
ಮರಿಯಮ್ಮನಹಳ್ಳಿ: ಪಟ್ಟಣದಲ್ಲಿ ಸಕಲ ಸೌಲಭ್ಯಗಳನ್ನು ಒಳಗೊಂಡ ಒಳಾಂಗಣ ಹಾಗೂ ಹೊರಾಂಗಣ ಹೊಂದಿರುವ ಮಾದರಿ ಕ್ರೀಡಾಂಗಣ ನಿರ್ಮಾಣ ಮಾಡಿಕೊಡುವುದಾಗಿ ಸಂಸದ ಇ.ತುಕಾರಾಂ ಭರವಸೆ ನೀಡಿದರು.
ಸ್ಥಳೀಯ ವಿನಾಯಕ ಪ್ರೌಢಶಾಲಾ ಮೈದಾನದಲ್ಲಿ ಶುಕ್ರವಾರ ಸಂಜೆ ಆರಂಭವಾದ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳ 14 ಮತ್ತು 17ವರ್ಷ ವಯೋಮಿತಿಯ ಬಾಲಕ, ಬಾಲಕಿಯರ ರಾಜ್ಯ ಮಟ್ಟದ ಕುಸ್ತಿ ಪಂದ್ಯಾವಳಿಗೆ ಚಾಲನೆ ನೀಡಿ ಅವರು ಮಾತನಾಡಿದರು.
ಸ್ಥಳೀಯ ಶಾಸಕರ ಸಹಯೋಗದಲ್ಲಿ ಇದಕ್ಕಾಗಿ ನೀಲನಕ್ಷೆಯನ್ನು ಸಿದ್ಧಪಡೆಸಿಕೊಡುವಂತೆ ಸೂಚಿಸಿದ ಅವರು, ದೇಶಿ ಕ್ರೀಡೆಯಾದ ಕುಸ್ತಿ ಪಂದ್ಯಾವಳಿಯಲ್ಲಿ ವಿಜೇತರಾಗಿ ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗುವ ಕುಸ್ತಿಪಟುಗಳಿಗೆ ಜಿಂದಾಲ್‍ನಲ್ಲಿ ಕೋಚಿಂಗ್ ಕೊಡಿಸಲಾಗುವುದು. ರಂಗಕಲೆಗಳಿಗೆ ಹೆಸರಾದ ಪಟ್ಟಣದಲ್ಲಿ ಸೂಕ್ತವಾದ ರಂಗಮಂದಿರ ನಿರ್ಮಾಣಕ್ಕೂ ಸಹಾಯ ನೀಡುವ ಭರವಸೆಯನ್ನು ನೀಡಿದರು.
ಶಾಸಕ ಕೆ.ನೇಮರಾಜ ನಾಯ್ಕ ಮಾತನಾಡಿ, ‘ಇಲ್ಲಿನ ಕುಸ್ತಿಪಟುಗಳು ರಾಜ್ಯ ಸೇರಿದಂತೆ ರಾಷ್ಟ್ರ ಮಟ್ಟದಲ್ಲಿಯೂ ಹೆಸರನ್ನು ತಂದಿದ್ದಾರೆ. ಆದ್ದರಿಂದ ದೇಶಿ ಕ್ರೀಡೆ ಕುಸ್ತಿ ಕಲೆಯನ್ನು ಉಳಿಸಿ ಬೆಳಸುವ ನಿಟ್ಟಿನಲ್ಲಿ ಎಲ್ಲರೂ ಮುಂದಾಗಬೇಕು’ ಎಂದರು.
ಹರಪನಹಳ್ಳಿ ಶಾಸಕಿ ಲತಾ ಮಲ್ಲಿಕಾರ್ಜುನ, ಜಿಲ್ಲಾಧಿಕಾರಿ ಕವಿತಾ ಎಸ್.ಮನ್ನಿಕೇರಿ, ಡಿಡಿಪಿಐ ವೆಂಕಟೇಶ್ ರಾಮಚಂದ್ರಪ್ಪ, ಕ್ಷೇತ್ರ ಶಿಕ್ಷಣಾಧಿಕಾರಿ ಶೇಖರಪ್ಪ ಹೊರಪೇಟೆ ಹಾಗೂ ಅಂತರಾಷ್ಟ್ರೀಯ ಕುಸ್ತಿಪಟು ವಿನೋದ್ ಮಾತನಾಡಿದರು.
ತಹಶೀಲ್ದಾರ್ ಶೃತಿ ಎಂ.ಮಳ್ಳಪ್ಪಗೌಡ, ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಅಧ್ಯಕ್ಷ ಕೆ.ಶಿವಮೂರ್ತಿ, ಬಾದಾಮಿ ಮೃತ್ಯುಂಜಯ ಸೇರಿದಂತೆ ರಾಜ್ಯ ಹಾಗೂ ಅಂತರಾಷ್ಟ್ರೀಯ ಕುಸ್ತಿಪಟುಗಳು, ಸ್ಥಳೀಯ ಮುಖಂಡರು ಜನಪ್ರತಿನಿಧಿಗಳು ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.