ADVERTISEMENT

ಬಳ್ಳಾರಿಯಲ್ಲಿ ಮಹಿಳಾ ಸಂಸ್ಕೃತಿ ಉತ್ಸವ 22 ರಂದು

​ಪ್ರಜಾವಾಣಿ ವಾರ್ತೆ
Published 19 ಡಿಸೆಂಬರ್ 2018, 4:50 IST
Last Updated 19 ಡಿಸೆಂಬರ್ 2018, 4:50 IST
   

ಬಳ್ಳಾರಿ: ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ಡಿ.22 ರಂದುಬೆಳಿಗ್ಗೆ 10.30ಕ್ಕೆ ನಗರದ ಜೋಳದರಾಶಿ ದೊಡ್ಡನಗೌಡ ರಂಗಮಂದಿರದಲ್ಲಿ ಮಹಿಳಾ ಸಂಸ್ಕೃತಿ ಉತ್ಸವವನ್ನು ಹಮ್ಮಿಕೊಂಡಿದೆ‌. ವಿವಿಧ ಕ್ಷೇತಗಳ 222‌ಮಹಿಳೆಯರು‌ ಸಂಪನ್ಮೂಲ ವ್ಯಕ್ತಿಗಳಾಗಿ‌ ಪಾಲ್ಗೊಳ್ಳಲಿರುವುದು ‌ವಿಶೇಷ ಎಂದು ‌ಇಲಾಖೆಯ ಸಹಾಯಕ ನಿರ್ದೇಶಕ ಬಿ.ನಾಗರಾಜ ತಿಳಿಸಿದರು.

ಉತ್ಸವಕ್ಕೆ ಉಸ್ತುವಾರಿ ಸಚಿವ ಡಿ.ಕೆ.ಶಿವಕುಮಾರ್ ಚಾಲನೆ ನೀಡಲಿದ್ದಾರೆ. ನಗರ ಶಾಸಕ ಜಿ.ಸೋಮಶೇಖರೆಡ್ಡಿ ಅಧ್ಯಕ್ಷತೆ ವಹಿಸಲಿದ್ದಾರೆ ಎಂದು ನಗರದಲ್ಲಿ‌ ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಬೆಳಿಗ್ಗೆ 11.30ಕ್ಕೆ ವೇದಿಕೆಯಲ್ಲಿ ನಡೆಯುವ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಕೆ.ಸುನಿತ ವೀಣೆ ವಾದನ, ಕೊಟ್ಟೂರಿನ ಕೆ.ಸಿ.ಶೀಲಾವತಿ ಮತ್ತು ಸಂಗಡಿಗರಿಂದ ಸಮೂಹ ನೃತ್ಯ, ಕವಿತಾ ಗಂಗೂರ್ ಸುಗಮ ಸಂಗೀತ, ಹಂಪಿ ಸ್ತ್ರೀ ಸೇವಾ ಶಿಕ್ಷಣ ಸಮಿತಿಯಿಂದ ಜಾನಪದ ಗೀತೆ, ಸವಿತಾ ವಚನ ಗಾಯನ ಪ್ರಸ್ತುತಪಡಿಸಲಿದ್ದಾರೆ ಎಂದು ತಿಳಿಸಿದರು.

ADVERTISEMENT

ಮಧ್ಯಾಹ್ನ 2.30ರಿಂದ ಲೇಖಕಿ ಎನ್.ಡಿ.ವೆಂಕಮ್ಮ ಅಧ್ಯಕ್ಷತೆಯಲ್ಲಿ ವಿಚಾರಗೋಷ್ಠಿಗಳು ನಡೆಯಲಿದ್ದು, ಜಿ.ನಾಗವೇಣಿ ಆಡಳಿತದಲ್ಲಿ ಮಹಿಳೆ ಕುರಿತು, ಎ.ಎಂ.ಜಯಶ್ರೀ ಸಂಸ್ಕೃತಿಯಲ್ಲಿ ಮಹಿಳೆ‌ ಕುರಿತು, ಸಿದ್ದೇಶ್ವರಿ ಮಹಿಳಾ ಸಬಲೀಕರಣ ಕುರಿತು, ವಸುದ ದಾರವಾರ ಮಹಿಳಾ ಮಾಧ್ಯಮ ವಿಷಯದ ಕುರಿತು ವಿಚಾರ ಮಂಡಿಸಲಿದ್ದಾರೆ.

ಸಂಜೆ 3.30ರಿಂದ 3.45 ರವರೆಗೆ ಕೊಟ್ಟೂರುಸ್ವಾಮಿ ಶಿಕ್ಷಣ ಕಾಲೇಜಿನ ‌ವಿದ್ಯಾರ್ಥಿಗಳು ನೃತ್ಯ ವೈವಿಧ್ಯ ಪ್ರಸ್ತುತಪಡಿಸಲಿದ್ದಾರೆ ಎಂದರು. ನಂತರ, ಕವಿಗೋಷ್ಠಿಯಲ್ಲಿ ಸರೋಜ ಬ್ಯಾತನಾಳ್, ಎಂ.ಎಸ್.ನಳಿನಾ, ನೂರ್ ಜಹಾನ್, ಎಚ್.ಎಂ.ಜ್ಯೋತಿ, ಬಿ.ಶಶಿಕಲಾ, ಎನ್.ಶಿವಲೀಲಾ, ಬಿ.ಎಂ.ನೇತ್ರಾ ಭಾಗವಹಿಸಲಿದ್ದಾರೆ.

ಸಂಜೆ 4.3ರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದ್ದು, ಕೆ.ಶಾಂತ ಶಾಸ್ತ್ರಿ ಮತ್ತು ಸಂಗಡಿಗರು ಕರ್ನಾಟಕ ಸಂಗೀತ ಗಾಯನ , ನಾಗರತ್ನಮ್ಮ ರಂಗಗೀತೆಗಳ ಗಾಯನ, ಸುಭದ್ರಮ್ಮ ಮನ್ಸೂರು ಮತ್ತು ಸಂಗಡಿಗರು ಹೇಮರೆಡ್ಡಿ ಮಲ್ಲಮ್ಮ ನಾಟಕ, ಎಸ್.ಸಂಜಿನಮ್ಮ ತಂಡ ದೇವಿ ಕಥೆ ಬಯಲಾಟ ಸನ್ನಿವೇಶಗಳನ್ನು‌ ಪ್ರದರ್ಶಿಸಲಿದ್ದಾರೆ ಎಂದರು.

ಮೊದಲಿಗೆ, ಬೆಳಿಗ್ಗೆ 9ಕ್ಕೆ ಶೋಭಾಯಾತ್ರೆ ನಡೆಯಲಿದ್ದು ನಗರದ ಮುನ್ಸಿಪಲ್ ಕಾಲೇಜು ಮೈದಾನದಲ್ಲಿ ಹಿರಿಯ ಕಲಾವಿದೆ ಕಪ್ಪಗಲ್ಲು ಪದ್ಮಮ್ಮ ಚಾಲನೆ ನೀಡಲಿದ್ದಾರೆ. ಪೂರ್ಣ ಕುಂಭ ಸಹಿತ ಜಾನಪದ ಕಲಾ ವಾಹಿನಿಯು ಕಾಲೇಜು ಮೈದಾನದಿಂದ ಹೊರಟು ಗಡಿಗಿ ಚೆನ್ನಪ್ಪ ವೃತ್ತ, ರೈಲು ನಿಲ್ದಾಣ,ಜಿಲ್ಲಾಧಿಕಾರಿ ಕಚೇರಿ,ಎಚ್.ಆರ್.ಗವಿಯಪ್ಪ ವೃತ್ತ ಹಾದು ರಂಗಮಂದಿರಕ್ಕೆ ತಲುಪಲಿದೆ.

ವಾಹಿನಿಯಲ್ಲಿ ಕೆ.ದುರುಗಮ್ಮ ಮತ್ತು ಸಂಗಡಿಗರಿಂದ ಮಹಿಳಾ ಡೊಳ್ಳು ಕುಣಿತ, ಆರ್.ಲಕ್ಷ್ಮಿ ಮತ್ತುಸಂಗಡಿಗರಿಂದ ಉರುಮೆ ವಾದ್ಯ, ಸವಿತಾ ಚಿಕುನ್ನಯ್ಯ ಮತ್ತುಸಂಗಡಿಗರಿಂದ ಪೂಜಾ ಕುಣಿತ, ಜಾನಕಿ ಮತ್ತುಸಂಗಡಿಗರಿಂದ ತಾಷರಂಡೋಲ್, ಶೃತಿ ವಿಜಯ್ ಮತ್ತುಸಂಗಡಿಗರಿಂದ ವೀರಗಾಸೆ ಕಲೆಯನ್ನು‌ ಪ್ರದರ್ಶಿಸಲಿದ್ದಾರೆ ಎಂದರು.

ಚಿತ್ರಕಲಾ ಶಿಬಿರ:ಮಹಿಳಾ ಚಿತ್ರ ಕಲಾ ಶಿಬಿರವನ್ನೂ ಹಮ್ಮಿಕೊಳ್ಳಲಾಗಿದ್ದು, ಕರ್ನಾಟಕ ನಾಟಕ ಅಕಾಡೆಮಿಯ ಸದಸ್ಯೆ ಬಿ.ಶಿವಕುಮಾರಿ ಚಾಲನೆ ನೀಡಲಿದ್ದಾರೆ. ಕೃಷ್ಣವೇಣಿ, ರಂಜಾನ್‌ಬಿ, ಶೃತಿ, ಕೆ.ಮಕಾಳೆ, ಕುಸುಮಕುಮಾರಿ, ಎನ್‌.ಶೇಖಮ್ಮ, ಜಿ.ಕೆ.ಸಿಂಧು, ಡಿ.ಉಮಾದೇವಿ, ಕೆ.ಕಲಾವತಿ, ಕಾವ್ಯ ಚಿತ್ರ ಕಲಾವಿದೆಯರು ಶಿಬಿರದಲ್ಲಿ ಭಾಗವಹಿಸಲಿದ್ದಾರೆ‌ ಎಂದರು.

ರಂಗೋಲಿ ಸ್ಪರ್ಧೆಗೆ ನೃತ್ಯ ಕಲಾವಿದೆ ಬಿ.ವೀಣಾಕುಮಾರಿ ಚಾಲನೆ ನೀಡಲಿದ್ದಾರೆ. ಕರಕುಶಲ ವಸ್ತುಗಳ ಪ್ರದರ್ಶನ – ಮಾರಾಟವನ್ನು ಹಮ್ಮಿಕೊಂಡಿದ್ದು, ಕಲಾವಿದೆ ಎ.ವರಲಕ್ಷ್ಮಿ ಚಾಲನೆ ನೀಡಲಿದ್ದಾರೆ ಎಂದು‌ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.