ಮರಿಯಮ್ಮನಹಳ್ಳಿ: ಸ್ಥಳೀಯ ಪಟ್ಟಣ ಪಂಚಾಯಿತಿಯಲ್ಲಿ ಗುರುವಾರ ಅಧ್ಯಕ್ಷ ಆದಿಮನಿ ಹುಸೇನ್‍ಬಾಷಾ ಅವರ ಅಧ್ಯಕ್ಷತೆಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಬಹುತೇಕ ಚರ್ಚೆಗಿಂತ ಅನುಮೋದನೆಗೆ ಹೆಚ್ಚು ಒತ್ತು ನೀಡಲಾಯಿತು.
ಪಟ್ಟಣದ ಮುಖ್ಯ ರಸ್ತೆ ಹೊಸಪೇಟೆ-ಶೀವಮೊಗ್ಗ ರಾಜ್ಯ ಹೆದ್ದಾರಿ-25ರ ಎರಡು ಬದಿ ಇಟ್ಟಿರುವ ಅನಧಿಕೃತ ಶೆಡ್, ಅಂಗಡಿ ಮುಂಗಟ್ಟುಗಳನ್ನು ತೆರವುಗೊಳಿಸುವ ವಿಷಯಕ್ಕೆ ಸಂಬಂಧಿಸಿದಂತೆ ತೀವ್ರ ಚರ್ಚೆ ನಡೆಯಿತು.
ಇದೇ ಸಂದರ್ಭದಲ್ಲಿ ಸಭೆಯಲ್ಲಿ ಹಾಜರಿದ್ದ ಲೋಕಪಯೋಗಿ ಇಲಾಖೆಯ ಎಇ ತಿಪ್ಪೇಸ್ವಾಮಿ ಅವರಿಗೆ, ಮುಖ್ಯರಸ್ತೆ ಬದಿಯಲ್ಲಿ ಶೆಡ್, ಅಂಗಡಿಮುಂಗಟ್ಟುಗಳನ್ನು ಇಡಲು ಪರವಾನಿಗೆ ನೀಡಿದ್ದೀರಾ ಎಂದು ಪ್ರಶ್ನಿಸಿದ ಅಧ್ಯಕ್ಷ, ಕೂಡಲೇ ನೋಟೀಸ್ ನೀಡುವಂತೆ ಸೂಚಿಸಿದರು. ಇದಕ್ಕೆ ಎಇ ಅವರು ‘ನಾವು ಪರವಾನಿಗೆ ನೀಡಿಲ್ಲ, ನೋಟೀಸ್ ನೀಡಲಾಗುವುದು‘ ಎಂದು ಉತ್ತರಿಸಿದರು.
ಮುಖ್ಯಾಧಿಕಾರಿ ಜಿ.ಕೆ.ಮಲ್ಲೇಶ್ ಮಾತನಾಡಿ, ರಸ್ತೆ ಬದಿ ತಳ್ಳುವಗಾಡಿ ಇಡಲು ಅವಕಾಶ ಇದ್ದು, ಶೆಡ್ ಇಡಲು ಅವಕಾಶ ಇಲ್ಲ ಎಂದು ಸಭೆಗೆ ತಿಳಿಸಿದರು. ಕೊನೆಗೆ ಲೋಕೋಪಯೋಗಿ, ಕಂದಾಯ, ಪೊಲೀಸ್ ಇಲಾಖೆಯ ಸಹಕಾರದೊಂದಿಗೆ ತೆರವುಗೊಳಿಸಲು ಬಹುತೇಕ ಸದಸ್ಯರು ಅನುಮೋದನೆ ನೀಡಿದರೆ, ಒಬ್ಬ ಸದಸ್ಯರು ಮಾತ್ರ ವಿರೋಧ ವ್ಯಕ್ತಪಡಸಿದರು.
ಇದೇ ಸಂದರ್ಭದಲ್ಲಿ ಪಟ್ಟಣದಲ್ಲಿ ಮಳೆಯಿಂದಾಗಿ ಮುಖ್ಯರಸ್ತೆ, ಕೂಡ್ಲಿಗಿ ರಸ್ತೆ ಸೇರಿದಂತೆ ವಿವಿಧ ರಸ್ತೆಗಳಲ್ಲಿ ಬಿದ್ದ ಗುಂಡಿಗಳನ್ನು ಕೂಡಲೇ ಮುಚ್ಚುವಂತೆ ಎಇ ತಿಪ್ಪೇಸ್ವಾಮಿ ಅವರಿಗೆ ಸೂಚಿಸಿದರು.
ಆರಂಭದಲ್ಲಿ ಜಮಾ, ಖರ್ಚುಗಳನ್ನು ಓದಿ ದೃಢಿಕರಿಸಲಾಯಿತು. ನಂತರ ಬಾಕಿ ಉಳಿದ ವಾಣಿಜ್ಯ ಮಳಿಗೆಗಳ ಟೆಂಡರ್ ಪ್ರಕ್ರಿಯೆ ಹಾಗೂ ವಿವಿಧ ಯೋಜನೆ ಅಡಿಯಲ್ಲಿ ಅನುಮೋದನೆಗೊಂಡ ಕಾಮಗಾರಿಗಳ ಟೆಂಡರ್ ಅನುಮೋದನೆಗೆ ಒಪ್ಪಿಗೆ ಸೂಚಿಸಿದರು.
ಇನ್ನು ಪುರಸಭೆಗೆ ಮೇಲ್ದರ್ಜೆಗೇರಿಸಲು ಪ್ರಸ್ತಾವನೆಯನ್ನು ಸಲ್ಲಿಸಲು ಸರ್ವ ಸದಸ್ಯರು ಅನುಮೋದಿಸಿದರು. ಸಾರ್ವಜನಿಕ ಶೌಚಾಲಯಗಳ ನಿರ್ವಹಣೆ, ಬೀದಿನಾಯಿಗಳ ಸಂತಾನ ನಿಯಂತ್ರಣ ಹಾಗೂ ಇ-ಕಚೇರಿಗಾಗಿ ಕೆಎಸ್‍ಡಬ್ಕ್ಯುಎಎನ್ ಮಾಡುವ ವ್ಯವಸ್ಥೆಗೆ ಒಪ್ಪಿಗೆ ಸೂಚಿಸಿದರು.
ಖಾಲಿ ನಿವೇಶಗಳನ್ನು ಬಾಡಿಗೆ ನೀಡುವುದು, 1991ನೇ ಸಾಲಿನಲ್ಲಿ ಸರ್ವೆ ನಂ.87ರಲ್ಲಿ ವಿತರಿಸಿರುವ ಪಟ್ಟಗಳ ಸರ್ವೆ, ಸರ್ಕಾರಿ ಜಾಗಗಳ ಸರ್ವೆ, ಶುದ್ಧ ಕುಡಿಯುವ ನೀರಿನ ಘಟಕಗಳ ನಿರ್ವಹಣೆ, ಜನಸಾಂದ್ರತೆ ಪ್ರದೇಶಗಳಲ್ಲಿ ಸಿಸಿ ಕ್ಯಾಮೆರಾ ಅಳವಡಿಸಲು ಸದಸ್ಯರು ಅನುಮೋದನೆ ನೀಡಿದರು.
ಸ್ಥಾಯಿ ಸಮಿತಿ ಅಧ್ಯಕ್ಷೆ ಎಲ್.ಹುಲಗಿಬಾಯಿ, ಉಪಾದ್ಯಕ್ಷೆ ಆರ್.ಲಕ್ಷ್ಮಿ ಮಂಜುನಾಥ್, ಸದಸ್ಯರಾದ ಎಲ್.ವಸಂತ, ಕೆ.ಮಂಜುನಾಥ, ಕೆ.ಭಾಷಾ, ಮಹಮ್ಮದ್, ಎಲ್.ಪರಶುರಾಮ, ಎಂ.ಸುರೇಶ್, ಬಿ.ಜ್ಯೋತಿ, ಲಕ್ಷ್ಮಿಬಾಯಿ, ಕುಸುಮ, ಪೂಜಾ ಅಶ್ವಿನಿನಾಗರಾಜ, ಲಕ್ಷ್ಮಿಬಾಯಿ, ವಿಜಯಬಾಯಿ, ಎಂ.ರೇಣುಕಾ, ಸಿ.ಸುಮಂಗಳಾ ಉಪಸ್ಥಿತರಿದ್ದರು. ಸದಸ್ಯ ಬಿ.ಎಂ.ಎಸ್.ರಾಜೀವ್ ಗೈರಾಗಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.