
ಹೂವಿನಹಡಗಲಿ : ತಾಲ್ಲೂಕಿನ ಸುಪ್ರಸಿದ್ಧ ಮೈಲಾರ ಸುಕ್ಷೇತ್ರದಲ್ಲಿ ಬನದ ಹುಣ್ಣಿಮೆ ಪ್ರಯುಕ್ತ ಶನಿವಾರ ಅಪಾರ ಭಕ್ತರು ಮೈಲಾರಲಿಂಗೇಶ್ವರ ಸ್ವಾಮಿ ದರ್ಶನ ಪಡೆದರು.
ದೇವಸ್ಥಾನದಲ್ಲಿ ಬೆಳಿಗ್ಗೆ ಸ್ವಾಮಿಗೆ ಅಭಿಷೇಕ, ವಿಶೇಷ ಪೂಜೆ ನೆರವೇರಿಸಿ, ವಿಶೇಷವಾಗಿ ಅಲಂಕರಿಸಲಾಗಿತ್ತು. ನಾನಾ ಭಾಗಗಳಿಂದ ಸುಕ್ಷೇತ್ರಕ್ಕೆ ಆಗಮಿಸಿದ್ದ ಭಕ್ತರು ನಾನಾ ವಿಧದ ಕಾಳುಗಳನ್ನು ಒಟ್ಟುಗೂಡಿಸಿದ ಕಾಳುಪಲ್ಯೆ, ಮುದ್ದೆ ತಯಾರಿಸಿ ಸ್ವಾಮಿಗೆ ನೈವೇದ್ಯ ಸಮರ್ಪಿಸಿದರು. ನಂತರ ಭಕ್ತರು ಪ್ರಸಾದವಾಗಿ ಮುದ್ದೆಯನ್ನು ಹಂಚಿದರು. ದೇವಸ್ಥಾನ ಮುಂಭಾಗದಲ್ಲಿ ಭಕ್ತರು ದೋಣಿಗಳಿಗೆ ಮೀಸಲು ಬುತ್ತಿಯನ್ನು ಅರ್ಪಿಸಿದರು.ಗೊರವ ಪರಿವಾರದವರು, ಕುದುರೆಕಾರ ಸೇವೆ ಹಾಗೂ ದೀವಟಿಗೆ ಸೇವೆ ಸಲ್ಲಿಸಿದರು.
ಬನದ ಹುಣ್ಣಿಮೆಯನ್ನು ಮೈಲಾರಲಿಂಗಸ್ವಾಮಿ ಭಕ್ತರು ‘ಮುದ್ದೆ ಹುಣ್ಣಿಮೆ’ ಎಂದು ಆಚರಿಸುವುದು ವಾಡಿಕೆ. ಸ್ವಾಮಿಗೆ ನೈವೇದ್ಯ ಸಮರ್ಪಿಸಿದ ಮುದ್ದೆ ಪ್ರಸಾದವನ್ನು ಹೊಲ, ಗದ್ದೆಗೆ ಚೆಲ್ಲಿದರೆ ಸಮೃದ್ಧಿಯಾಗಲಿದೆ ಎಂಬುದು ಭಕ್ತರ ನಂಬಿಕೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.