ADVERTISEMENT

ರಿಯಾಲಿಟಿ ಷೋಗಳಲ್ಲಿ ಉದ್ಯೋಗ ಅವಕಾಶ: ಟಿ. ಶರಣಯ್ಯ

​ಪ್ರಜಾವಾಣಿ ವಾರ್ತೆ
Published 3 ಮಾರ್ಚ್ 2021, 15:53 IST
Last Updated 3 ಮಾರ್ಚ್ 2021, 15:53 IST

ವಿಜಯನಗರ (ಹೊಸಪೇಟೆ): ‘ಹೊಸತನ ಮೈಗೂಡಿಸಿಕೊಳ್ಳುವುದರ ಮೂಲಕ ರಿಯಾಲಿಟಿ ಷೋಗಳಲ್ಲಿ ಉದ್ಯೋಗ ಅವಕಾಶ ಗಿಟ್ಟಿಸಿಕೊಳ್ಳಬಹುದು’ ಎಂದು ಧಾರಾವಾಹಿ, ರಿಯಾಲಿಟಿ ಷೋ ನಿರ್ದೇಶಕ ಟಿ. ಶರಣಯ್ಯ ತಿಳಿಸಿದರು.

ಇಲ್ಲಿನ ಹಂಪಿ ಕನ್ನಡ ವಿಶ್ವವಿದ್ಯಾಲಯದ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗವು ಬುಧವಾರ ಆನ್‌ಲೈನ್‌ನಲ್ಲಿ ಏರ್ಪಡಿಸಿದ್ದ ‘ರಿಯಾಲಿಟಿ ಷೋಗಳಲ್ಲಿ ಉದ್ಯೋಗ ಅವಕಾಶಗಳು’ ಕುರಿತ ಕಾರ್ಯಕ್ರಮದಲ್ಲಿ ಮಾತನಾಡಿದರು.

‘ಪ್ರಸ್ತುತ ದಿನಗಳಲ್ಲಿ ರಿಯಾಲಿಟಿ ಷೋಗಳು ಜನರನ್ನು ಆರ್ಕಷಿಸುವ ಕಾರ್ಯಕ್ರಮಗಳಾಗಿವೆ. ಪತ್ರಿಕೋದ್ಯಮದ ವಿದ್ಯಾರ್ಥಿಗಳು ಕ್ರಿಯಾಶೀಲತೆಯಿಂದ ಉದ್ಯೋಗ ಪಡೆಯಬಹುದು’ ಎಂದರು.

ADVERTISEMENT

‘ರಿಯಾಲಿಟಿ ಷೋಗಳು ಬಜೆಟ್ ಆಧಾರದ ಮೇಲೆ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತವೆ. ಪ್ರೇಕ್ಷಕರನ್ನು ಸೆಳೆಯಲು ರಿಯಾಲಿಟಿ ಷೋ ನಿರ್ಮಾಣ ಮತ್ತು ನಿರ್ದೇಶನ ಸವಾಲಿನ ಕೆಲಸವಾಗಿರುತ್ತದೆ. ಮನಸ್ಸಿನಲ್ಲಿ ಮೂಡಿದ ಹಾಗೆಯೇ ಪರದೆಯ ಮೇಲೆ ಯಥಾವತ್ತಾಗಿ ಮೂಡಿಸುವಲ್ಲಿ ಕಾರ್ಯಕ್ರಮ ನಿರ್ದೇಶಕರು ಮತ್ತು ತಾಂತ್ರಿಕ ವಿಭಾಗದವರ ಪಾತ್ರ ಪ್ರಮುಖವಾಗಿರುತ್ತದೆ’ ಎಂದು ಹೇಳಿದರು.

ಕುಲಸಚಿವ ಸುಬ್ಬಣ್ಣ ರೈ, ‘ಮುದ್ರಣ ಮಾಧ್ಯಮಕ್ಕೆ ಸೀಮಿತವಾಗಿದ್ದ ಮಾಧ್ಯಮವು ಇಂದು ತಂತ್ರಜ್ಞಾನದ ಆವಿಷ್ಕಾರದಿಂದಾಗಿ ಹಲವಾರು ಆಯಾಮಗಳನ್ನು ಪಡೆದುಕೊಂಡು ಮುನ್ನಡೆಯುತ್ತಿದೆ. ಪತ್ರಿಕೋದ್ಯಮ ವಿದ್ಯಾರ್ಥಿಗಳು ಕೌಶಲ ಬೆಳೆಸಿಕೊಳ್ಳುವುದು ಅಗತ್ಯ’ ಎಂದರು.

ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ಮುಖ್ಯಸ್ಥ ಎಸ್.ವೈ ಸೋಮಶೇಖರ, ಸಹಾಯಕ ಗ್ರಂಥಪಾಲಕ ಶಂಕರಗೌಡ, ಪ್ರಾಧ್ಯಾಪಕ ಎಸ್‌.ಕೆ. ಲೋಕೇಶ, ಸಂತೋಷ ಕುಮಾರ ಚಿನ್ನಣ್ಣವರ, ಸಿದ್ದಾರ್ಥ, ಮಾಧ್ಯಮ ಅಧ್ಯಯನ ಕೇಂದ್ರದ ಮುಖ್ಯಸ್ಥ ಬಿ.ಟಿ ಮುದ್ದೇಶ, ದಾವಣಗೆರೆ ವಿಶ್ವವಿದ್ಯಾಲಯದ ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥ ಶಿವಕುಮಾರ ಕಣಸೋಗಿ, ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯದ ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥ ವಿ. ರಾಕೇಶ್‌ ತಾಳಿಕೋಟೆ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.