ADVERTISEMENT

ಮರಿಯಮ್ಮನಹಳ್ಳಿ | ‘ರಂಗಧರ್ಮ ಮೆರೆಯುವುದು ಹೆಮ್ಮೆ’

​ಪ್ರಜಾವಾಣಿ ವಾರ್ತೆ
Published 21 ಅಕ್ಟೋಬರ್ 2025, 3:10 IST
Last Updated 21 ಅಕ್ಟೋಬರ್ 2025, 3:10 IST
ಮರಿಯಮ್ಮನಹಳ್ಳಿಯ ದುರ್ಗಾದಾಸ್ ಕಲಾಮಂದಿರದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಸಮಾರಂಭದಲ್ಲಿ ಹಿರಿಯ ರಂಗಕಲಾವಿದೆ ಕೆ.ನಾಗರತ್ನಮ್ಮ ಅವರ ಅಭಿನಂದನಾ ಗ್ರಂಥ ‘ರಂಗಸಿರಿ’ಯನ್ನು ವೀಣಾ ಮಹಾಂತೇಶ್ ಲೋಕಾರ್ಪಣೆ ಮಾಡಿದರು
ಮರಿಯಮ್ಮನಹಳ್ಳಿಯ ದುರ್ಗಾದಾಸ್ ಕಲಾಮಂದಿರದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಸಮಾರಂಭದಲ್ಲಿ ಹಿರಿಯ ರಂಗಕಲಾವಿದೆ ಕೆ.ನಾಗರತ್ನಮ್ಮ ಅವರ ಅಭಿನಂದನಾ ಗ್ರಂಥ ‘ರಂಗಸಿರಿ’ಯನ್ನು ವೀಣಾ ಮಹಾಂತೇಶ್ ಲೋಕಾರ್ಪಣೆ ಮಾಡಿದರು   

ಮರಿಯಮ್ಮನಹಳ್ಳಿ: ‘ಇಂದು ನಾವು ಬಹುಮುಖ ಸಂಸ್ಕೃತಿಯ ವಿರುದ್ಧವಾಗಿ ಏಕಮುಖ ಸಂಸ್ಕೃತಿಯತ್ತ ಸಾಗುತ್ತಿರುವ ವಾತಾವರಣದಲ್ಲಿ ಜಾತಿ, ಮತ, ಧರ್ಮ ಸೇರಿದಂತೆ ಎಲ್ಲವನ್ನು ಬದಿಗೊತ್ತಿ ರಂಗಧರ್ಮವನ್ನು ಮೆರೆಯುತ್ತಿರುವುದು ಹೆಮ್ಮೆಯ ವಿಷಯ ಎಂದು ದಾವಣಗೆರೆ ವೃತ್ತಿ ರಂಗಾಯಣದ ನಿರ್ದೇಶಕ ಮಲ್ಲಿಕಾರ್ಜುನ ಕಡಕೋಳ ಹೇಳಿದರು.

ಪಟ್ಟಣದ ದುರ್ಗಾದಾಸ್ ಕಲಾಮಂದಿರದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಹಿರಿಯ ರಂಗಕಲಾವಿದೆ ಕೆ.ನಾಗರತ್ನಮ್ಮ ಅವರ ಅಭಿನಂದನಾ ಗ್ರಂಥ ‘ರಂಗಸಿರಿ’ ಬಿಡುಗಡೆ ಹಾಗೂ ಅಭಿನಂದನಾ ಸಮಾರಂಭ ಉದ್ಘಾಟಿಸಿ  ಮಾತನಾಡಿದರು.

‘ಕನ್ನಡ ರಂಗಭೂಮಿಗೆ 150 ವರ್ಷಗಳ ಇತಿಹಾಸ ಇದ್ದು, ಅದರ ಪೂರ್ವದಲ್ಲಿದ್ದ ಜನಪದ ರಂಗಭೂಮಿ ಮನುಷ್ಯನ ಹುಟ್ಟಿನೊಂದಿಗೆ ಬಂದಿದೆ. ಅದರಲ್ಲಿ ಮರಿಯಮ್ಮನಹಳ್ಳಿಯೂ ಒಂದಾಗಿದ್ದು, ಇಲ್ಲಿ ಎಲ್ಲಾ ರೀತಿಯ ಕಲಾವಿದರನ್ನು ಒಳಗೊಂಡು ರಂಗತೇರನ್ನು ಎಳೆಯುತ್ತಿದ್ದಾರೆ. ಆದರೆ ನಾವು ಪರಂಪರೆಯನ್ನು ಮರೆಯುತ್ತಿದ್ದು, ಆಧುನಿಕ ರಂಗಭೂಮಿಯಲ್ಲಿ ಪರಂಪರೆಗೆ ಮಹತ್ವ ಸಿಗುತ್ತಿಲ್ಲ. ಅಲ್ಲದೆ ವೃತ್ತಿರಂಗಭೂಮಿಯ ಚರಿತ್ರೆಯನ್ನು ಮುಂದಿನ ತಲೆಮಾರಿನವರಿಗೆ ತಲುಪಿಸಬೇಕಾದರೆ, ನಾಗರತ್ಮಮ್ಮ ಸೇರಿದಂತೆ ಅನೇಕ ಕಲಾವಿದರ ಬದುಕನ್ನು ಚರಿತ್ರಾಕಾರರು ದಾಖಲಿಸಬೇಕಿದೆ’ ಎಂದರು.

ADVERTISEMENT

ಹಂಪಿ ಕನ್ನಡ ವಿಶ್ವವಿದ್ಯಾಲಯದ ಪ್ರೊ.ವೆಂಕಟಗಿರಿ ದಳವಾಯಿ ಮಾತನಾಡಿ, ಯಾವುದೇ ಇತಿಹಾಸವನ್ನು ನೋಡಿದಾಗ ಮಹಿಳೆಯನ್ನು ತಾತ್ಸಾರದಿಂದ ನೋಡಿರುವುದನ್ನು ಕಂಡಿದ್ದೇವೆ. ದೇವಾಲಯಗಳಷ್ಟೇ ಪ್ರಾಚೀನ ಇತಿಹಾಸ ರಂಗಭೂಮಿಗೆ ಇದ್ದು, ಅಂತಹ ಸಂದರ್ಭದಲ್ಲಿ ಸಮಸ್ಯೆ, ಸವಾಲುಗಳನ್ನು ಮೆಟ್ಟಿನಿಂತು, ರಂಗಭೂಮಿಗೆ ತಮ್ಮದೇ ಆದ ಕೊಡುಗೆ ನೀಡಿದ ನಾಗರತ್ಮಮ್ಮ ಅವರ ಸಾಧನೆ ಮುಂದಿನ ಕಲಾವಿದರಿಗೆ ದಾರಿದೀಪವಾಗಲಿದೆ ಎಂದರು.

ಸಮಾಜ ಸೇವಕಿ ವೀಣಾ ಮಹಾಂತೇಶ್ ಅವರು ಅಭಿನಂದನಾ ಗ್ರಂಥ ‘ರಂಗಸಿರಿ’ಯನ್ನು ಲೋಕಾರ್ಪಣೆ ಮಾಡಿ ಮಾತನಾಡಿದರು. ಅಭಿನಂದನಾ ಸಮಿತಿಯ ಅಧ್ಯಕ್ಷ ಡಿ.ರಾಘವೇಂದ್ರಶೆಟ್ಟಿ ಪ್ರಾಸ್ತಾವಿಕವಾಗಿ ಹಾಗೂ ಗೋಪಾಲ್ ತ್ರಾಸಿ, ಅನಂತ ನಾಯ್ಕ, ಬಿ.ಎಸ್.ಜಂಬಯ್ಯ ನಾಯಕ, ಅಧ್ಯಕ್ಷತೆವಹಿಸಿ ಕೆ.ಶಿವಮೂರ್ತಿ ಮಾತನಾಡಿದರು.

ಸಂಡೂರು ವಿರಕ್ತಮಠದ ಪ್ರಭು ಸ್ವಾಮೀಜಿ, ಮಲ್ಲಿಕಾರ್ಜುನ ಸ್ವಾಮೀಜಿ ಸಾನ್ನಿಧ್ಯವಹಿಸಿದ್ದರು. ಈ ಸಂದರ್ಭದಲ್ಲಿ ಕೆ.ನಾಗರತ್ನಮ್ಮ, ಮಂಜಮ್ಮ ಜೋಗತಿ, ವಿ.ಟಿ.ಕಾಳೆ, ಪಟ್ಟಣ ಪಂಚಾಯಿತಿ ಅಧ್ಯಕ್ಷ ಆದಿಮನಿ ಹುಸೇನ್ ಬಾಷಾ, ಎಸ್.ರೇಣುಕಾ, ಶಿವನಾಯಕ ದೊರೆ, ಗೋವಿಂದರ ಪರಶುರಾಮ, ಬಸವರಾಜ, ಪಂಕಜ, ಸರಳಾ, ಪ್ರಕಾಶ್ ಪೂಜಾರ್, ಆರ್.ಮಂಜುನಾಥ ಸೇರಿದಂತೆ ಇತರರಿದ್ದರು.

ನಂತರ ಬೆಂಗಳೂರಿನ ಅಮೃತಹಳ್ಳಿಯ ತಲಕಾವೇರಿ ಲೇಔಟ್ ಮಕ್ಕಳ ಸಂಘದ ವತಿಯಿಂದ ‘ಕಿಂದರಿಜೋಗಿ’ ನಾಟಕ ಪ್ರದರ್ಶನಗೊಂಡಿತು.

ಮರಿಯಮ್ಮನಹಳ್ಳಿಯ ದುರ್ಗಾದಾಸ್ ಕಲಾಮಂದಿರದಲ್ಲಿ ಭಾನುವಾರ ಸಂಜೆ ಹಮ್ಮಿಕೊಂಡಿದ್ದ ಗುಬ್ಬಿ ವೀರಣ್ಣ ಪ್ರಶಸ್ತಿ ಪುರಸ್ಕøತ ಹಿರಿಯ ರಂಗಕಲಾವಿದೆ ಕೆ.ನಾಗರತ್ನಮ್ಮ ಅವರ ಅಭಿನಂದನಾ ಗ್ರಂಥ ‘ರಂಗಸಿರಿ’ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಬೆಂಗಳೂರಿನ ಅಮೃತಹಳ್ಳಿಯ ತಲಕಾವೇರಿ ಲೇಔಟ್ ಮಕ್ಕಳ ಸಂಘದ ವತಿಯಿಂದ ‘ಕಿಂದರಿಜೋಗಿ’ ನಾಟಕ ಪ್ರದರ್ಶನಗೊಂಡಿತು.

ಪುಸ್ತಕ ವಿವರ ಪ್ರಕಾಶನ: ರಂಗಸಿರಿ ಕಲಾ ಟ್ರಸ್ಟ್ ಸಂಪಾದಕರು; ಡಾ.ಮಲ್ಲಯ್ಯ ಸಂಡೂರು ಪುಟಗಳು: 496 ಬೆಲೆ: ₹500