ADVERTISEMENT

ನಂದಿಹಳ್ಳಿ ಗ್ರಾಮ ಪಂಚಾಯಿತಿಯ ಕಂಠಿ ವೀರೇಶ ಸದಸ್ಯತ್ವ ಅನರ್ಹ

ನಂದಿಹಳ್ಳಿ ಗ್ರಾಮ ಪಂಚಾಯಿತಿಯಲ್ಲಿ ಹಣ ದುರ್ಬಳಕೆ ಆರೋಪ

​ಪ್ರಜಾವಾಣಿ ವಾರ್ತೆ
Published 2 ಡಿಸೆಂಬರ್ 2025, 6:15 IST
Last Updated 2 ಡಿಸೆಂಬರ್ 2025, 6:15 IST
<div class="paragraphs"><p> ಹೈಕೋರ್ಟ್ ಆದೇಶ</p></div>

ಹೈಕೋರ್ಟ್ ಆದೇಶ

   

ಹೂವಿನಹಡಗಲಿ: ತಾಲ್ಲೂಕಿನ ನಂದಿಹಳ್ಳಿ ಗ್ರಾಮ ಪಂಚಾಯಿತಿಯ ವಿವಿಧ ಅನುದಾನಗಳನ್ನು ನಿಯಮ ಬಾಹಿರವಾಗಿ ಪಾವತಿಸಿದ ಆರೋಪದಡಿ ಗ್ರಾ.ಪಂ. ಸದಸ್ಯ ಕಂಠಿ ವೀರೇಶ್ ಅವರ ಸದಸ್ಯತ್ವವನ್ನು ಸರ್ಕಾರ ಅನರ್ಹಗೊಳಿಸಿದೆ.

‘2015-2020ರ ಐದು ವರ್ಷ ಅವಧಿಗೆ ಗ್ರಾ.ಪಂ. ಅಧ್ಯಕ್ಷರಾಗಿದ್ದ ಕಂಠಿ ವೀರೇಶ್ ಅವರು 14ನೇ ಹಣಕಾಸು ಯೋಜನೆ, ಗ್ರಾಮ ವಿಕಾಸ ಯೋಜನೆ, ಗ್ರಾ.ಪಂ. ನಿಧಿ-1 ಮತ್ತು ನರೇಗಾ ಯೋಜನೆ ಸೇರಿ ಒಟ್ಟು ₹ 1,45,93,597 ಗಳನ್ನು ಸರ್ಕಾರದ ನಿಯಮ ಉಲ್ಲಂಘಿಸಿ ಹಣ ಪಾವತಿಸಿ, ದುರುಪಯೋಗಪಡಿಸಿಕೊಂಡಿದ್ದಾರೆ’ ಎಂದು ಆರೋಪಿಸಿ ನಂದಿಹಳ್ಳಿಯ ವಿ.ಬಿ.ಶಿವಾನಂದ ದೂರು ನೀಡಿದ್ದರು.

ADVERTISEMENT

ಈ ಕುರಿತು ಆಂತರಿಕ ಲೆಕ್ಕ ಸಮಿತಿಯ ತನಿಖಾ ವರದಿ, ವಿಚಾರಣಾ ಅಧಿಕಾರಿಗಳ ವರದಿಗಳ ಕುರಿತು ಇತ್ತೀಚಿಗೆ ವಿಚಾರಣೆ ನಡೆಸಿದ ಪಂಚಾಯತ್ ರಾಜ್ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ಅರೆ ನ್ಯಾಯಿಕ ನ್ಯಾಯಾಲಯವು ಹಣ ದುರ್ಬಳಕೆ ಆರೋಪ ದೃಢಪಟ್ಟಿದೆ ಎಂದು ಘೋಷಿಸಿದೆ.

‘ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ 1993ರನ್ವಯ ಮುಂದಿನ ಆರು ವರ್ಷ ಆರೋಪಿತರು ಚುನಾವಣೆಗೆ ನಿಲ್ಲದಂತೆ ಸದಸ್ಯತ್ವದಿಂದ ಅನರ್ಹಗೊಳಿಸಿ, ದುರುಪಯೋಗವಾಗಿರುವ ಮೊತ್ತವನ್ನು ಕಂಠಿ ವೀರೇಶ್ ಹಾಗೂ ಆ ಅವಧಿಯಲ್ಲಿ ಪಿಡಿಒ ಆಗಿ ಕರ್ತವ್ಯ ನಿರ್ವಹಿಸಿದವರಿಂದ ಸಮ ಕಂತುಗಳಲ್ಲಿ ಪಾವತಿಸಲು ಕ್ರಮ ಕೈಗೊಳ್ಳುವಂತೆ ಅರೆ ನ್ಯಾಯಿಕ ನ್ಯಾಯಾಲಯದ ಪೀಠಾಧಿಕಾರಿ ಶಿವಕುಮಾರ್ ಅವರು ವಿಜಯನಗರ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗೆ ಆದೇಶಿಸಿದ್ದಾರೆ.

ನರೇಗಾ ಹಣ ದುರ್ಬಳಕೆ ಆರೋಪದ ಹಿನ್ನೆಲೆಯಲ್ಲಿ ಕಂಠಿ ವೀರೇಶ್ ಅವರ ಸದಸ್ಯತ್ವವನ್ನು ಈ ಹಿಂದೆ ಸರ್ಕಾರ ಏಳು ಬಾರಿ ರದ್ದುಗೊಳಿಸಿತ್ತು. ಎಲ್ಲ ಪ್ರಕರಣಗಳಿಗೂ ನ್ಯಾಯಾಲಯ ತಡೆಯಾಜ್ಞೆ ನೀಡಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.