
ಬಳ್ಳಾರಿ: ‘ರಾಷ್ಟ್ರೀಯ ಖನಿಜ ಅಭಿವೃದ್ಧಿ ನಿಗಮ (ಎನ್‌ಎಂಡಿಸಿ)ವು ಕೇಂದ್ರ ಸರ್ಕಾರಿ ಸ್ವಾಮ್ಯದ ಕಂಪನಿ ಎಂಬ ಕಾರಣಕ್ಕೆ ಬಿಜೆಪಿಯು ಅದರ ವಿರುದ್ಧ ಧ್ವನಿ ಎತ್ತುತ್ತಿಲ್ಲ’ ಎಂದು ಬಳ್ಳಾರಿ ನಗರ ಶಾಸಕ ನಾರಾ ಭರತ್ ರೆಡ್ಡಿ ಹೇಳಿದರು.
ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಎನ್‌ಎಂಡಿಸಿ ಕೇಂದ್ರ ಒಡೆತನದ ಸಂಸ್ಥೆ. ರಾಜ್ಯ ಸರ್ಕಾರದ ಅಧೀನದ ಸಂಸ್ಥೆಯಾಗಿದ್ದರೆ ಇಷ್ಟು ಹೊತ್ತಿಗೆ ದೊಡ್ಡ ಸುದ್ದಿಯಾಗುತ್ತಿತ್ತು. ಅದು ಕೇಂದ್ರ ಸರ್ಕಾರದ್ದಾಗಿರುವುದರಿಂದ ಬಿಜೆಪಿಯ ಮುಖಂಡರು ಯಾರೂ ಮಾತನಾಡುತ್ತಿಲ್ಲ. ಬಿಜೆಪಿಯವರು ಏನೇ ಮಾಡಿದರೂ ಸರಿ. ಬೇರೆಯವರು ತಪ್ಪು ಮಾಡಿದರೆ ಅದು ತಪ್ಪು ಎಂದು ತೋರಿಸುವಲ್ಲಿ ಬಿಜೆಪಿ ನಾಯಕರು ನಿಸ್ಸೀಮರು. ಯಾರೆ ತಪ್ಪು ಮಾಡಿರಲಿ ಶಿಕ್ಷೆಯಾಗಬೇಕು’ ಎಂದರು.
‘ಸರೋಜಿನಿ ಮಹಿಷಿ ವರದಿ ಜಾರಿ ಎಂಬುದು ದೊಡ್ಡ ವಿಷಯ. ಈ ಹೋರಾಟದಲ್ಲಿ ಯುವಕರೂ ನನ್ನ ಕೈ ಜೋಡಿಸಬೇಕು’ ಎಂದು ಅವರು ಮನವಿ ಮಾಡಿದರು.
ಯೂರಿಯಾ ಅಕ್ರಮ ಸಂಗ್ರಹದ ಕುರಿತು ಮಾತನಾಡಿದ ಅವರು, ‘ಅಕ್ರಮವಾಗಿ ಸಂಗ್ರಹಿಸುವರಿಗೆ ದೊಡ್ಡ ಶಿಕ್ಷೆಯಾಗಬೇಕು. ಇದರಲ್ಲಿ ಯಾರಿದ್ದಾರೆ ಎಂಬುದು ಗೊತ್ತಿಲ್ಲ. ಆದರೆ, ಯಾರದ್ದೇ ಕುಮ್ಮಕ್ಕಿಲ್ಲದೇ ಈ ಕೆಲಸ ಮಾಡಲು ಸಾಧ್ಯವಿಲ್ಲ’ ಎಂದರು.
‘ಬಳ್ಳಾರಿಯಲ್ಲಿ ಹಲವು ಉತ್ಸವಗಳು ನಡೆಯುತ್ತವೆ. ಆದ್ದರಿಂದ ಬಳ್ಳಾರಿ ಉತ್ಸವ ಎಂದು ಪ್ರತ್ಯೇಕವಾಗಿ ಉತ್ಸವ ಮಾಡುವ ಅಗತ್ಯವಿಲ್ಲ’ ಎಂದು ತಿಳಿಸಿದರು.
ವಾಲ್ಮೀಕಿ ವೃತ್ತಕ್ಕೆ ಸಿಕ್ಕಿರುವ ಅನುದಾನದ ಕುರಿತು ಸದನದಲ್ಲಿ ಪ್ರಶ್ನೆ ಮಾಡಿದ ವಿಧಾನ ಪರಿಷತ್ ಸದಸ್ಯ ವೈ.ಎಂ ಸತೀಶ್ ಅವರ ಕುರಿತು ಮಾತನಾಡಿದ ಅವರು, ‘ ಕ್ಯಾಬಿನೆಟ್ ಅನುಮೋದನೆ ಪಡೆದು ವೃತ್ತದಲ್ಲಿ ಪ್ರತಿಮೆ ಇರಿಸಬಹುದು. ಸತೀಶ್ ಐದೂವರೆ ವರ್ಷ ಮಾತನಾಡಿರಲಿಲ್ಲ. ಈಗ ಯಾಕೆ ಮಾತನಾಡುತ್ತಿದ್ದಾರೆ. ಸಮಸ್ಯೆಗಳು ಈಗ ಗೊತ್ತಾದಂತಿದೆ’ ಎಂದರು.
‘ಕುಡಿಯುವ ನೀರಿಗಾಗಿ ಕೆರೆಗಳನ್ನು ತುಂಬಿಸಲಾಗುತ್ತಿದೆ. ಜಲಾಶಯದಿಂದ ಆಂಧ್ರಕ್ಕೆ ನೀರು ಬಿಡುವ ಸಂದರ್ಭದಲ್ಲೇ ನಾವೂ ನೀರು ಪಡೆದುಕೊಳ್ಳಲು ನಿರ್ಧರಿಸಿದ್ದೇವೆ’ ಎಂದರು.
Cut-off box - ಕೆಎಂಇಆರ್‌ಸಿ ಇದೆ: ಬಜೆಟ್‌ನಲ್ಲಿ ಹೆಚ್ಚಿನ ಹಣ ಬೇಕಿಲ್ಲ ‘ಕರ್ನಾಟಕ ಗಣಿ ಪರಿಸರ ಪುನಶ್ಚೇತನ ನಿಗಮ(ಕೆಎಂಇಆರ್‌ಸಿ)ಯಲ್ಲಿ ನಾವು ದೊಟ್ಟಮಟ್ಟದಲ್ಲಿ ಅನುದಾನ ತೆಗೆದುಕೊಳ್ಳುತ್ತಿರುವುದರಿಂದ ಬಜೆಟ್‌ನಲ್ಲಿ ಹೆಚ್ಚಿನ ಹಣ ಬೇಕಾಗುವುದಿಲ್ಲ. ಬಳ್ಳಾರಿಗೆ ಕಾನೂನು ಕಾಲೇಜು ಮತ್ತು ಕಂಪ್ಲಿಗೆ ಎಂಜಿನಿಯರಿಂಗ್ ಕಾಲೇಜನ್ನು ಬಜೆಟ್‌ನಲ್ಲಿ ಕೇಳಬಹುದು. ಜಾಗದ ವಿಷಯ ಅಂತಿಮವಾದರೆ ಈ ಬಜೆಟ್‌ನಲ್ಲೇ ಬಳ್ಳಾರಿಗೆ ಕಾನೂನು ಕಾಲೇಜು ಮಂಜೂರಾಗಲಿದೆ’ ಎಂದು ಅವರು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.