
ಬಳ್ಳಾರಿ: ತಾಲೂಕಿನಲ್ಲಿ 25 ಗ್ರಾಮ ಪಂಚಾಯಿತಿಗಳಲ್ಲಿ 10 ದಿನಗಳ ಕಾಲ 'ವಲಸೆ ಯಾಕ್ರಿ ನಿಮ್ಮೂರಲ್ಲೇ ಉದ್ಯೋಗ ಖಾತರಿ' ಅಭಿಯಾನ ನಡೆಸಲಾಗಿದ್ದು, ಬೇಡಿಕೆಯನುಸಾರ ಕೂಲಿಕಾರರಿಗೆ 2024-25 ನೇ ಸಾಲಿನಲ್ಲಿ ದಿನಕ್ಕೆ ₹316 ರಿಂದ ₹349ರ ವರೆಗೆ ದಿನಕೂಲಿ ಹೆಚ್ಚಿಸಲಾಗಿದೆ ಎಂದು ಬಳ್ಳಾರಿ ತಾಲ್ಲೂಕು ಪಂಚಾಯ್ತಿ ಕಾರ್ಯನಿರ್ವಾಹಕ ಅಧಿಕಾರಿ ಮಡಗಿನ ಬಸಪ್ಪ ತಿಳಿಸಿದ್ದಾರೆ.
ಈ ಕುರಿತು ಪ್ರಕಟಣೆ ಹೊರಡಿಸಿರುವ ಅವರು, ತಾಲ್ಲೂಕಿನ ಸಹಾಯಕ ನಿರ್ದೇಶಕರು, ಐಇಸಿ ಸಂಯೋಜಕರು, ತಾಂತ್ರಿಕ ಸಂಯೋಜಕರು ಮತ್ತು ತಾಲೂಕು ಎಂಐಎಸ್ ಸಂಯೋಜಕರು ಪ್ರತಿ ಗ್ರಾಮ ಪಂಚಾಯ್ತಿ ಮಟ್ಟದಲ್ಲಿ ಮೇಟಿಗಳ ಸಭೆ ಮಾಡಿ ಮೇಟಿಗಳ ಕರ್ತವ್ಯಗಳು, ಜವಾಬ್ದಾರಿಗಳು, ಕೂಲಿಕಾರರ ಬೇಡಿಕೆ ಮತ್ತು ಕೆಲಸದ ಸ್ಥಳಗಳಲ್ಲಿ ದೊರೆಯುವ ಸೌಲಭ್ಯಗಳ ಕುರಿತು ಮಾಹಿತಿ ನೀಡಿದ್ದಾರೆ.
ಎಲ್ಲಾ ಗ್ರಾಮ ಪಂಚಾಯಿತಿಗಳಲ್ಲಿ ತಾಲ್ಲೂಕು ಐಇಸಿ ತಂಡ ಮತ್ತು ಗ್ರಾಮ ಪಂಚಾಯ್ತಿಯ ತಂಡಗಳಿಂದ ಪ್ರತಿ ಕುಟುಂಬಗಳನ್ನು ಸಂಪರ್ಕಿಸಿ ಮಹಾತ್ಮ ಗಾಂಧಿ ನರೇಗಾ ಯೋಜನೆಯ ಬಗ್ಗೆ ಮಾಹಿತಿ ನೀಡಲಾಗಿದೆ ಎಂದು ತಿಳಿಸಿದ್ದಾರೆ.
ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ಮಾನವ ದಿನಗಳ ಸೃಜನೆಗೆ ಬೇಕಾಗುವಷ್ಟು ಕೂಲಿಕಾರರಿಂದ ಮತ್ತು ಮೇಟಿಗಳಿಂದ ನಿಗದಿತ ನಮೂನೆಯಲ್ಲಿ ಗ್ರಾಮ ಪಂಚಾಯಿತಿಗಳಿಂದ 12450 ಕೂಲಿಕಾರ್ಮಿಕರಿಂದ ಕೆಲಸಕ್ಕಾಗಿ ಬೇಡಿಕೆ ಪಡೆಯಲಾಗಿದೆ ಎಂದು ತಿಳಿಸಿದ್ದಾರೆ.
ಕೂಲಿಕಾರರು ಸಲ್ಲಿಸಿದ ಬೇಡಿಕೆಗೆ ಅನುಸಾರ ಅಂದಾಜು ಪಟ್ಟಿ ತಯಾರಿಕೆ, ತಾಂತ್ರಿಕ ಮತ್ತು ಆಡಳಿತಾತ್ಮಕ ಮಂಜೂರಾತಿ ಸಿದ್ದತೆಗಳನ್ನು ಮಾಡಿಕೊಳ್ಳಲಾಗಿದೆ. ಏಪ್ರಿಲ್ 1 ರಿಂದ ಮೇ ಅಂತ್ಯದವರೆಗೆ ಪ್ರತಿ ಗ್ರಾಮ ಪಂಚಾಯಿತಿಗಳಲ್ಲಿ ಕನಿಷ್ಠ 500 ರಿಂದ 13,200 ಕೂಲಿಕಾರರಿಗೆ ಕೆಲಸ ನೀಡಲು ಎನ್‍ಎಂಆರ್ ರೂಪಿಸಲಾಗಿದೆ. ಸಮುದಾಯಿಕ ಕಾಮಗಾರಿಗಳಾದ ಕೆರೆ, ಕಾಲುವೆ, ನಾಲೆ ಮತ್ತು ಚೆಕ್‍ಡ್ಯಾಂಗಳಲ್ಲಿ ಹೂಳು ತೆಗೆಯುವ ಕಾಮಗಾರಿಗಳನ್ನು ಪ್ರಾರಂಭಿಸಲಾಗುತ್ತಿದೆ. ವೈಯಕ್ತಿಕ ಕಾಮಗಾರಿಗಳಾದ ಬದು, ಕೃಷಿ ಹೊಂಡ, ತೋಟಗಾರಿಕೆ ಬೆಳೆಗಳು, ದನದ ಕೊಟ್ಟಿಗೆ ಮತ್ತು ಕುರಿ ಕೊಟ್ಟಿಗೆಗಳನ್ನು ಮಾಡಿಕೊಳ್ಳಬಹುದಾಗಿದೆ. ವಿಶೇಷ ಚೇತನರಿಗೂ ನರೇಗಾ ಯೋಜನೆಯಡಿ ಕೂಲಿ ಕೆಲಸ ನೀಡಲಾಗುತ್ತಿದೆ. ಬೇಸಿಗೆ ಕಾಲದಲ್ಲಿ ನಿರಂತರವಾಗಿ ದುಡಿಯುವ ಕೈಗಳಿಗೆ ಗ್ರಾಮ ಪಂಚಾಯಿತಿಗಳಲ್ಲಿ ಕೆಲಸ ನೀಡುವಂತೆ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.