ಬಳ್ಳಾರಿ: ‘ರಾಷ್ಟ್ರ ಮತ್ತು ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರಗಳ ನಿರ್ದೇಶನದಂತೆ, ಬಳ್ಳಾರಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದಿಂದ ಇದೇ ಸೆ.13 ರಂದು ಈ ವರ್ಷದ ಮೂರನೇ ರಾಷ್ಟ್ರೀಯ ಲೋಕ್ ಅದಾಲತ್ ನಡೆಯಲಿದ್ದು, ಸಾರ್ವಜನಿಕರು ಬಾಕಿ ಇರುವ ತಮ್ಮ ವ್ಯಾಜ್ಯಗಳನ್ನು ಇತ್ಯರ್ಥಪಡಿಸಿಕೊಳ್ಳಬೇಕು’ ಎಂದು ಒಂದನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಪ್ರಮೋದ್ ಬಿ.ಜಿ ಸಲಹೆ ನೀಡಿದರು.
ಸುದ್ದಿಗೋಷ್ಠಿಯಲ್ಲಿ ಶನಿವಾರ ಮಾತನಾಡಿದ ಅವರು, ‘ಅಖಂಡ (ಬಳ್ಳಾರಿ ಮತ್ತು ವಿಜಯನಗರ) ಜಿಲ್ಲೆಯ 31 ನ್ಯಾಯಾಲಯಗಳಲ್ಲಿ 13ರಂದು ವಿವಿಧ ಪ್ರಕರಣಗಳನ್ನು ರಾಜೀ ಸಂಧಾನದ ಮೂಲಕ ಇತ್ಯರ್ಥಪಡಿಸಿಕೊಳ್ಳಬಹುದು. ನ್ಯಾಯಾಲಯದ ಶುಲ್ಕವನ್ನು ಮರು ಪಾವತಿಸಲಾಗುತ್ತದೆ’ ಎಂದರು.
‘ವೈವಾಹಿಕ, ಕೌಟುಂಬಿಕ, ಮೋಟಾರು ಅಪಘಾತ, ಚೆಕ್ ಅಮಾನ್ಯ, ವಾಣಿಜ್ಯ, ಸೇವಾ ಪ್ರಕರಣಗಳು ಮತ್ತು ರಾಜಿಯಾಗಬಲ್ಲ, ಗ್ರಾಹಕ ವ್ಯಾಜ್ಯ, ಡಿಆರ್‌ಟಿ, ಪಾಲುದಾರಿಕೆ, ಸಾರಿಗೆ ಹಾಗೂ ಇತರೇ ಸಿವಿಲ್ ಪ್ರಕರಣಗಳು ಸೇರಿದಂತೆ ಹಲವು ಪ್ರಕರಣಗಳನ್ನು ರಾಜಿ ಸಂಧಾನದ ಮೂಲಕ ಇತ್ಯರ್ಥ ಪಡಿಸಿಕೊಳ್ಳಬಹುದು’ ಎಂದು ಅವರು ಹೇಳಿದರು.
‘ಲೋಕ್ ಅದಾಲತ್‌ನಲ್ಲಿ ಜನರಿಗೆ ಸುಲಭವಾಗಿ, ವೇಗವಾಗಿ ಮತ್ತು ಕಡಿಮೆ ಖರ್ಚಿನಲ್ಲಿ ನ್ಯಾಯ ಸಿಗುತ್ತದೆ. ಇದರಿಂದ ನ್ಯಾಯಾಲದ ಮೇಲಿನ ಹೊರೆ ತಗ್ಗಲಿದೆ. ನ್ಯಾಯಾಧೀಶರು ಹೆಚ್ಚು ಸಂಕೀರ್ಣವಾದ ಪ್ರಕರಣಗಳ ಮೇಲೆ ಗಮನ ಕೇಂದ್ರೀಕರಿಸಲು ಸಹಾಯವಾಗುತ್ತದೆ’ ಎಂದು ಹೇಳಿದರು.
90 ದಿನಗಳ ವಿಶೇಷ ಅಭಿಯಾನ: ಜಿಲ್ಲೆಯ ನ್ಯಾಯಾಲಯಗಳಲ್ಲಿ ಬಾಕಿ ಪ್ರಕರಣಗಳ ವಿಲೇವಾರಿಗಾಗಿ ಈಗಾಗಲೇ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದಿಂದ ಕಳೆದ ಜುಲೈ 1 ರಿಂದ ನಡೆಯುತ್ತಿರುವ ‘ರಾಷ್ಟ್ರಕ್ಕಾಗಿ ಮಧ್ಯಸ್ಥಿಕೆ - 90 ದಿನಗಳ ವಿಶೇಷ ಅಭಿಯಾನ’ ಅಕ್ಟೋಬರ್ 7 ರಂದು ಮುಕ್ತಾಯಗೊಳ್ಳಲಿದೆ’ ಎಂದು ಪ್ರಮೋದ್ ಬಿ.ಜಿ ತಿಳಿಸಿದರು.
ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶರಾದ ರಾಜೇಶ್ ಎನ್.ಹೊಸಮನೆ ಮಾತನಾಡಿ, ‘ಮಕ್ಕಳಿಗೆ, ಮಹಿಳೆಯರಿಗೆ, ಹಿರಿಯ ನಾಗರಿಕರಿಗೆ ಮತ್ತು ದುರ್ಬಲ ವರ್ಗದ ಜನರಿಗೆ ಕಾನೂನಿನ ನೆರವು ನೀಡಲು ರಾಷ್ಟ್ರೀಯ ಕಾನೂನು ಸೇವೆಗಳ ಪ್ರಾಧಿಕಾರವು ಹಲವು ಯೋಜನೆಗಳನ್ನು ಜಾರಿಗೆ ತಂದಿದೆ ಎಂದು ತಿಳಿಸಿದರು.
ಜಿಲ್ಲಾ ನ್ಯಾಯಾಲಯದ ಅಧಿಕಾರಿಗಳು, ಸಿಬ್ಬಂದಿ ಹಾಜರಿದ್ದರು.
ಶೇ 50 ರಷ್ಟು ರಿಯಾಯಿತಿ
ಪೊಲೀಸ್ ಇಲಾಖೆಯ ಸಂಚಾರಿ ಇ-ಚಾನೆಲ್ ನಲ್ಲಿ ದಾಖಲಾಗಿರುವ ಬಾಕಿ ಪ್ರಕರಣಗಳ ದಂಡದ ಮೊತ್ತದಲ್ಲಿ ರಾಜ್ಯ ಸರ್ಕಾರವು ಶೇ 50 ರಷ್ಟು ರಿಯಾಯಿತಿ ನೀಡಿದ್ದು ಸೆ.12ರ ವರೆಗೆ ಈ ರಿಯಾಯಿತಿ ಇರಲಿದೆ. ಸೆಪ್ಟೆಂಬರ್ 13 ರಂದು ನಡೆಯಲಿರುವ ಲೋಕ್ ಅದಾಲತ್ ಪ್ರಯುಕ್ತ ಈ ರಿಯಾಯಿತಿ ನೀಡಲಾಗಿದೆ. ಸಾರ್ವಜನಿಕರು ಈ ಸೌಲಭ್ಯವನ್ನು ಸದ್ಭಳಕೆ ಮಾಡಿಕೊಳ್ಳಬೇಕು ಎಂದು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.