ADVERTISEMENT

ಬಳ್ಳಾರಿ: ಬಡವರಿಗೆ ಸಂಜೀವಿನಿಯಾದ ಎಂಆರ್‌ಐ

ಎನ್‌ಎಂಡಿಸಿಯ ಸಿಎಸ್‌ಆರ್‌ ನಿಧಿಯಲ್ಲಿ ಖರೀದಿ, ಸೇವೆ ಪಡೆದವರಲ್ಲಿ ಬಿಪಿಎಲ್‌ ಕಾರ್ಡುದಾರರೇ ಹೆಚ್ಚು

ಆರ್. ಹರಿಶಂಕರ್
Published 16 ಡಿಸೆಂಬರ್ 2025, 5:54 IST
Last Updated 16 ಡಿಸೆಂಬರ್ 2025, 5:54 IST
ಬಳ್ಳಾರಿ ನಗರದಲ್ಲಿರುವ ಜಿಲ್ಲಾಸ್ಪತ್ರೆಯಲ್ಲಿರುವ ಎಂಆರ್‌ಐ ಯಂತ್ರ  
ಬಳ್ಳಾರಿ ನಗರದಲ್ಲಿರುವ ಜಿಲ್ಲಾಸ್ಪತ್ರೆಯಲ್ಲಿರುವ ಎಂಆರ್‌ಐ ಯಂತ್ರ     

ಬಳ್ಳಾರಿ: ಎಂಆರ್‌ಐ (ಮ್ಯಾಗ್ನೆಟಿಕ್ ರೆಸೋನೆನ್ಸ್ ಇಮೇಜಿಂಗ್) ಮಾಡಿಸಿ ಎಂದು ವೈದ್ಯರೇನಾದರೂ ಚೀಟಿ ಬರೆದುಕೊಟ್ಟರೆ ಬಡವರಿಗೆ, ಮಧ್ಯಮ ವರ್ಗದವರಿಗೆ ಎಲ್ಲಿಲ್ಲದ ಭಯ. 

ಸಾವಿರಾರು ರೂಪಾಯಿ ಶುಲ್ಕ, ತುರ್ತು ಪರಿಸ್ಥಿತಿ ಇದ್ದರೂ ವಾರಗಟ್ಟಲೆ ಕಾಯಬೇಕಾದ ಅನಿವಾರ್ಯತೆ... ಇಂಥ ಕಾರಣಗಳಿಂದಾಗಿ ಎಂಎಆರ್‌ಐ ಎಂದರೆ ಎಂಥವರೂ ನಡುಗುವ  ಪರಿಸ್ಥಿತಿ. 

ಆದರೆ, ಬಳ್ಳಾರಿ ಜಿಲ್ಲೆಯ ಅಧಿಕಾರಿಗಳು, ರಾಜಕಾರಣಿಗಳ ಮುನ್ನೋಟ, ನಿರಂತರ ಪ್ರಯತ್ನದ ಫಲವಾಗಿ ಬಳ್ಳಾರಿ ಜಿಲ್ಲಾ ಆಸ್ಪತ್ರೆಯಲ್ಲಿ ರಾಜ್ಯದಲ್ಲೇ ಅತ್ಯಾಧುನಿಕ ಎನಿಸಿದ ಎಂಆರ್‌ಐ ಯಂತ್ರವನ್ನು ಅನುಸ್ಥಾಪಿಸಲಾಗಿದ್ದು, ಬಡವರಿಗೆ ಸಂಜೀವಿನಿಯಾಗಿ ಪರಿಣಮಿಸಿದೆ. 

ADVERTISEMENT

ರಾಷ್ಟ್ರೀಯ ಖನಿಜನ ಅಭಿವೃದ್ಧಿ ನಿಗಮ ( ಎನ್‌ಎಂಡಿಸಿ)ದ ‘ಕಾರ್ಪೊರೇಟರ್‌ ಸಾಮಾಜಿಕ ಹೊಣೆಗಾರಿಕೆ (ಸಿಎಸ್‌ಆರ್)’ ನಿಧಿಯ ಅಡಿಯಲ್ಲಿ ಖರೀದಿಸಿ ತರಲಾಗಿರುವ ಎಂಆರ್‌ಐ ಯಂತ್ರ ಜಿಲ್ಲೆಯ ಜನರಿಗೆ ವರವಾಗಿ ಪರಿಣಮಿಸಿದೆ. 

ಖಾಸಗಿ ಡೈಗ್ನಾಸ್ಟಿಕ್‌ ಲ್ಯಾಬ್‌ಗಳಲ್ಲಿ ಅತ್ಯಾಧುನಿಕ ತಂತ್ರಜ್ಞಾನದ ಎಂಆರ್‌ಐ ಸೇವೆ ಪಡೆಯಬೇಕಿದ್ದರೆ, ಕನಿಷ್ಠ ₹8,000 ರಿಂದ ₹10,000 ಹಣ ಖರ್ಚು ಮಾಡಬೇಕು. ಆದರೆ, ಜಿಲ್ಲಾ ಆಸ್ಪತ್ರೆಯಲ್ಲಿ ಅತ್ಯಂತ ಕಡಿಮೆ ಹಣದಲ್ಲಿ ಎಂಆರ್‌ಐ ಸೇವೆ ಪಡೆಯಬಹುದು. ಬಿಪಿಎಲ್‌ ಕಾರ್ಡುದಾರರು ಕನಿಷ್ಠ ₹1,150 (ಬ್ರೈನ್‌ ಪ್ಲೈನ್‌)ಗೆ ಎಂಐಆರ್‌ ಲಭ್ಯವಿದೆ. ವಿವಿಧ ರೀತಿಯ ಸೇವೆಗಳಿಗೆ ಬೇರೆ ಬೇರೆಯದ್ದೇ ಬೆಲೆ ನಿಗದಿ ಮಾಡಲಾಗಿದೆ. ಆದರೆ, ಅತ್ಯಂತ ಕಡಿಮೆ ಹಣ ನಿಗದಿ ಮಾಡಲಾಗಿದೆ. ಬಿಪಿಎಲ್‌ ಕಾರ್ಡ್‌ ಇಲ್ಲದವರಿಗೂ ಕಡಿಮೆ ದರದಲ್ಲಿ ಸೇವೆ ಒದಗಿಸಲಾಗುತ್ತದೆ. 

ಫಿಲಿಪ್ಸ್‌ ಕಂಪನಿಯ ಈ ಯಂತ್ರ ₹12.14 ಕೋಟಿಗಳಾಗಿದ್ದು, ಮಂಗಳೂರು ಹೊರತುಪಡಿಸಿದರೆ, ಇಂಥ ಅತ್ಯಾಧುನಿಕ ಯಂತ್ರ ಇರುವುದು ಬಳ್ಳಾರಿಯಲ್ಲಿ ಮಾತ್ರ. ನಿತ್ಯ 4 ರಿಂದ 5 ಮಂದಿ ಈ ಸೇವೆ ಪಡೆಯುತ್ತಿದ್ದಾರೆ. ವರದಿಗೆ ಹೆಚ್ಚು ಹೊತ್ತು ಕಾಯುವ ಅಗತ್ಯವೂ ಇಲ್ಲ. ಕೆಲವೇ ಗಂಟೆಗಳಲ್ಲಿ ವರದಿ ಲಭ್ಯವಾಗುತ್ತಿದೆ ಎಂದು ಆಸ್ಪತ್ರೆಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಎಂಆರ್‌ಐ ಕೇಂದ್ರದ ಉದ್ಘಾಟನೆ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ್ದ ಸಂಸದ ಇ. ತುಕಾರಾಂ, ಬಡವರಿಗೆ ಉಪಯೋಗವಾಗುವ ಇದು ನನ್ನ ಕನಸಿನ ಯೋಜನೆಯಾಗಿತ್ತು ಎಂದು ಹೇಳಿದ್ದರು.    

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.