ADVERTISEMENT

ಬಳ್ಳಾರಿ | ನಿಯಮ ಉಲ್ಲಂಘನೆ: ಕೆಐಒಸಿಎಲ್ ವಿರುದ್ಧ ದೂರು 

​ಪ್ರಜಾವಾಣಿ ವಾರ್ತೆ
Published 18 ಅಕ್ಟೋಬರ್ 2025, 5:27 IST
Last Updated 18 ಅಕ್ಟೋಬರ್ 2025, 5:27 IST
ಕೆಐಒಸಿಎಲ್‌ ಲಾಂಛನ 
ಕೆಐಒಸಿಎಲ್‌ ಲಾಂಛನ    

ಬಳ್ಳಾರಿ: ಕುದುರೆಮುಖ ಕಬ್ಬಿಣದ ಅದಿರು ಕಂಪನಿ (ಕೆಐಒಸಿಎಲ್‌)ಯು ಸಂಡೂರು ತಾಲ್ಲೂಕಿನ ದೇವದಾರಿ ಕಬ್ಬಿಣದ ಅದಿರು ಗಣಿ (ಗುತ್ತಿಗೆ ಸಂಖ್ಯೆ: 020)ಯಿಂದ ಕಬ್ಬಿಣದ ಅದಿರನ್ನು ಸಾಗಿಸಲು ರಣಜಿತ್‌ಪುರ ಬಳಿಯ ಕಿರ್ಲೋಸ್ಕರ್‌ ಕಂಪನಿಗೆ ಸೇರಿದ ತೂಕ ಮಾಪನ ಯಂತ್ರವನ್ನು ಬಳಸಲು ಅಕ್ರಮ ಪ್ರಯತ್ನ ನಡೆಸಿದೆ ಎಂಬ ಆರೋಪ ಕೇಳಿ ಬಂದಿದೆ.

‘ಇದು ಗಣಿಗಾರಿಕೆ ಮತ್ತು ಪರಿಸರ ಕಾನೂನುಗಳು ಹಾಗೂ ಸುಪ್ರೀಂಕೋರ್ಟ್ ನಿರ್ದೇಶನಗಳ ಸ್ಪಷ್ಟ ಉಲ್ಲಂಘಟನೆ’ ಎಂದು ನಾಗರಿಕರ ಹೋರಾಟ ಸಂಘಟನೆ ‘ಜನಸಂಗ್ರಾಮ ಪರಿಷತ್ತು’ ಬೆಂಗಳೂರಿನ ಗಣಿ ಮತ್ತು ಭೂವಿಜ್ಞಾನ ಇಲಾಖೆಯ ನಿರ್ದೇಶಕರಿಗೆ ಇತ್ತೀಚೆಗೆ ಪತ್ರ ಬರೆದಿದೆ. 

ಕೆಐಒಸಿಎಲ್‌ ಬೇರೊಬ್ಬ ಗುತ್ತಿಗೆದಾರರ ತೂಕ ಮಾಪನ ಯಂತ್ರವನ್ನು ಬಳಸಲು ಇಟ್ಟಿರುವ ಹೆಜ್ಜೆಯು 1957ರ ‘ಗಣಿ ಮತ್ತು ಖನಿಜ (ಅಭಿವೃದ್ಧಿ ಮತ್ತು ನಿಯಂತ್ರಣ) (ಎಂಎಂಡಿಆರ್‌) ಕಾಯ್ದೆ’ ಮತ್ತು 2017ರ ‘ಖನಿಜ ಸಂರಕ್ಷಣೆ ಮತ್ತು ಅಭಿವೃದ್ಧಿ ನಿಯಮಗಳು (ಎಂಸಿಡಿಆರ್‌) ಕಾಯ್ದೆ’ ಅಡಿಯಲ್ಲಿ ‘ಅಕ್ರಮ ಚಟುವಟಿಕೆ’ ಎಂದು ಪರಿಷತ್ತಿನ ಸಂಚಾಲಕ ಚಾಗನೂರು ಮಲ್ಲಿಕಾರ್ಜುನ ರೆಡ್ಡಿ ಮತ್ತು ರಾಜ್ಯ ಪದಾಧಿಕಾರಿಗಳಾದ ಟಿ.ಎಂ. ಶಿವಕುಮಾರ್ ಮತ್ತು ಶ್ರೀಶೈಲ ಅಲದಳ್ಳಿ ಅವರು ಅಕ್ಟೋಬರ್ 13 ರಂದು ಬರೆದ ಪತ್ರದಲ್ಲಿ ಉಲ್ಲೇಖಿಸಿದ್ದಾರೆ. 

ADVERTISEMENT

‘ಪ್ರತಿಯೊಬ್ಬ ಗಣಿ ಗುತ್ತಿಗೆದಾರನೂ ಅದಿರನ್ನು ತೂಕ ಮಾಡಲು ಮತ್ತು ರವಾನಿಸಲು ತನ್ನದೇ ಪ್ರತ್ಯೇಕ ಮೂಲಸೌಕರ್ಯ ಹೊಂದಿರಬೇಕು. ಇಂಥ ಸೌಲಭ್ಯಗಳನ್ನು ಬೇರೆ ಗಣಿಗಳೊಂದಿಗೆ ಹಂಚಿಕೊಳ್ಳುವುದು ಗಣಿ ಗುತ್ತಿಗೆ ಷರತ್ತುಗಳ ಉಲ್ಲಂಘನೆಯಾಗುತ್ತದೆ. ಖನಿಜ ಹೊಣೆಗಾರಿಕೆಗೆ,  ರಾಯಧನ ಪರಿಶೀಲನೆಗೆ ಧಕ್ಕೆಯುಂಟು ಮಾಡಲಿದೆ‘ ಎಂದು ಪರಿಷತ್ತು ಆರೋಪಿಸಿದೆ. 

‘ಗಣಿ ಕಾರ್ಯಾಚರಣೆ ಪ್ರಕ್ರಿಯೆಗಳಾದ ಅದಿರು ಪುಡಿಮಾಡುವಿಕೆ, ಲೋಡ್ ಮಾಡುವಿಕೆ, ಸಾಗಿಸುವಿಕೆ, ತೂಕ ಮಾಪನವನ್ನು ಗುತ್ತಿಗೆ ಪಡೆದ ಪ್ರದೇಶದಲ್ಲೇ ನಡೆಸಬೇಕು ಎಂದು ಕೆಐಒಸಿಎಲ್‌ನ ದೇವದಾರಿ ಯೋಜನೆಗೆ ನೀಡಲಾದ ಪರಿಸರ ಅನುಮತಿ (ಇಸಿ)ಯಲ್ಲಿ ಸ್ಪಷ್ಟವಾಗಿ ಹೇಳಲಾಗಿದೆ. ‘ಬಾಹ್ಯ ತೂಕದ ಯಂತ್ರವನ್ನು ಬಳಸುವ ಪ್ರಯತ್ನವು ಪರಿಸರ (ರಕ್ಷಣೆ) ಕಾಯ್ದೆ, 1986 ರ ಅಡಿಯಲ್ಲಿ ಇಸಿ ಷರತ್ತುಗಳ ಉಲ್ಲಂಘನೆ ಮಾತ್ರವಲ್ಲದೇ, ದಂಡ ವಿಧಿಸಲು ಅರ್ಹವಾದ ಚಟುವಟಿಕೆ’ ಎಂದು ಪತ್ರದಲ್ಲಿ ತಿಳಿಸಲಾಗಿದೆ.

‘ಗಣಿಗಾರಿಕೆ ಕಾರ್ಯಾಚರಣೆಗಳು ಮತ್ತು ಸಂಬಂಧಿತ ಮೂಲಸೌಕರ್ಯಗಳನ್ನು ಅನುಮೋದಿತ ಗುತ್ತಿಗೆ ಪ್ರದೇಶದಲ್ಲಿಯೇ ಮಾಡಬೇಕು ಎಂದು ಸುಪ್ರೀಂಕೋರ್ಟ್ (ರಿಟ್ ಅರ್ಜಿ (ಸಿವಿಲ್) ಸಂಖ್ಯೆ 562/2009ರಲ್ಲಿ) ನಿರ್ದೇಶನ ನೀಡಿದೆ. ಈ ನಿಯಮಗಳ ಪಾಲನೆಯನ್ನು ಖಚಿತಪಡಿಸಿಕೊಳ್ಳಲು ನ್ಯಾಯಾಲಯವು ಮೇಲ್ವಿಚಾರಣಾ ಸಮಿತಿ ಮತ್ತು ಕೇಂದ್ರೀಯ ಉನ್ನತಾಧಿಕಾರ ಸಮಿತಿ (ಸಿಇಸಿ)ಯನ್ನೂ ಸ್ಥಾಪಿಸಿದೆ’ ಎಂದು ಪರಿಷತ್ತು ಗಣಿ ಇಲಾಖೆಗೆ ಮನನ ಮಾಡಿಸಿದೆ. 

‘ಸಿಇಸಿ, ಮೇಲ್ವಿಚಾರಣಾ ಸಮಿತಿ ಮತ್ತು ಸ್ಥಳೀಯ ಗಣಿಗಾರಿಕೆ ಮತ್ತು ಅರಣ್ಯ ಅಧಿಕಾರಿಗಳು ತಕ್ಷಣ ಈ ಬಗ್ಗೆ ಗಮನಹರಿಸಬೇಕು. ಕೆಐಒಸಿಎಲ್ ಮತ್ತು ಕಿರ್ಲೋಸ್ಕರ್ ನಡುವಿನ ಯಾವುದೇ ಅಕ್ರಮ ಕೊಡುಕೊಳ್ಳುವಿಕೆಯನ್ನು ತಡೆಯಬೇಕು’ ಎಂದು ಪರಿಷತ್ತು ಒತ್ತಾಯಿಸಿದೆ. 

‘ಕೆಐಒಸಿಎಲ್ ತನ್ನ ಈ ನಡೆಯನ್ನು ಮುಂದುವರಿಸಿದರೆ, ಸಾರ್ವಜನಿಕ ಮತ್ತು ಪರಿಸರ ಹಿತಕ್ಕಾಗಿ ಜನಸಂಗ್ರಾಮ ಪರಿಷತ್ತು ಹೈಕೋರ್ಟ್‌ ಅಥವಾ ಸುಪ್ರೀಂ ಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಲಿದೆ’ ಎಂದು ಪರಿಷತ್ತು ಎಚ್ಚರಿಸಿದೆ.

ಇತ್ತೀಚೆಗೆ ಬಳ್ಳಾರಿಯಲ್ಲಿ ನಡೆದ ದಿಶಾ ಸಭೆಯಲ್ಲಿ ಸಂಸದರು, ಜಿಲ್ಲಾಧಿಕಾರಿ, ಗಣಿ ಇಲಾಖೆ ಉಪ ನಿರ್ದೇಶಕರಿಗೆ ಈ ದೂರನ್ನು ಸಲ್ಲಿಸಲಾಗಿದೆ. ದೂರಿನ ಪ್ರತಿಗಳನ್ನು ಸಿಇಸಿ, ಮೇಲ್ವಿಚಾರಣಾ ಸಮಿತಿ, ಸಾಮಾಜಿಕ ಕಾರ್ಯಕರ್ತ ಎಸ್.ಆರ್. ಹಿರೇಮಠ ಅವರಿಗೂ ರವಾನಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.