ಬಳ್ಳಾರಿ ನಗರದಲ್ಲಿ ಶುಕ್ರವಾರ ಕಾರ್ಯಾರಂಭಗೊಂಡ ನೂತನ ಸಂಸದರ ಕಚೇರಿಯಲ್ಲಿ ಪೂಜೆ ನೆರವೇರಿಸಿದ ಸಂಸದ ತುಕಾರಾಂ ಮತ್ತು ಶಾಸಕಿ ಅನ್ನಪೂರ್ಣ
ಬಳ್ಳಾರಿ: ಬಳ್ಳಾರಿ ಲೋಕಸಭಾ ಕ್ಷೇತ್ರದ ಸದಸ್ಯ ಇ. ತುಕಾರಾಂ ಅವರು ಶುಕ್ರವಾರ ಸಂಸದರ ಕಚೇರಿ ಆರಂಭಿಸಿದರು.
ಬಳ್ಳಾರಿ ಜಿಲ್ಲಾಧಿಕಾರಿ ಕಚೇರಿ ಆವರಣದ ಉಪವಿಭಾಗಾಧಿಕಾರಿ ಕಚೇರಿ ಪಕ್ಕದಲ್ಲೇ ಸಂಸದರ ಕಚೇರಿ ಆರಂಭವಾಗಿದೆ. ತುಕಾರಾಂ ಮತ್ತು ಶಾಸಕಿ ಅನ್ನಪೂರ್ಣ ಪೂಜೆ ನೆರವೇರಿಸಿದರು. ಅನ್ನಪೂರ್ಣ ಅವರು ಟೇಪ್ ಕತ್ತರಿಸುವ ಮೂಲಕ ಕಚೇರಿಯನ್ನು ಉದ್ಘಾಟಿಸಿದರು.
ಬಳಿಕ ಮಾತನಾಡಿದ ಸಂಸದ ತುಕಾರಾಂ, ‘ಸಂಸದರ ಕಚೇರಿಯನ್ನು ಆರಂಭಿಸಿದ್ದೇನೆ. ವಿಜಯನಗರದಲ್ಲೂ ತೆರೆದಿದ್ದೇವೆ. ಕೇಂದ್ರ, ರಾಜ್ಯ ಸರ್ಕಾರದ ಯೋಜನೆಗಳ ಅನುಷ್ಠಾನದ ಆಶೋತ್ತರಗಳ ಸಾಕಾರದ ನಿರೀಕ್ಷೆ ಇದೆ’ ಎಂದರು.
‘ಮೋತಿ ರೈಲ್ವೆ ಮೇಲ್ಸೇತುವೆ, ಹಗರಿಬೊಮ್ಮನಹಳ್ಳಿಯ ಲೆವೆಲ್ ಕ್ರಾಸಿಂಗ್ ಪ್ರಸ್ತಾವನೆಗಳನ್ನು ಕೇಂದ್ರ ರೈಲ್ವೆ ಇಲಾಖೆಗೆ ನೀಡಲಾಗಿದೆ. ಸಿದ್ದಮ್ಮನಹಳ್ಳಿ ಮೇಲ್ಸೇತುವೆ ಕೆಲಸ ಮುಗಿಯುತ್ತಿದೆ. ಬಸವ ಜಯಂತಿಗೆ ಉದ್ಘಾಟನೆಯಾಗಲಿದೆ. ಎಲ್ಲ ಯೋಜನೆಗಳ ವೇಗ ಹೆಚ್ಚಿಸಲು ತಿಳಿಸಿದ್ದೇನೆ. ಹೆದ್ದಾರಿ ಅಭಿವೃದ್ಧಿಗೂ ಕೇಂದ್ರ ಅನುದಾನ ನೀಡುವುದಾಗಿ ಹೇಳಿದೆ. ರಿಂಗ್ ರಸ್ತೆಗಳೂ ಆಗುತ್ತಿವೆ’ ಎಂದರು.
‘ಬಳ್ಳಾರಿ ಹೊರ ವಲಯದಲ್ಲಿ ರೈಲ್ವೆ ಟ್ರ್ಯಾಕ್‌ವೊಂದನ್ನು ಹಾಕಲಾಗುತ್ತಿದೆ. ಆದರೆ, ಅದು ಅವೈಜ್ಞಾನಿಕ ಎಂಬ ದೂರುಗಳು ಕೇಳಿ ಬಂದಿವೆ. ಅವುಗಳನ್ನು ಪರಾಮರ್ಶೆ ಮಾಡಿ ಎಲ್ಲರಿಗೂ ಅನುಕೂಲವಾಗುವಂತೆ ತೀರ್ಮಾನ ಕೈಗೊಳ್ಳುತ್ತೇನೆ’ ಎಂದರು.
‘ಗಣಿ ಲಾರಿಗಳಿಂದ ಅಪಘಾತವಾಗಿ ಸಾವುಗಳು ಹೆಚ್ಚುತ್ತಿರುವುದು ಗಮನಕ್ಕೆ ಬಂದಿದೆ. ಅದಿರು ಉತ್ಪಾದನೆಗೆ ಅನುಗುಣವಾಗಿ ಮೂಲಸೌಕರ್ಯ ಅಭಿವೃದ್ಧಿಯಾಗಿಲ್ಲ. ಈ ವಿಷಯವನ್ನು ಸಿಇಸಿ ಗಮನಕ್ಕೆ ತರಲಾಗುವುದು. ಅಪಘಾತ ತಪ್ಪಿಸಲು ಜಿಲ್ಲಾಧಿಕಾರಿ, ಪೊಲೀಸ್ ಇಲಾಖೆಗೆ ಸೂಚನೆ ನೀಡಲಾಗಿದ್ದು ಕ್ರಮ ಕೈಗೊಳ್ಳುವಂತೆ ತಿಳಿಸಲಾಗಿದೆ’ ಎಂದರು.
ಜಿಲ್ಲೆಯಲ್ಲಿ ಅನದಿಕೃತ ಮದ್ಯ ಮಾರಾಟವನ್ನು ನಿಲ್ಲಿಸುವಂತೆ ತಿಳಿಸಿದ್ದೇನೆ ಎಂದೂ ಅವರು ಇದೇ ವೇಳೆ ಮಾಹಿತಿ ನೀಡಿದರು.
‘ಬಳ್ಳಾರಿಯ ಪ್ರವಾಸಿ ಮಂದಿರದ ಬಳಿ ಜನಸಂಪರ್ಕ ಕಚೇರಿಯನ್ನು ಒಂದು ಕೋಟಿ ವೆಚ್ಚದಲ್ಲಿ ನಿರ್ಮಿಸುತ್ತಿದ್ದೇವೆ. ಯುಗಾದಿಗೆ ಭೂಮಿ ಪೂಜೆ ಮಾಡಲಿದ್ದೇವೆ’ ಎಂದರು.
ಇದೇ 27ಕ್ಕೆ ಕೆಡಿಪಿ ಸಭೆ ನಡೆಯಲಿದೆ. ಅದಕ್ಕೆ ಜಿಲ್ಲಾ ಉಸ್ತುವಾರಿ ಸಚಿವರು ಬರಲಿದ್ದಾರೆ ಎಂದು ಅವರು ತಿಳಿಸಿದರು.
‘ರಾಜ್ಯದಲ್ಲಿರುವ ಕಾಂಗ್ರೆಸ್ ಸರ್ಕಾರ ಸುಭದ್ರವಾಗಿದೆ. ಎಲ್ಲರೂ ಸೇರಿ ಊಟ ಮಾಡುವುದರಲ್ಲಿ ತಪ್ಪೇನಿಲ್ಲ. ನಾವೆಲ್ಲರೂ ಒಟ್ಟಿಗಿದ್ದೇವೆ. ಐದು ವರ್ಷ ಸರ್ಕಾರ ಮಾಡುತ್ತೇವೆ. 2028ಕ್ಕೂ ನಮ್ಮದೇ ಸರ್ಕಾರ ಬರಲಿದೆ. ಐದು ವರ್ಷವೂ ಸಿದ್ದರಾಮಯ್ಯ ಅವರೇ ಸಿಎಂ ಆಗಿರಲಿದ್ದಾರೆ’ ಎಂದು ಸಂಸದ ತುಕಾರಾಂ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.