ADVERTISEMENT

ಸಚಿವನ ಮಗನಿಂದ ಅಪಘಾತ ಪ್ರಕರಣ: ಪೊಲೀಸರ ಸುತ್ತ ಅನುಮಾನದ ಹುತ್ತ!

ತಾಳೆಯಾಗದ ಎಸ್ಪಿ, ಮೃತನ ಸಂಬಂಧಿ ಹೇಳಿಕೆ; ಎಫ್‌ಐಆರ್‌ನಲ್ಲೂ ಗೊಂದಲ

ಶಶಿಕಾಂತ್ ಎಸ್. ಶೆಂಬೆಳ್ಳಿ
Published 14 ಫೆಬ್ರುವರಿ 2020, 2:16 IST
Last Updated 14 ಫೆಬ್ರುವರಿ 2020, 2:16 IST
   

ಹೊಸಪೇಟೆ: ಅತಿ ವೇಗ, ಅಜಾಗರೂಕತೆಯಿಂದ ಕಾರು ಓಡಿಸಿ ಇಬ್ಬರ ಸಾವಿಗೆ ಕಾರಣವಾದ ರಾಜ್ಯದ ಪ್ರಭಾವಿ ಸಚಿವರೊಬ್ಬರ ಮಗನನ್ನು ರಕ್ಷಿಸುವುದರ ಜತೆಗೆ ಇಡೀ ಪ್ರಕರಣವನ್ನೇ ವ್ಯವಸ್ಥಿತವಾಗಿ ಮುಚ್ಚಿ ಹಾಕಲು ಪೊಲೀಸರು ಯತ್ನಿಸುತ್ತಿರುವುದು ಮೇಲ್ನೋಟಕ್ಕೆ ಕಂಡು ಬರುತ್ತಿದೆ.

ಮೃತ ರವಿ ನಾಯ್ಕ ಅವರ ಅಜ್ಜಿ ಸೀತಾಬಾಯಿ ಅವರು ಮೊಮ್ಮಗನ ಪುಸ್ತಕಗಳನ್ನು ತೋರಿಸಿ ಕಣ್ಣೀರಾದರು. ಹೊಸಪೇಟೆ ತಾಲ್ಲೂಕಿನ ಮರಿಯಮ್ಮನಹಳ್ಳಿ ತಾಂಡಾದಲ್ಲಿರುವ ರವಿ ಮನೆಯಲ್ಲಿ ಸದ್ಯ ದುಃಖದ ವಾತಾವರಣ ಮಡುಗಟ್ಟಿದೆ

ಘಟನೆಗೆ ಸಂಬಂಧಿಸಿದಂತೆ ಎಫ್‌.ಐ.ಆರ್‌.ನಲ್ಲಿ ನಿಖರವಾಗಿ ಮಾಹಿತಿ ದಾಖಲಿಸದಿರುವುದು, ಘಟನೆ ನಡೆದ ಸ್ಥಳದಲ್ಲಿದ್ದ ಮೃತ ರವಿ ನಾಯ್ಕ ಅವರ ಚಿಕ್ಕಪ್ಪ ನೀಡಿದ ಮಾಹಿತಿಗೂ ಬಳ್ಳಾರಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಸಿ.ಕೆ. ಬಾಬಾ ಅವರ ಹೇಳಿಕೆಗೂ ಪರಸ್ಪರ ತಾಳೆಯಾಗದಿರುವುದೇ ಅದಕ್ಕೆ ಪ್ರಮುಖ ಕಾರಣ.

ಡಿಕ್ಕಿ ಹೊಡೆದ ಕಾರು ‘ಬೆಂಜ್‌’ ಕಂಪನಿಗೆ ಸೇರಿದೆ. ಆದರೆ, ಎಫ್‌.ಐ.ಆರ್‌.ನಲ್ಲಿ ‘ಆಡಿ’ ಕಾರು ಎಂದು ಬರೆಯಲಾಗಿದೆ. ಶಾಲೆ ದಾಖಲಾತಿ ಪ್ರಕಾರ, ರವಿ ನಾಯ್ಕ ಅವರ ವಯಸ್ಸು (2004ರ ಮೇ 28) 16 ವರ್ಷ. ಆದರೆ, 19 ಎಂದು ತಪ್ಪಾಗಿ ಸೇರಿಸಲಾಗಿದೆ. ಎಲ್ಲಕ್ಕಿಂತ ಮುಖ್ಯವಾಗಿ, ಘಟನೆ ನಡೆದಾಗ ರವಿ ಜತೆಗೆ ಅವರ ಚಿಕ್ಕಪ್ಪ ಲಕ್ಷ್ಮಣ ನಾಯ್ಕ ಇದ್ದರು. ಇಡೀ ಘಟನೆಯನ್ನು ಅವರು ಕಣ್ಣಾರೆ ನೋಡಿದ್ದಾರೆ. ಆದರೆ, ಸ್ಥಳದಲ್ಲೇ ಇರದ ಎಸ್ಪಿ ಅದಕ್ಕೆ ಸಂಪೂರ್ಣವಾಗಿ ತದ್ವಿರುದ್ಧವಾದ ಹೇಳಿಕೆ ಕೊಟ್ಟಿದ್ದಾರೆ.

ADVERTISEMENT

‘ನನ್ನ ಬೈಕ್‌ ಪಂಕ್ಚರ್‌ ಆಗಿತ್ತು. ಅದನ್ನು ಸರಿಪಡಿಸಲು ಮರಿಯಮ್ಮನಹಳ್ಳಿ ಸಮೀಪದ ರಾಷ್ಟ್ರೀಯ ಹೆದ್ದಾರಿ 50ರ ಬಳಿಯ ಶಾಪ್‌ಗೆ ನಾನು, ರವಿ ಹೋಗಿದ್ದೆವು. ಪಂಕ್ಚರ್‌ ಸರಿಪಡಿಸುವವರೆಗೆ ಅಲ್ಲಿಯೇ ಇದ್ದ ಚಹಾದಂಗಡಿಯಲ್ಲಿ ಚಹಾ ಕುಡಿಯುತ್ತಿದ್ದೆವು. ನಾನು ಬೇಗ ಚಹಾ ಕುಡಿದು ಅಂಗಡಿಯವನಿಗೆ ಹಣ ಕೊಡಲು ಹೋಗಿದ್ದೆ. ನನ್ನಿಂದ ಸ್ವಲ್ಪವೇ ದೂರದಲ್ಲಿ ಇನ್ನೂ ಚಹಾ ಕುಡಿಯುತ್ತ ನಿಂತಿದ್ದ ರವಿಗೆ ವೇಗವಾಗಿ ಕಾರು ಬಂದು ಡಿಕ್ಕಿ ಹೊಡೆದಿದೆ. ಇದರಿಂದ ಸುಮಾರು ನೂರು ಮೀಟರ್‌ ದೂರದ ವರೆಗೆ ರವಿಯನ್ನು ಕಾರು ಎಳೆದೊಯ್ದಿದೆ. ಸಮೀಪ ಹೋಗಿ ನೋಡಿದಾಗ ರವಿಯ ಜೀವ ಹೋಗಿತ್ತು. ಅದನ್ನು ನೋಡಿ ನಾನು ಮೂರ್ಛೆ ಬಿದ್ದೆ. ನಂತರ ಏನಾಯ್ತು ಗೊತ್ತಿಲ್ಲ’ ಎಂದು ಲಕ್ಷ್ಮಣ ನಾಯ್ಕ ‘ಪ್ರಜಾವಾಣಿ’ಗೆ ತಿಳಿಸಿದರು.

ಆದರೆ, ಮಾಧ್ಯಮದವರೊಂದಿಗೆ ಮಾತನಾಡುತ್ತ ಎಸ್ಪಿ ಬಾಬಾ ಅದಕ್ಕೆ ತದ್ವಿರುದ್ಧದ ಹೇಳಿಕೆ ನೀಡಿದ್ದಾರೆ. ‘ರವಿ ರಸ್ತೆ ದಾಟಿಕೊಂಡು ಹೋಗುತ್ತಿದ್ದ. ಈ ವೇಳೆ ಅತಿ ವೇಗದಲ್ಲಿ ಬಂದ ಕಾರು ಆತನಿಗೆ ಡಿಕ್ಕಿ ಹೊಡೆದಿದೆ. ಕಾರಿನಲ್ಲಿ ಯಾವ ಸಚಿವರ ಮಗನೂ ಇರಲಿಲ್ಲ. ಅದೆಲ್ಲ ವದಂತಿ. ಘಟನೆಗೆ ಕಾರಣನಾದ ಕಾರು ಚಾಲಕ ರಾಹುಲ್‌ನನ್ನು ಬಂಧಿಸಲಾಗುವುದು’ ಎಂದು ಹೇಳಿದರು.

ಪ್ರತ್ಯಕ್ಷದರ್ಶಿಗಳು, ಪೊಲೀಸ್‌ ಮೂಲಗಳ ಪ್ರಕಾರ, ‘ಘಟನೆ ನಡೆದ ಸ್ಥಳದಲ್ಲಿ ಸಚಿವ ಆರ್‌. ಅಶೋಕ್‌ ಅವರ ಪುತ್ರ ಶರತ್‌ ಇದ್ದರು. ಘಟನೆ ಬಳಿಕ ಬಹಳ ಅವಸರದಲ್ಲಿ ಅವರನ್ನು ಬೇರೊಂದು ಕಾರಿನಲ್ಲಿ ಅಲ್ಲಿಂದ ಕಳುಹಿಸಿಕೊಡಲಾಗಿದೆ. ಘಟನೆಯಲ್ಲಿ ಗಾಯಗೊಂಡಿದ್ದ ಎಲ್ಲರಿಗೂ ನಗರದ ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ಕೊಡಲಾಗಿದೆ. ಇಬ್ಬರ ಸಾವಿಗೆ ಕಾರಣನಾದ ರಾಹುಲ್‌ನನ್ನು ಪೊಲೀಸರು ವಶಕ್ಕೆ ಪಡೆಯಬಹುದಿತ್ತು. ಆದರೆ, ಹಾಗೆ ಮಾಡದೇ ಅವರನ್ನು ಅಲ್ಲಿಂದ ಹೋಗಲು ಬಿಟ್ಟಿದ್ದಾರೆ. ‘ದುಷ್ಕೃತ್ಯ ಎಸಗಿದವರನ್ನು ಆಗ ಬಂಧಿಸದ ಪೊಲೀಸರು ಈಗ ಬಂಧಿಸುತ್ತಾರೆಯೇ?’ ಎಂದು ರವಿ ಅವರ ಅಜ್ಜಿ ಸೀತಾಬಾಯಿ ಅಸಮಾಧಾನ ಹೊರಹಾಕಿದ್ದಾರೆ.

ಫೆ. 10ರಂದು ಮಧ್ಯಾಹ್ನ 3ಕ್ಕೆ ಐವರು ಯುವಕರು ತಾಲ್ಲೂಕಿನ ಹಂಪಿ ನೋಡಿಕೊಂಡು ಬೆಂಗಳೂರಿಗೆ ವಾಪಸಾಗುತ್ತಿದ್ದರು. ಮರಿಯಮ್ಮನಹಳ್ಳಿ ಸಮೀಪ ರಸ್ತೆಬದಿಯ ಚಹಾದಂಗಡಿ ಬಳಿ ನಿಂತಿದ್ದ ರವಿ ನಾಯ್ಕ ಅವರಿಗೆ ಕಾರು ಡಿಕ್ಕಿ ಹೊಡೆದಿದೆ. ರವಿ ಸ್ಥಳದಲ್ಲೇ ಮೃತಪಟ್ಟರೆ, ಕಾರಿನಲ್ಲಿದ್ದ ಸಚಿನ್‌ ಮಾರ್ಗಮಧ್ಯೆ ಕೊನೆಯುಸಿರೆಳೆದಿದ್ದರು.

ಕಾರು ಚಾಲಕ ರಾಹುಲ್‌, ರಾಕೇಶ್‌, ಶಿವಕುಮಾರ ಹಾಗೂ ವರುಣ್‌ ಗಾಯಗೊಂಡಿದ್ದರು ಎಂದು ಎಫ್‌.ಐ.ಆರ್‌.ನಲ್ಲಿ ದಾಖಲಾಗಿದೆ. ಆದರೆ, ಸಚಿವ ಅಶೋಕ್‌ ಅವರ ಮಗನೇ ಕಾರು ಓಡಿಸುತ್ತಿದ್ದ. ಆತನ ರಕ್ಷಣೆಗೆ ಪೊಲೀಸರು ಯತ್ನಿಸುತ್ತಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.

ತರಾತುರಿಯಲ್ಲಿ ಮರಣೋತ್ತರ ಪರೀಕ್ಷೆ

ಕಾರಿನಲ್ಲಿದ್ದ ಐವರ ಪೈಕಿ ಮೃತ ಸಚಿನ್‌ ಅವರ ಮರಣೋತ್ತರ ಪರೀಕ್ಷೆಯನ್ನು ತರಾತುರಿಯಲ್ಲಿ ನಡೆಸಿ, ಶವವನ್ನು ಬೇಗ ಕಳುಹಿಸಿಕೊಟ್ಟಿರುವುದು ಗೊತ್ತಾಗಿದೆ.

‘ಸಚಿವ ಆರ್‌. ಅಶೋಕ್‌ ಕಡೆಯವರು ಎಂದಿದ್ದಕ್ಕೆ ತಕ್ಷಣವೇ ಅಪಘಾತದಲ್ಲಿ ಗಾಯಗೊಂಡಿದ್ದ ಎಲ್ಲರಿಗೂ ಚಿಕಿತ್ಸೆಗೆ ವ್ಯವಸ್ಥೆ ಮಾಡಿದ್ದೆವು. ಸಚಿನ್‌ ಮೃತದೇಹವನ್ನು ಬೇಗ ಬೆಂಗಳೂರಿಗೆ ತೆಗೆದುಕೊಂಡು ಹೋಗಬೇಕು ಎಂದು ಒತ್ತಡ ಹೇರಿದ್ದಕ್ಕೆ ರಾತ್ರಿಯೇ ಮರಣೋತ್ತರ ಪರೀಕ್ಷೆ ಮಾಡಿ ಕಳುಹಿಸಿಕೊಟ್ಟೆವು. ರಾಕೇಶ್‌ ಎಂಬುವರ ಬೆನ್ನು ಮೂಳೆ ಮುರಿದರೆ, ಶಿವಕುಮಾರ, ರಾಹುಲ್‌ ಹಾಗೂ ವರುಣ್‌ಗೆ ಸಣ್ಣ ಗಾಯಗಳಾಗಿದ್ದವು. ಎಲ್ಲರಿಗೂ ಪ್ರಾಥಮಿಕ ಚಿಕಿತ್ಸೆ ನೀಡಿದ್ದೆವು. ಬೆಳಿಗ್ಗೆ ಹೋಗುವಂತೆ ತಿಳಿಸಿದ್ದರೂ ಅವರು ರಾತ್ರಿಯೇ ಅವಸರದಲ್ಲಿ ಹೊರಟು ಹೋದರು’ ಎಂದು ಡಾ. ಮಹಾಂತೇಶ್‌ ತಿಳಿಸಿದರು.

ಮಗನಿಗೆ ಸಂಬಂಧವಿಲ್ಲ:ಆರ್.ಅಶೋಕ

ಬೆಂಗಳೂರು: ‘ಹೊಸಪೇಟೆ ತಾಲ್ಲೂಕಿನ ಮರಿಯಮ್ಮನಹಳ್ಳಿ ಬಳಿ ಅಪಘಾತಕ್ಕೆ ಒಳಗಾದ ಕಾರಿಗೂ ನನ್ನ ಮಗನಿಗೂ ಯಾವುದೇ ಸಂಬಂಧವಿಲ್ಲ’ ಎಂದು ಕಂದಾಯ ಸಚಿವ ಆರ್.ಅಶೋಕ
ಸ್ಪಷ್ಟಪಡಿಸಿದ್ದಾರೆ.

‘ನನ್ನ ಮಗನಿಗೆ ಸಂಬಂಧ ಇಲ್ಲ ಎಂದ ಮೇಲೆ ಸ್ಪಷ್ಟನೆ ನೀಡುವ ಅಗತ್ಯವೇ ಇಲ್ಲ. ಯಾವ ಸಂಸ್ಥೆ ಹೆಸರಿನಲ್ಲಿ ಕಾರು ನೋಂದಣಿಯಾಗಿದೆ ಎಂಬುದು ಗೊತ್ತಿಲ್ಲ’ ಎಂದು ತಿಳಿಸಿದರು.

‘ಘಟನೆ ಸಂಬಂಧ ಎಫ್‌ಐಆರ್ ದಾಖಲಾಗಿದೆ. ಪೊಲೀಸರು ಅಗತ್ಯ ಕ್ರಮಗಳನ್ನು ಕೈಗೊಂಡಿದ್ದಾರೆ. ಪ್ರಕರಣ ತನಿಖೆ ಹಂತದಲ್ಲಿದ್ದು, ಈ ಸಮಯದಲ್ಲಿ ನಾನು ಪ್ರತಿಕ್ರಿಯಿಸುವುದು ಸರಿಯಲ್ಲ. ತಪ್ಪು ಮಾಡಿದವರಿಗೆ ಕಾನೂನು ಪಾಠ ಕಲಿಸುತ್ತದೆ. ತನಿಖೆ ನಡೆದು ಸತ್ಯ ಹೊರ ಬರಲಿದ್ದು, ಕಾನೂನಿನ ಮುಂದೆ ಎಲ್ಲರೂ ಸಮಾನರು. ಈ ವಿಚಾರದಲ್ಲಿ ರಾಜಕೀಯ ಮಾಡಲು ಹೋಗುವುದಿಲ್ಲ. ತಪ್ಪಿತಸ್ಥರಿಗೆ ಶಿಕ್ಷೆಯಾಗಲಿ’ ಎಂದು ಹೇಳಿದರು.

ಕಾಂಗ್ರೆಸ್ ಆರೋಪ: ‘ಅಪಘಾತ ಪ್ರಕರಣದಲ್ಲಿ ಸಚಿವ ಆರ್.ಅಶೋಕ ಅವರ ಪುತ್ರನ ರಕ್ಷಣೆಗೆ ಪಿತೂರಿ ನಡೆದಿದೆ’ ಎಂದು ಕಾಂಗ್ರೆಸ್ ಟ್ವೀಟ್ ಮಾಡಿದೆ.

‘ತನಿಖೆಗೆ ಮುನ್ನ ಪೊಲೀಸರು ಕ್ಲೀನ್ ಚಿಟ್ ನೀಡಿದ್ದಾರೆ. ಅಜಾಗರೂಕ ಚಾಲನೆಯಿಂದಾಗಿ ಅಮಾಯಕರೊಬ್ಬರು ಸಾವನ್ನಪ್ಪಿದ್ದಾರೆ. ನಿಷ್ಪಕ್ಷಪಾತ ತನಿಖೆ ನಡೆಸಿ, ನ್ಯಾಯ ಒದಗಿಸಬೇಕು’ ಎಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.