ADVERTISEMENT

ಬಳ್ಳಾರಿ: ಮೆಗಾ ಡೇರಿಗೆ ಇಂದು ಮುನ್ನುಡಿ?

ಜಿಲ್ಲಾಡಳಿತ ಒದಗಿಸಿರುವ ಭೂಮಿಗೆ ಹಣ ಪಾವತಿಸಲು ಇಂದಿನ ಅಡಳಿತ ಮಂಡಳಿ ಸಭೆಯಲ್ಲಿ ನಿರ್ಧಾರ ಸಾಧ್ಯತೆ

​ಪ್ರಜಾವಾಣಿ ವಾರ್ತೆ
Published 8 ಆಗಸ್ಟ್ 2025, 5:45 IST
Last Updated 8 ಆಗಸ್ಟ್ 2025, 5:45 IST
ರಾಬಕೊವಿ ಹಾಲು ಒಕ್ಕೂಟ 
ರಾಬಕೊವಿ ಹಾಲು ಒಕ್ಕೂಟ    

ಬಳ್ಳಾರಿ: ಬಹುನಿರೀಕ್ಷಿತ ಮೆಗಾಡೇರಿ ಸ್ಥಾಪನೆಗೆ ‘ರಾಯಚೂರು, ಬಳ್ಳಾರಿ, ಕೊಪ್ಪಳ, ವಿಜಯನಗರ (ರಾಬಕೊವಿ) ಹಾಲು ಉತ್ಪಾದಕರ ಸಹಕಾರ ಸಂಘಗಳ ಒಕ್ಕೂಟ’ದ ಇಂದಿನ ಆಡಳಿತ ಮಂಡಳಿ ಸಭೆ ಮುನ್ನುಡಿ ಹಾಡುವ ಸಾಧ್ಯತೆಗಳಿವೆ. 

ಒಕ್ಕೂಟವು ಸ್ಥಾಪಿಸಲು ಉದ್ದೇಶಿಸಿರುವ ಮೆಗಾ ಡೇರಿ ಸ್ವಯಂಚಾಲಿತ ಹೈಟೆಕ್ ಮೆಗಾ ಡೈರಿಗೆ ಬಳ್ಳಾರಿ ಜಿಲ್ಲಾಡಳಿತ 2023ರಲ್ಲಿ ಕೊಳಗಲ್ಲು ಗ್ರಾಮದ ಬಳಿ 15 ಎಕರೆ ಮಂಜೂರು ಮಾಡಿ ಆದೇಶಿಸಿದೆ. ಈ ಭೂಮಿಗೆ ಒಟ್ಟು ₹2.80 ಲಕ್ಷ ಪಾವತಿಸಿದರೆ, ಜಮೀನು ರಾಬಕೊವಿಗೆ ಹಸ್ತಾಂತರಗೊಳ್ಳಲಿದೆ. ಆ ಬಳಿಕ ನಿರ್ಮಾಣ ಕಾರ್ಯಗಳು ಆರಂಭವಾಗಬೇಕು. 

ಆದರೆ, ಈ ಹಿಂದಿನ ಆಡಳಿತ ಮಂಡಳಿಯು ಹಣ ಪಾವತಿ ಮಾಡುವಲ್ಲಿ ವಿಳಂಬ ಧೋರಣೆ ಅನಿಸರಿಸುತ್ತಲೇ ಬಂದಿತ್ತು. ಮೆಗಾ ಡೇರಿಯನ್ನು ವಿಜಯನಗರ ಜಿಲ್ಲೆಗೆ ಸ್ಥಳಾಂತರಿಸುವ ಹುನ್ನಾರ ಇದರ ಹಿಂದೆ ಎಂಬ ಆರೋಪಗಳು ಕೇಳಿ ಬಂದಿದ್ದವು. 

ADVERTISEMENT

ಹೊಸದಾಗಿ ಆಯ್ಕೆಯಾಗಿರುವ ಆಡಳಿತ ಮಂಡಳಿಯು ತನ್ನ ಮೊದಲ ಸಭೆಯನ್ನು ಶುಕ್ರವಾರ ನಡೆಸುತ್ತಿದ್ದು ಈ ವಿಷಯವಾಗಿ ತೀರ್ಮಾನ ಕೈಗೊಳ್ಳಲು ನಿರ್ಧರಿಸಿದೆ ಎಂದು ಗೊತ್ತಾಗಿದೆ. ಇದಕ್ಕೆ ಪೂರಕವಾಗಿ ಆಡಳಿತ ಮಂಡಳಿಯ ಕಾರ್ಯಸೂಚಿ ಪಟ್ಟಿಯಲ್ಲಿ ಮೇಗಾ ಡೇರಿ ನಿರ್ಮಾಣ ಜಾಗದ ಖರೀದಿಗೆ ಹಣ ಪಾವತಿಸುವ ವಿಷಯವನ್ನು ಸೇರಿಸಲಾಗಿದೆ. 

‘ಮೆಗಾಡೇರಿ ನಿರ್ಮಾಣಕ್ಕೆ ಜಮೀನು ಖರೀದಿಗಾಗಿ 2025-26 ನೇ ಸಾಲಿನಲ್ಲಿ ಅವಕಾಶ ಮಾಡಿಕೊಂಡಿರುವ ಮೂಲಭೂತ ಸೌಕರ್ಯ ನಿಧಿಯಿಂದ ಸರ್ಕಾರಕ್ಕೆ ಹಣ ಪಾವತಿಸುವ ಬಗ್ಗೆ’ ಎಂದು ಕಾರ್ಯಸೂಚಿ ಪಟ್ಟಿಯಲ್ಲಿ ಉಲ್ಲೇಖಿಸಲಾಗಿದೆ.

ಆಡಳಿತ ಮಂಡಳಿ ಸಭೆ ನಡೆಯುವುದಕ್ಕೂ ಮೊದಲೇ ಕೊಳಗಲ್‌ಗೆ ತೆರಳಲಿರುವ ರಾಬಕೊವಿ ಅಧ್ಯಕ್ಷ ರಾಘವೇಂದ್ರ ಹಿಟ್ನಾಳ್‌ ಸ್ಥಳ ಪರಿಶೀಲನೆಯನ್ನೂ ನಡೆಸಲಿದ್ದಾರೆ. ಅವರೊಂದಿಗೆ ಶಾಸಕ ಬಿ. ನಾಗೇಂದ್ರ ಸೇರಿದಂತೆ ಜಿಲ್ಲೆ ಮೂವರು ಶಾಸಕರು ಇರಲಿದ್ದಾರೆ ಎಂದು ಗೊತ್ತಾಗಿದೆ. 

ಮೆಗಾಡೇರಿ ನಿರ್ಮಾಣಕ್ಕಾಗಿ ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯು ‘ಕರ್ನಾಟಕ ಗಣಿಗಾರಿಕೆ ಪರಿಸರ ಪುನಶ್ಚೇತನ ನಿಗಮ (ಕೆಎಂಇಆರ್‌ಸಿ)’ಗೆ ಪ್ರಸ್ತಾವನೆ ಸಲ್ಲಿಸಿತ್ತು. ಈ ಯೋಜನೆಗೆ ₹80.40 ಕೋಟಿ ನೀಡಲು ಕೆಎಂಇಆರ್‌ಸಿ ಒಪ್ಪಿಗೆ ನೀಡಿದೆ. 

ಮೆಗಾ ಡೇರಿ ಸ್ಥಾಪನೆಯಾದರೆ ಈ ಪ್ರದೇಶದಲ್ಲಿ ಹಾಲು ಸಂಸ್ಕರಣಾ ಸಾಮರ್ಥ್ಯವನ್ನು ಹೆಚ್ಚಿಸಲು ಅವಕಾಶ ಸಿಗಲಿದೆ.  ಇದರಿಂದ ಸ್ಥಳೀಯ ಹೈನುಗಾರರ ಸಾಮಾಜಿಕ-ಆರ್ಥಿಕ ಸ್ಥಿತಿಯನ್ನು ಸುಧಾರಿಸುವ ನಿರೀಕ್ಷೆಗಳು ಇವೆ. 

ಸದ್ಯ ಇರುವ ಡೇರಿಯು 50 ವರ್ಷಗಳಷ್ಟು ಹಳೆಯದಾಗಿದ್ದು, ಶಿಥಿಲಾವಸ್ಥೆಯಲ್ಲಿದೆ. ಪ್ರಸ್ತುತ ಹಾಲು ಸಂಸ್ಕರಣಾ ಸಾಮರ್ಥ್ಯ ದಿನಕ್ಕೆ ಕೇವಲ 2 ಲಕ್ಷ ಲೀಟರ್ ಮಾತ್ರ. ಹಳತಾದ ತಂತ್ರಜ್ಞಾನದಿಂದಾಗಿ ಡೇರಿಗೆ ಐಎಸ್‌ಒ ಪ್ರಮಾಣೀಕರಣವೂ ಇಲ್ಲ ಎಂದು ಕೆಎಂಇಆರ್‌ಸಿಯ ಯೋಜನಾ ಪ್ರಸ್ತಾವನೆಯಲ್ಲಿ ವಿವರಿಸಲಾಗಿದೆ. 

ಮೆಗಾ ಡೇರಿಯ ಸ್ಥಾಪನೆಯಿಂದ ಹಾಲು ಸಂಸ್ಕರಣೆಯ ಸಾಮರ್ಥ್ಯ ವೃದ್ಧಿಯಾಗಲಿದೆ, ಜತೆ ಜತೆಗೇ ಫಲಾನುಭವಿಗಳ ವ್ಯಾಪ್ತಿ ಹೆಚ್ಚಾಗಲಿದೆ. ದುರ್ಬಲ ವರ್ಗಗಳ ಸಾಮಾಜಿಕ-ಆರ್ಥಿಕ ಸ್ಥಿತಿ ಸುಧಾರಿಸಲಿದೆ ಎಂದು ಯೋಜನೆಗೆ ಅನುಮೋದನೆ ನೀಡುವಾಗ ಕೆಎಂಇಆರ್‌ಸಿ ಅಭಿಪ್ರಾಯಪಟ್ಟಿದೆ. 

ರಾಘವೇಂದ್ರ ಹಿಟ್ನಾಳ್‌
ಮೆಗಾ ಡೇರಿ ನಿರ್ಮಾಣಕ್ಕಾಗಿ ಮಂಜೂರಾಗಿರುವ ಭೂಮಿಗೆ ಹಣ ಪಾವತಿ ಮಾಡಲು ಶುಕ್ರವಾರದ ಆಡಳಿತ ಮಂಡಳಿ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗುವುದು. ಸ್ಥಳಪರಿಶೀಲನೆಯನ್ನೂ ನಡೆಸಲಾಗುವುದು. 
ರಾಘವೇಂದ್ರ ಹಿಟ್ನಾಳ್‌ ರಾಬಕೊವಿ ಅಧ್ಯಕ್ಷ 

ತಾಲ್ಲೂಕಿಗೆ 100 ಸಂಘದ ಗುರಿ:

ರಾಬಕೊವಿ ವ್ಯಾಪ್ತಿಯ ಜಿಲ್ಲೆಗಳ ಪ್ರತಿ ತಾಲೂಕುಗಳಲ್ಲಿ ಈಗಿರುವ ಹಾಲು ಉತ್ಪಾದಕ ಸಂಘಗಳ ಜತೆಗೇ ಹೆಚ್ಚುವರಿ 100 ಹೊಸ ಸಂಘಗಳನ್ನು ಆರಂಭಿಸಲು ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎಂದು ಒಕ್ಕೂಟದ ಅಧ್ಯಕ್ಷ ರಾಘವೇಂದ್ರ ಹಿಟ್ನಾಳ ಸೂಚನೆ ನೀಡಿದ್ದಾರೆ.  ರಾಬಕೊವಿ ಕೇಂದ್ರ ಕಚೇರಿಯಲ್ಲಿ ಗುರುವಾರ ಅಧಿಕಾರಿಗಳ ಸಭೆ ನಡೆಸಿದ ಹಿಟ್ನಾಳ್‌ ಬಳಿಕ ‘ಪ್ರಜಾವಾಣಿ’ಯೊಂದಿಗೆ ಮಾತನಾಡಿದರು. ‘ಸದ್ಯ ಒಕ್ಕೂಟದ ವ್ಯಾಪ್ತಿಯಲ್ಲಿ 861 ಹಾಲು ಉತ್ಪಾದಕ ಸಂಘಗಳಿವೆ. ತಾಲೂಕಿಗೆ 100ರಂತೆ ಹೊಸ ಸಂಘಗಳನ್ನು ರಚಿಸಿದರೆ  ಸಂಘಗಳ ಸಂಖ್ಯೆ 2 ಸಾವಿರದ ಗಡಿ ದಾಟಲಿದೆ. ಹಾಲು ಉತ್ಪಾದನೆ ಹೈನುಗಾರರ ಆರ್ಥಿಕ–ಸಾಮಾಜಿಕ ಬದಲಾವಣೆಯೂ ಸಾಧ್ಯವಾಗಲಿದೆ. ಒಕ್ಕೂಟದ ವ್ಯಾಪ್ತಿಯಲ್ಲಿ ಸದ್ಯ 2 ಲಕ್ಷದಿಂದ 2.30 ಲಕ್ಷ ಲೀಟರ್‌ ಹಾಲು ಮಾತ್ರ ಉತ್ಪಾದಿಸುತ್ತಿದೆ. ಇದನ್ನು 5 ಲಕ್ಷಕ್ಕೆ ಏರುವಂತೆ ಮಾಡಬೇಕು ಎಂಬುದು ನನ್ನ ನಿಲುವು’ ಎಂದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.