ADVERTISEMENT

‘ಸಂರಕ್ಷಿತ ಪ್ರದೇಶ’ ಘೋಷಣೆಗಷ್ಟೇ ಸೀಮಿತ!

ಮೀನುಗಾರಿಕೆಗೆ ಜಲಬಾಂಬ್ ಸ್ಫೋಟ; ಅಳಿವಿನಂಚಿನ ನೀರುನಾಯಿಗಳಿಗಿಲ್ಲ ಸುರಕ್ಷತೆ

ಶಶಿಕಾಂತ್ ಎಸ್. ಶೆಂಬೆಳ್ಳಿ
Published 29 ನವೆಂಬರ್ 2018, 18:21 IST
Last Updated 29 ನವೆಂಬರ್ 2018, 18:21 IST
ನೀರುನಾಯಿ ಸಂರಕ್ಷಿತ ಪ್ರದೇಶದಲ್ಲಿ ಸ್ಫೋಟಕ್ಕೆ ಸಿದ್ಧತೆ ನಡೆಸುತ್ತಿರುವುದು
ನೀರುನಾಯಿ ಸಂರಕ್ಷಿತ ಪ್ರದೇಶದಲ್ಲಿ ಸ್ಫೋಟಕ್ಕೆ ಸಿದ್ಧತೆ ನಡೆಸುತ್ತಿರುವುದು   

ಹೊಸಪೇಟೆ: ಇಲ್ಲಿನ ತುಂಗಭದ್ರಾ ನದಿಯ ‘ನೀರುನಾಯಿ (ಆಟರ್‌) ಸಂರಕ್ಷಿತ ಪ್ರದೇಶ’ ಘೋಷಣೆಗಷ್ಟೇ ಸೀಮಿತಗೊಂಡಿದೆ.

ಮೀನುಗಾರಿಕೆಗೆ ನದಿಯಲ್ಲಿ, ಅದರಲ್ಲೂ ನೀರುನಾಯಿ ಸಂರಕ್ಷಿತ ಪ್ರದೇಶದಲ್ಲಿ ನಿತ್ಯ ಮನಸೋ ಇಚ್ಛೆ ಜಲಬಾಂಬ್‌ ಸ್ಫೋಟಿಸಲಾಗುತ್ತಿದೆ. ಅಳಿವಿನಂಚಿರುವ ನೀರುನಾಯಿಗಳು ಸಾಯುತ್ತಿದ್ದು, ಅವುಗಳ ಸಂಖ್ಯೆ ಮತ್ತಷ್ಟು ಕಡಿಮೆಯಾಗುತ್ತಿದೆ. ಆಮೆ, ಮೊಸಳೆ ಸೇರಿದಂತೆ ವಿವಿಧ ಜಲಚರಗಳು ಸಾವನ್ನಪ್ಪುತ್ತಿವೆ.

ತುಂಗಭದ್ರಾ ಜಲಾಶಯ ಮುಂಭಾಗದ ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡಂತೆ ಇರುವ ನದಿ ಭಾಗದಲ್ಲಿ ಹಾಡಹಗಲೇ ಸಿಡಿಮದ್ದು ಸ್ಫೋಟಿಸುತ್ತಿದ್ದರೂ ಅರಣ್ಯ ಅಧಿಕಾರಿಗಳು ಅದನ್ನು ತಡೆಯುವ ಗೋಜಿಗೆ ಹೋಗುತ್ತಿಲ್ಲ. ಇದರಿಂದ ಅಪರೂಪದ ಸಂತತಿ ನಾಶವಾಗುವ ಭೀತಿ ಎದುರಿಸುತ್ತಿದೆ.

ADVERTISEMENT

ಸ್ಥಳೀಯ ವನ್ಯಜೀವಿ ಮತ್ತು ಪರಿಸರ ಪ್ರೇಮಿಗಳ ಹೋರಾಟದ ಫಲವಾಗಿ 2015ರ ಏಪ್ರಿಲ್‌ನಲ್ಲಿ ಅರಣ್ಯ ಮತ್ತು ಪರಿಸರ ಇಲಾಖೆಯು ತುಂಗಭದ್ರಾ ಜಲಾಶಯ ಮುಂಭಾಗದಿಂದ ಕಂಪ್ಲಿ ವರೆಗೆ 34 ಕಿ.ಮೀ ಪ್ರದೇಶವನ್ನು ‘ನೀರು ನಾಯಿ ಸಂರಕ್ಷಿತ ಪ್ರದೇಶ’ವೆಂದು ಘೋಷಿಸಿತು. ಆದರೆ, ಅದಕ್ಕೆ ಪೂರ್ಣ ಪ್ರಮಾಣದ ಭದ್ರತಾ ಸಿಬ್ಬಂದಿಯನ್ನು ನೇಮಿಸದ ಕಾರಣ ನದಿಯಲ್ಲಿ ಅಕ್ರಮ ಚಟುವಟಿಕೆಗಳು ಎಗ್ಗಿಲ್ಲದೆ ನಡೆಯುತ್ತಿವೆ.

‘ನೀರು ನಾಯಿಗಳ ಸಂರಕ್ಷಣೆಗೆಂದೇ ಮೂರು ವರ್ಷಗಳ ಹಿಂದೆ ಸಂರಕ್ಷಿತ ಪ್ರದೇಶವೆಂದು ಘೋಷಿಸಲಾಗಿದೆ. ಆದರೆ, ಇದುವರೆಗೆ ನೀರುನಾಯಿಗಳ ಸಂರಕ್ಷಣೆಗೆ ಯಾವುದೇ ಕ್ರಮ ಕೈಗೊಂಡಿಲ್ಲ. ಕನಿಷ್ಠ ಭದ್ರತಾ ಸಿಬ್ಬಂದಿಯ ನೇಮಕ ಕೂಡ ಇದುವರೆಗೆ ಆಗಿಲ್ಲ. ಸರ್ಕಾರ ಇದೇ ಧೋರಣೆ ತಾಳಿದರೆ ನೀರುನಾಯಿಗಳು ಹೇಳ ಹೆಸರಿಲ್ಲದಂತಾಗಬಹುದು’ ಎಂದು ಆತಂಕ ವ್ಯಕ್ತಪಡಿಸುತ್ತಾರೆ ವನ್ಯಜೀವಿ ಛಾಯಾಗ್ರಾಹಕ ಶಿವಶಂಕರ ಬಣಗಾರ.

‘ನಾನು ಸೇರಿದಂತೆ ಕೆಲ ವನ್ಯಜೀವಿ ಪ್ರೇಮಿಗಳು ಅನೇಕ ಸಲ ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಹಾಗೂ ಅರಣ್ಯ ಇಲಾಖೆಗೆ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲ. ಮೀನುಗಾರಿಕೆಗೆ ನೀರಿನಲ್ಲಿ ಸ್ಫೋಟ ಮಾಡುವ ಛಾಯಾಚಿತ್ರಗಳ ಸಮೇತ ಸಾಕ್ಷ ಒದಗಿಸಿದರೂ ಕ್ರಮಕ್ಕೆ ಮುಂದಾಗದಿರುವುದು ದುರ್ದೈವದ ಸಂಗತಿ’ ಎಂದು ಹೇಳಿದರು.

‘ಬಲೆ ಹಾಕಿ ಸಾಂಪ್ರದಾಯಿಕ ಶೈಲಿಯಲ್ಲಿ ಮೀನುಗಾರಿಕೆ ಮಾಡಿದರೆ ಯಾವ ಜೀವಿಗಳಿಗೂ ತೊಂದರೆಯಾಗುವುದಿಲ್ಲ. ಆದರೆ, ಅದಕ್ಕೆ ಸಾಕಷ್ಟು ಸಮಯ ವ್ಯಯಿಸಬೇಕಾಗುತ್ತದೆ ಎಂದು ಕೆಲವರು ನದಿಯಲ್ಲಿ ಸ್ಫೋಟ ನಡೆಸಿ ಮೀನುಗಾರಿಕೆ ಮಾಡುತ್ತಿದ್ದಾರೆ. ಇದರಿಂದ ನೀರುನಾಯಿಗಳು ಸೇರಿದಂತೆ ಅಪರೂಪದ ಜಲಚರಗಳು ನಿತ್ಯ ಸಾಯುತ್ತಿವೆ’ ಎನ್ನುತ್ತಾರೆ ನದಿಗೆ ಹೊಂದಿಕೊಂಡಂತೆ ಇರುವ ಹಂಪಿ ಹೋಮ್‌ ಸ್ಟೇ ಮಾಲೀಕ ಪಿ. ಶ್ರೀನಿವಾಸ್‌.

**

ಮೀನುಗಾರಿಕೆಗೆ ಸ್ಫೋಟ ನಡೆಸುತ್ತಿರುವುದರ ಬಗ್ಗೆ ಮಾಹಿತಿ ಲಭ್ಯವಾಗಿದೆ. ಎಲ್ಲೆಲ್ಲಿ ನಡೆಸಲಾಗುತ್ತಿದೆ ಎಂಬುದರ ಬಗ್ಗೆ ತನಿಖೆ ನಡೆಸಿ, ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು.
–ಭಾಸ್ಕರ್‌, ನೀರುನಾಯಿ ವಲಯ ಅರಣ್ಯ ಸಂರಕ್ಷಣಾಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.