ADVERTISEMENT

ತಾಯಿ, ಶಿಶು ಸಾವು: ವೈದ್ಯರ ಅಮಾನತಿಗೆ ಆಗ್ರಹ

ದಲಿತ, ಶೋಷಿತ ಪರ ಸಂಘಟನೆಗಳಿಂದ ಬೃಹತ್‌ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 30 ಸೆಪ್ಟೆಂಬರ್ 2025, 4:59 IST
Last Updated 30 ಸೆಪ್ಟೆಂಬರ್ 2025, 4:59 IST
ಕಂಪ್ಲಿ ಡಾ. ಅಂಬೇಡ್ಕರ್ ವೃತ್ತದಲ್ಲಿ ಸೋಮವಾರ ದಲಿತಪರ ಸಂಘಟನೆಗಳು ಸೋಮವಾರ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಮೃತ ಬಾಣಂತಿಯ ಪತಿ ರಾಮಸಾಗರ ಸಿ. ವೀರೇಶ್ ದುಃಖತಪ್ತರಾಗಿ ಮಾತನಾಡಿದರು
ಕಂಪ್ಲಿ ಡಾ. ಅಂಬೇಡ್ಕರ್ ವೃತ್ತದಲ್ಲಿ ಸೋಮವಾರ ದಲಿತಪರ ಸಂಘಟನೆಗಳು ಸೋಮವಾರ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಮೃತ ಬಾಣಂತಿಯ ಪತಿ ರಾಮಸಾಗರ ಸಿ. ವೀರೇಶ್ ದುಃಖತಪ್ತರಾಗಿ ಮಾತನಾಡಿದರು   

ಕಂಪ್ಲಿ: ಇಲ್ಲಿಯ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಹೆರಿಗೆ ಬಳಿಕ ತಾಯಿ ಮತ್ತು ಶಿಶು ಸಾವಿಗೆ ಕಾರಣರಾದ ವೈದ್ಯ ಮತ್ತು ಶುಶ್ರೂಷಕಿಯನ್ನು ಅಮಾನತು ಮಾಡುವಂತೆ ಒತ್ತಾಯಿಸಿ ಅನೇಕ ದಲಿತಪರ ಸಂಘಟನೆಗಳು ಡಾ.ಅಂಬೇಡ್ಕರ್ ವೃತ್ತದಲ್ಲಿ ಸೋಮವಾರ ಪ್ರತಿಭಟನೆ ನಡೆಸಿದರು.

ಬಾಣಂತಿ ಸಿ. ಚಂದ್ರಮ್ಮ, ನವಜಾತ ಶಿಶು ಸಾವಿಗೆ ಕಾರಣರಾದ ಸ್ತ್ರೀರೋಗ ತಜ್ಞ ಡಾ.ರವೀಂದ್ರ ಕನಕೇರಿ, ಶುಶ್ರೂಷಕಿ ರಜನಿ ಅವರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಿ ಅಮಾನತುಗೊಳಿಸಬೇಕು. ಮೃತರ ಕುಟುಂಬಕ್ಕೆ ₹ 20 ಲಕ್ಷ ಪರಿಹಾರ ನೀಡಬೇಕು. 15 ದಿನದಲ್ಲಿ ಬೇಡಿಕೆ ಈಡೇರದಿದ್ದಲ್ಲಿ ಕಂಪ್ಲಿ ಬಂದ್ ಮಾಡಿ ತೀವ್ರ ಪ್ರತಿಭಟನೆ ನಡೆಸಲಾಗುವುದು ಎಂದು ಪ್ರತಿಭಟನಕಾರರು ಎಚ್ಚರಿಸಿದರು.

ದಲಿತಪರ ಸಂಘಟನೆಗಳ ಪದಾಧಿಕಾರಿಗಳಾದ ಜಿ.ರಾಮಣ್ಣ, ಕೆ.ಶಂಕರ ನಂದಿಹಾಳ್, ಮೃತ ಬಾಣಂತಿಯ ಪತಿ ರಾಮಸಾಗರ ಸಿ.ವೀರೇಶ್, ಸಿ.ಎ.ಚನ್ನಪ್ಪ, ಎ.ಎಸ್.ಯಲ್ಲಪ್ಪ, ವಕೀಲ ಸೋಮಪ್ಪ ಚಲವಾದಿ, ದೊಡ್ಡಬಸವರಾಜ ಬಡಗಿ, ವಕೀಲ ರುದ್ರಪ್ಪ, ಸಿ.ಶಿವಕುಮಾರ್, ಹೊಳ್ಳೆಪ್ಪ, ಸಿ.ವಿರುಪಾಕ್ಷಿ, ರಾಘವೇಂದ್ರ, ಶಂಕರ್, ಎಸ್.ಚಂದ್ರಶೇಖರಗೌಡ, ಎಂ.ರತ್ನಮ್ಮ, ವಿ.ಉಷಾ ಸೇರಿ ಅನೇಕರು ಘಟನೆ ಖಂಡಿಸಿ ಮಾತನಾಡಿದರು.

ADVERTISEMENT

ಎಫ್.ಐ.ಆರ್ ದಾಖಲಿಸುವ ಕುರಿತಂತೆ ಕಾನೂನಡಿ ತೆಗೆದುಕೊಳ್ಳಬೇಕಾದ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಪಿಐ ಕೆ.ಬಿ.ವಾಸುಕುಮಾರ್ ತಿಳಿಸಿದರು.

ಜಿಲ್ಲಾ ಆರ್.ಸಿ.ಎಚ್ ಅಧಿಕಾರಿ ಡಾ.ಹನುಮಂತಪ್ಪ ಮನವಿ ಸ್ವೀಕರಿಸಿ, ಈಗಾಗಲೇ ಇಬ್ಬರನ್ನು ವರ್ಗಾಯಿಸಲಾಗಿದೆ. ವಿಚಾರಣಾ ವರದಿಯನ್ನು ಇಲಾಖೆ ಆಯುಕ್ತರಿಗೆ ಸಲ್ಲಿಸಿದ್ದು, ಮುಂದಿನ ಕ್ರಮ ಜರುಗಿಸಲಿದ್ದಾರೆ ಎಂದು ತಿಳಿಸಿದರು.

ಗ್ರೇಡ್-2 ತಹಶೀಲ್ದಾರ್ ಎಂ.ಆರ್.ಷಣ್ಮುಖ ಅವರಿಗೂ ಮನವಿ ಸಲ್ಲಿಸಿದರು.

ಪ್ರತಿಭಟನೆಯಲ್ಲಿ ರಿಪಬ್ಲಿಕನ್ ಸೇನಾ, ದಸಂಸ (ಭೀಮವಾದ), ಅಖಿಲ ಕರ್ನಾಟಕ ರಾಜ್ಯ ಕಿಸಾನ್ ಜಾಗೃತಿ ಸಂಘದ ವಿಜಯನಗರ, ಬಳ್ಳಾರಿ ಜಿಲ್ಲಾ ಸಮಿತಿ, ಕರ್ನಾಟಕ ದಲಿತ ರಕ್ಷಣಾ ವೇದಿಕೆ ಜಿಲ್ಲಾ ಸಮಿತಿ, ಡಾ.ಬಿ.ಆರ್.ಅಂಬೇಡ್ಕರ್ ದಲಿತ ಸಂಘ, ಛಲವಾದಿ ಮಹಾಸಭಾ, ಅಂಬೇಡ್ಕರ್ ಸ್ವಾಭಿಮಾನಿ ಸೇನಾ, ಭೀಮ್ ಆರ್ಮಿ, ದಲಿತ ಸಂಘಟನೆಗಳ ಪದಾಧಿಕಾರಿಗಳು, ಮಹಿಳೆಯರು ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.