ADVERTISEMENT

ಆಂಧ್ರ ಮಾದರಿಯಲ್ಲಿ ಒಬಿಸಿಗೆ ಅಧಿಕಾರ ಸಿಗಲಿ: ಮಾಜಿ ಶಾಸಕ ಸೂರ್ಯನಾರಾಯಣ ರೆಡ್ಡಿ

​ಪ್ರಜಾವಾಣಿ ವಾರ್ತೆ
Published 17 ಜನವರಿ 2021, 10:36 IST
Last Updated 17 ಜನವರಿ 2021, 10:36 IST
ಹೊಸಪೇಟೆಯಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮಕ್ಕೂ ಮುನ್ನ ಮಾಜಿ ಶಾಸಕ ಸೂರ್ಯನಾರಾಯಣ ರೆಡ್ಡಿ ಅವರು ‘ಮಹಾನಾಯಕ’ ಡಾ.ಬಿ.ಆರ್‌. ಅಂಬೇಡ್ಕರ್‌ ಧಾರಾವಾಹಿಯ ಫ್ಲೆಕ್ಸ್‌ ಉದ್ಘಾಟಿಸಿದರು
ಹೊಸಪೇಟೆಯಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮಕ್ಕೂ ಮುನ್ನ ಮಾಜಿ ಶಾಸಕ ಸೂರ್ಯನಾರಾಯಣ ರೆಡ್ಡಿ ಅವರು ‘ಮಹಾನಾಯಕ’ ಡಾ.ಬಿ.ಆರ್‌. ಅಂಬೇಡ್ಕರ್‌ ಧಾರಾವಾಹಿಯ ಫ್ಲೆಕ್ಸ್‌ ಉದ್ಘಾಟಿಸಿದರು   

ಹೊಸಪೇಟೆ: ‘ಆಂಧ್ರ ಪ್ರದೇಶದಲ್ಲಿ ಬಹುತೇಕ ಎಲ್ಲ ಕ್ಷೇತ್ರಗಳಲ್ಲಿ ಶೇ 50ರಷ್ಟು ಅಧಿಕಾರ ಹಿಂದುಳಿದ ವರ್ಗದವರಿಗೆ ನೀಡಲಾಗಿದೆ. ಅದೇ ಮಾದರಿಯಲ್ಲಿ ರಾಜ್ಯದಲ್ಲೂ ಹಿಂದುಳಿದ ವರ್ಗದವರಿಗೆ ಅಧಿಕಾರ ಸಿಗಬೇಕು’ ಎಂದು ಮಾಜಿಶಾಸಕ ಸೂರ್ಯನಾರಾಯಣ ರೆಡ್ಡಿ ಹೇಳಿದರು.

ಚಲುವಾದಿ ಕೇರಿ ಯುವಕರ ಬಳಗವು ಭಾನುವಾರ ನಗರದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಎಸ್ಸೆಸ್ಸೆಲ್ಸಿ, ಪಿಯುಸಿ ಹಾಗೂ ಪಿಎಚ್‌.ಡಿ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಪ್ರದಾನ ಮಾಡಿ ಮಾತನಾಡಿದರು. ಇದಕ್ಕೂ ಮುನ್ನ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ‘ಮಹಾನಾಯಕ’ ಡಾ.ಬಿ.ಆರ್‌. ಅಂಬೇಡ್ಕರ್‌ ಧಾರಾವಾಹಿಯ ಫ್ಲೆಕ್ಸ್ ಅನಾವರಣಗೊಳಿಸಿದರು.

‘ಡಾ.ಬಿ.ಆರ್‌. ಅಂಬೇಡ್ಕರ್‌ ಅವರು ಅವರ ವಿದ್ಯೆಯಿಂದ ಸಮಾಜದಲ್ಲಿ ಮುಖ್ಯ ವಾಹಿನಿಗೆ ಬಂದರು. ಅವರು ಕೊಟ್ಟ ಹೋರಾಟದ ಬಲದಿಂದ ಹಿಂದುಳಿದ ವರ್ಗದವರು ಮುಂದೆ ಬರುತ್ತಿದ್ದಾರೆ. ಈ ಪ್ರಕ್ರಿಯೆ ನಿರಂತರವಾಗಿ ನಡೆಯಬೇಕು. ಹಿಂದುಳಿದ ವರ್ಗದ ಮಕ್ಕಳು ಚೆನ್ನಾಗಿ ಓದಬೇಕು. ಅದಕ್ಕೆ ಪೋಷಕರು ಅಗತ್ಯ ಪ್ರೋತ್ಸಾಹ ಕೊಡಬೇಕು. ಉತ್ತಮ ಅಂಕ ಗಳಿಸುವ ವಿದ್ಯಾರ್ಥಿಗಳಿಗೆ ನಾನು ಕೂಡ ಆರ್ಥಿಕ ನೆರವು ಕೊಡುತ್ತೇನೆ’ ಎಂದು ಭರವಸೆ ನೀಡಿದರು.

ADVERTISEMENT

ಚಲುವಾದಿಕೇರಿಯಲ್ಲಿ ನಿರ್ಮಿಸಿರುವ ಭೀಮ ಕುಟೀರ ಗ್ರಂಥಾಲಯಕ್ಕೆ ಕಂಪ್ಯೂಟರ್‌ ಹಾಗೂ ಇತರೆ ಸಾಮಗ್ರಿಗಳ ಖರೀದಿಗೆ ಸ್ಥಳದಲ್ಲೇ ₹50,000 ದೇಣಿಗೆಯನ್ನು ಸೂರ್ಯನಾರಾಯಣ ರೆಡ್ಡಿ ನೀಡಿದರು.

ಹಂಪಿ ಕನ್ನಡ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಪ್ರೊ. ಚಿನ್ನಸ್ವಾಮಿ ಸೋಸಲೆ ಮಾತನಾಡಿ, ‘ಅಪಾರ ಜ್ಞಾನದಿಂದ ಅಂಬೇಡ್ಕರ್‌ ಅವರು ಇಡೀ ಜಗತ್ತಿನಲ್ಲಿ ಮನೆ ಮಾತಾದರು. ವಿದ್ಯೆ ಪಡೆದವನಿಗೆ ಎಲ್ಲ ಸ್ಥಾನಮಾನಗಳು ತಾನಾಗಿಯೇ ಹುಡುಕಿಕೊಂಡು ಬರುತ್ತವೆ. ಅದಕ್ಕೆ ಬಾಬಾ ಸಾಹೇಬರೇ ಉತ್ತಮ ನಿದರ್ಶನ. ವಿದ್ಯಾರ್ಥಿಗಳು ಓದಿನ ಕಡೆಗೆ ಹೆಚ್ಚಿನ ಗಮನ ಹರಿಸಿ ಸಮಾಜದಲ್ಲಿ ಉನ್ನತ ಸ್ಥಾನಕ್ಕೆ ಬರಬೇಕು’ ಎಂದು ಸಲಹೆ ನೀಡಿದರು.

‘ಚಲುವಾದಿಕೇರಿಯ ಆರೇಳು ಎಕರೆ ಪ್ರದೇಶದಲ್ಲಿ 20,000ಕ್ಕೂ ಅಧಿಕ ಜನ ವಾಸಿಸುತ್ತಿದ್ದಾರೆ. ಆದರೆ, ಕೇವಲ ಐದು ಸಾವಿರ ಜನ 50ರಿಂದ 60 ಎಕರೆಯಲ್ಲಿ ವಾಸವಾಗಿದ್ದಾರೆ. ಇಂತಹ ಪರಿಸ್ಥಿತಿ ಬದಲಾಗಬೇಕು. ಎಲ್ಲರಿಗೂ ಸೂರು ಸಿಗಬೇಕು. ಉತ್ತಮ ವಾತಾವರಣದಲ್ಲಿ ಬೆಳವಣಿಗೆ ಹೊಂದಲು ಅವಕಾಶ ಒದಗಬೇಕು. ದಲಿತರನ್ನು ತುಳಿದವರೇ ನಿಜವಾದ ಅಸ್ಪೃಶ್ಯರು. ಹಾಗಾಗಿ ದಲಿತರಲ್ಲಿ ಅಸ್ಪೃಶ್ಯರು ಎಂಬ ಭಾವನೆ ಬರಬಾರದು’ ಎಂದು ಹೇಳಿದರು.

‘ದಲಿತ ಸಮುದಾಯದಲ್ಲಿ ಈಗಲೂ ಅನೇಕ ಅಮಾನವೀಯ ಆಚರಣೆಗಳು ನಡೆಯುತ್ತಿವೆ. ಅವುಗಳಿಂದ ಸಮಾಜದವರು ದೂರ ಇರಬೇಕು. ವಿದ್ಯೆಗೆ ಹೆಚ್ಚಿನ ಪ್ರಾಮುಖ್ಯತೆ ಕೊಡಬೇಕು. ಯಾವುದೇ ರೀತಿಯ ಶೋಷಣೆ, ಕಂದಾಚಾರಕ್ಕೆ ಒಳಗಾಗಬಾರದು’ ಎಂದು ತಿಳಿಸಿದರು.

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮೊಹಮ್ಮದ್‌ ಇಮಾಮ್‌ ನಿಯಾಜಿ, ತಾಲ್ಲೂಕು ಅಂಬೇಡ್ಕರ್ ಸಂಘದ ಅಧ್ಯಕ್ಷ ಎಂ.ಸಿ. ವೀರಸ್ವಾಮಿ, ಮುಖಂಡರಾದ ಸೋಮಶೇಖರ್‌ ಬಣ್ಣದಮನೆ, ಗಂಗಾಧರ ಗೌಡ, ಗುಜ್ಜಲ ನಾಗರಾಜ್, ರವಿ, ವೆಂಕಟೇಶ್, ನಿಂಬಗಲ್‌ ರಾಮಕೃಷ್ಣ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.