ರಕರಣ ದಾಖಲಾಗಿತ್ತು.

ADVERTISEMENT

ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಧೀಶರು, ಕೊಟ್ರೇಶ ಕೊಲೆ ಮಾಡಿರುವುದು ರುಜುವಾತು ಆಗಿರುವುದರಿಂದ ಅವರಿಗೆ ಮೇಲಿನಂತೆ ಶಿಕ್ಷೆ ವಿಧಿಸಿದ್ದಾರೆ. ಸರ್ಕಾರಿ ಅಭಿಯೋಜಕರಾದ ಎಂ.ಬಿ. ಸುಂಕಣ್ಣ, ಕೆ. ನಾಗರಾಜ ಆಚಾರ್‌, ಟಿ. ಅಂಬಣ್ಣ ವಾದ ಮಂಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.