ADVERTISEMENT

ನಿರಂತರ ಮಳೆ: ಭರ್ತಿಯಾದ ನಾರಿಹಳ್ಳ ಜಲಾಶಯ  

​ಪ್ರಜಾವಾಣಿ ವಾರ್ತೆ
Published 21 ಮೇ 2025, 13:38 IST
Last Updated 21 ಮೇ 2025, 13:38 IST
ಸಂಡೂರು ತಾಲ್ಲೂಕಿನ ನಾರಿಹಳ್ಳ ಜಲಾಶಯವು ನಿರಂತರ ಮಳೆಗೆ ಸಂಪೂರ್ಣ ಭರ್ತಿಯಾಗಿದೆ
ಸಂಡೂರು ತಾಲ್ಲೂಕಿನ ನಾರಿಹಳ್ಳ ಜಲಾಶಯವು ನಿರಂತರ ಮಳೆಗೆ ಸಂಪೂರ್ಣ ಭರ್ತಿಯಾಗಿದೆ   

ಸಂಡೂರು: ತಾಲ್ಲೂಕಿನ ತಾರಾನಗರ ಗ್ರಾಮದ ಹೊರ ವಲಯದಲ್ಲಿನ ನಾರಿಹಳ್ಳ ಜಲಾಶಯವು ನಿರಂತರ ಮಳೆಗೆ ಸಂಪೂರ್ಣ ಭರ್ತಿಯಾಗಿದ್ದು, ಬುಧವಾರ ರಾತ್ರಿ ನಾರಿಹಳ್ಳಕ್ಕೆ ಒಂದು ಗೇಟ್ ಮೂಲಕ ಒಂದು ಅಡಿಯ ನೀರನ್ನು ಹೊರ ಹರಿ ಬಿಡಲಾಗಿದೆ.

ಕಳೆದ ವರ್ಷ ಮಳೆಯು ಉತ್ತಮವಾಗಿ ಸುರಿದಿದ್ದರಿಂದ ಜಲಾಶಯದಲ್ಲಿ ಅಪಾರ ಪ್ರಮಾಣದ ನೀರು ಸಂಗ್ರಹಗೊಂಡಿತ್ತು. ಪ್ರಸ್ತುತ ಮುಂಗಾರು ಪೂರ್ವ ಮಳೆಯು ನಿರಂತರವಾಗಿ ಸುರಿದ ಪರಿಣಾಮವಾಗಿ ಜಲಾಶಯವು ಬೇಗನೆ ಭರ್ತಿಯಾಗಿದ್ದರಿಂದ ತಾಲ್ಲೂಕಿನ ಜನರು ಸಂತಸಗೊಂಡಿದ್ದಾರೆ.

ಜಲಾಶಯದ ಒಟ್ಟು ನೀರಿನ ಶೇಖರಣೆಯ ಸಾಮರ್ಥ್ಯ 0.810 ಟಿಎಂಸಿ ಅಡಿ ಇದ್ದು, ಜಲಾಶಯದ ನೀರಿನ ಗರಿಷ್ಠ ಪೂರ್ಣ ಮಟ್ಟ 542.315 ಮೀ. ಒಳಗೊಂಡು, ಪ್ರಸ್ತುತ ನೀರಿನ ಮಟ್ಟ 542.00 ಮೀ. ಇದ್ದು ಬಹುತೇಕ ಭರ್ತಿಯಾಗಿದೆ. ಜಲಾಶಯದ ಒಳ ಹರಿವು 374 ಕ್ಯುಸೆಕ್ ಇದೆ. ಜಲಾಶಯವು ಒಟ್ಟು ಐದು ಗೇಟ್‍ಗಳನ್ನು ಹೊಂದಿದೆ. ಅಪಾರ ಪ್ರಮಾಣದ ನೀರು ಸಂಗ್ರಹಗೊಂಡಿದ್ದರಿಂದ ಎಡದಂಡೆ ಕಾಲುವೆಯ ಮೂಲಕ ತಾಳೂರು ಗ್ರಾಮದ ಕೆರೆಗೆ, ರೈತರ ನೀರಾವರಿಗೆ, ಜಾನುವಾರುಗಳ ಅನುಕೂಲಕ್ಕಾಗಿ 79.2 ಕ್ಯುಸೆಕ್ ನೀರನ್ನು ಹೊರ ಹರಿ ಬಿಡಲಾಗಿದೆ.

ADVERTISEMENT

ಜಲಾಶಯದಿಂದ ನೀರನ್ನು ಹೊರ ಹರಿ ಬಿಡುವ ವಿಚಾರವಾಗಿ ಜಲಾಶಯದ ಕೆಳ ಭಾಗದ ಎಲ್ಲ ಗ್ರಾಮ ಪಂಚಾಯಿತಿಯ ಹಳ್ಳಿಗಳ, ಕುರೆಕುಪ್ಪ ಪುರಸಭೆಯ ವ್ಯಾಪ್ತಿಯ ವಾರ್ಡ್‍ಗಳಲ್ಲಿನ ಜನರಿಗೆ ನಾರಿಹಳ್ಳದ ಸಮೀಪಕ್ಕೆ ಯಾರೂ ಸಂಚರಿಸಬಾರದು ಎಂದು ಜಾಗೃತಿ ಮೂಡಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

‘ನಾರಿಹಳ್ಳ ಜಲಾಶಯದ ಮೇಲ್ಭಾಗದ ಪ್ರದೇಶದಲ್ಲಿ ಭಾರಿ ಮಳೆಯಾಗಿದ್ದರಿಂದ ನಾರಿಹಳ್ಳದ ಮೂಲಕ ಜಲಾಶಯಕ್ಕೆ ಅಪಾರ ಪ್ರಮಾಣದ ನೀರು ಹರಿದು ಬಂದಿದೆ’ ಎಂದು ತುಂಗಭದ್ರ ಜಲಾಶಯದ ಸಹಾಯಕ ಎಂಜಿನಿಯರ್ ಧನು ಜನಾರ್ದನ ರೆಡ್ಡಿ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.