ADVERTISEMENT

ಚಾಕುವಿನಿಂದ ಇರಿದು ಕೊಲೆ ಯತ್ನ; ವ್ಯಕ್ತಿಗೆ ಮೂರು ವರ್ಷ ಕಾರಾಗೃಹ ಶಿಕ್ಷೆ

​ಪ್ರಜಾವಾಣಿ ವಾರ್ತೆ
Published 11 ಜನವರಿ 2021, 17:17 IST
Last Updated 11 ಜನವರಿ 2021, 17:17 IST
   

ಹೊಸಪೇಟೆ: ಅವಾಚ್ಯ ಶಬ್ದಗಳಿಂದ ನಿಂದಿಸಿ, ಚಾಕುವಿನಿಂದ ಇರಿದು ಕೊಲೆ ಮಾಡಲು ಯತ್ನಿಸಿದ ವ್ಯಕ್ತಿಗೆ ಇಲ್ಲಿನ ಮೂರನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶ ಕೆ.ಎಂ. ರಾಜಶೇಖರ್‌ ಅವರು ಮೂರು ವರ್ಷ ಕಠಿಣ ಕಾರಾಗೃಹ ಶಿಕ್ಷೆ ವಿಧಿಸಿ ಸೋಮವಾರ ಆದೇಶ ಹೊರಡಿಸಿದ್ದಾರೆ.

ಶಿಕ್ಷೆಯ ಜತೆಗೆ ₹40,000 ದಂಡ, ಗಾಯಗೊಂಡ ವ್ಯಕ್ತಿಗೆ ₹10,000 ಪರಿಹಾರ ನೀಡುವಂತೆ ಆದೇಶದಲ್ಲಿ ತಿಳಿಸಿದ್ದಾರೆ. ಸರ್ಕಾರಿ ಅಭಿಯೋಜಕರಾದ ಎಂ.ಬಿ. ಸುಂಕಣ್ಣ, ಟಿ. ಅಂಬಣ್ಣ ವಾದ ಮಂಡಿಸಿದರು.

ಏನಿದು ಪ್ರಕರಣ?
ಎಸ್‌.ಆರ್‌. ನಗರದ ನಿವಾಸಿ ಹೊನ್ನೂರು ಬಾಷಾ ಅವರು 2018ರ ಸೆಪ್ಟೆಂಬರ್‌ 20ರಂದು, ಮೊಹರಂ ಕಾರ್ಯಕ್ರಮ ನಡೆಯುತ್ತಿದ್ದ ರಾಮಲಿ ಸ್ವಾಮಿ ಮಸೀದಿ ಬಳಿ ಮಹಿಳೆಯರೊಂದಿಗೆ ಅಸಭ್ಯವಾಗಿ ವರ್ತಿಸುತ್ತಿದ್ದ. ಇದನ್ನು ಗಮನಿಸಿದ ನೂರ್‌ ಬಾಷಾ ಎನ್ನುವವರು ಅದಕ್ಕೆ ಆಕ್ಷೇಪ ವ್ಯಕ್ತಪಡಿಸಿ, ಹೊನ್ನೂರು ಬಾಷಾನನ್ನು ತಡೆಯಲು ಪ್ರಯತ್ನಿಸಿದ್ದಾರೆ.

ADVERTISEMENT

ಮರುದಿನ ತಡರಾತ್ರಿ 1.30ಕ್ಕೆ ನಗರದ ನೀಲಕಂಠೇಶ್ವರ ಗುಡಿ ಬಳಿ ನೂರ್‌ ಬಾಷಾನನ್ನು ತಡೆದ ಹೊನ್ನೂರು ಬಾಷಾ, ಮಹಿಳೆಯರ ಸಮ್ಮುಖದಲ್ಲಿ ನನಗೆ ಅವಮಾನ ಮಾಡಿರುವೆ ಎಂದು ಅವಾಚ್ಯ ಶಬ್ದಗಳಿಂದ ನೂರ್‌ ಅವರನ್ನು ನಿಂದಿಸಿದ್ದಾನೆ. ಬಳಿಕ ಚಾಕುವಿನಿಂದ ಇರಿದು ಗಾಯಗೊಳಿಸಿದ್ದಾನೆ. ನೂರ್‌ ಕೊಟ್ಟ ದೂರಿನ ಮೇರೆಗೆ ಪಟ್ಟಣ ಠಾಣೆಯಲ್ಲಿ 341, 504, 506, 307ರ ಕಲಂ ಅಡಿ ಪ್ರಕರಣ ದಾಖಲಾಗಿತ್ತು. ಹೊನ್ನೂರು ಬಾಷಾ ಕೊಲೆ ಯತ್ನ ನಡೆಸಿರುವುದು ವಿಚಾರಣೆ ಸಂದರ್ಭದಲ್ಲಿ ದೃಢಪಟ್ಟಿದ್ದರಿಂದ ನ್ಯಾಯಾಧೀಶರು ಮೇಲಿನಂತೆ ಆದೇಶ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.