ADVERTISEMENT

ಹೂವಿನಹಡಗಲಿ: ಮಲ್ಲಿಗೆ ನಾಡಿನಲ್ಲಿ ಶಕ್ತಿ ದೇವತೆಯ ಆರಾಧನೆ

ಕೆ.ಸೋಮಶೇಖರ
Published 29 ಸೆಪ್ಟೆಂಬರ್ 2022, 8:08 IST
Last Updated 29 ಸೆಪ್ಟೆಂಬರ್ 2022, 8:08 IST
ಹೂವಿನಹಡಗಲಿ ತಾಲ್ಲೂಕು ಮೈಲಾರ ಸುಕ್ಷೇತ್ರದಲ್ಲಿ ನವರಾತ್ರಿ ಪ್ರಯುಕ್ತ ಭಕ್ತರು ದೀಪಾರಾಧನೆ ಮಾಡುತ್ತಿರುವುದು
ಹೂವಿನಹಡಗಲಿ ತಾಲ್ಲೂಕು ಮೈಲಾರ ಸುಕ್ಷೇತ್ರದಲ್ಲಿ ನವರಾತ್ರಿ ಪ್ರಯುಕ್ತ ಭಕ್ತರು ದೀಪಾರಾಧನೆ ಮಾಡುತ್ತಿರುವುದು   

ಹೂವಿನಹಡಗಲಿ (ವಿಜಯನಗರ ಜಿಲ್ಲೆ): ಮಲ್ಲಿಗೆ ನಾಡಿನಲ್ಲಿ ದಸರಾ ಸಂಭ್ರಮ ಗರಿಗೆದರಿದೆ. ತಾಲ್ಲೂಕಿನ ನಾನಾ ಕಡೆಗಳಲ್ಲಿ ಶಕ್ತಿ ದೇವತೆ, ನವ ದುರ್ಗೆಯರನ್ನು ಪ್ರತಿಷ್ಠಾಪಿಸಿ ಭಕ್ತಿಭಾವದಿಂದ ಪೂಜಿಸಲಾಗುತ್ತಿದೆ.

ಪಟ್ಟಣದಲ್ಲಿ ಚೌಡೇಶ್ವರಿ ದೇವಿ ಸೇವಾ ಟ್ರಸ್ಟ್ ನವರು 9ನೇ ವರ್ಷದ ನವರಾತ್ರಿ ಉತ್ಸವವನ್ನು ಸಂಭ್ರಮದಿಂದ ಆಚರಿಸುತ್ತಿದ್ದಾರೆ. ಗವಿಮಠದ ಬಳಿಯ ಸನ್ನಿಧಾನದಲ್ಲಿ ಚೌಡೇಶ್ವರಿಯ ಭವ್ಯ ಮೂರ್ತಿ ಪ್ರತಿಷ್ಠಾಪಿಸಲಾಗಿದೆ. ಒಂಭತ್ತು ದಿನಗಳ ಕಾಲ ವಿಶೇಷ ಪೂಜೆ, ಆರಾಧನೆ ನಡೆಯಲಿದೆ. ಬಸವರಾಜ ಶಾಸ್ತ್ರಿ ದೇವಿ ಪುರಾಣ ಪಠಿಸಲಿದ್ದಾರೆ. ಪ್ರವಚನ ಆಲಿಸಲು ಬರುವವರಿಗೆ ನಿತ್ಯವೂ ಅನ್ನಸಂತರ್ಪಣೆ ಏರ್ಪಡಿಸಲಾಗಿದೆ. ಸೆ. 30 ರಂದು ಮುತ್ತೈದೆಯರಿಗೆ ಉಡಿ ತುಂಬುವ ಕಾರ್ಯಕ್ರಮ ಜರುಗಲಿದ್ದು, ಪಟ್ಟಣದ ಅಪಾರ ಮಹಿಳೆಯರು ದೇವಿಗೆ ಪೂಜೆ ಸಲ್ಲಿಸಿ, ಉಡಿ ತುಂಬುವ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ.

ಬನಶಂಕರಿ ದೇವಸ್ಥಾನದಲ್ಲಿ ಘಟ ಸ್ಥಾಪನೆ:

ADVERTISEMENT

ಬನಶಂಕರಿ ದೇವಸ್ಥಾನದಲ್ಲಿ ನವರಾತ್ರಿ ಪ್ರಯುಕ್ತ ಘಟ ಸ್ಥಾಪಿಸಲಾಗಿದೆ. ನವರಾತ್ರಿಯ ಮೊದಲ ದಿನ ಬನಶಂಕರಿ ದೇವಿಗೆ ಅಭಿಷೇಕ ನೆರವೇರಿಸಿ ಬೆಳ್ಳಿ ಕವಚ ತೊಡಿಸಲಾಗಿದೆ. ಭಕ್ತರು ಪ್ರತಿದಿನ ಹೂವಿನ ಅಲಂಕಾರ, ವಿಶೇಷ ಪೂಜೆ ನೆರವೇರಿಸುತ್ತಾರೆ. ಕೋಟೆಯಲ್ಲಿರುವ ಊರಮ್ಮ ದೇವಸ್ಥಾನ, ಕಾಳಿಕಾ ದೇವಸ್ಥಾನಗಳಲ್ಲಿ ವಿಶೇಷ ಪೂಜೆ, ಆರಾಧನೆ ನಡೆಯಲಿದೆ.

ಪದ್ಮಾವತಿ, ಜ್ವಾಲಾಮಾಲಿನಿಗೆ ವಿಶೇಷ ಪೂಜೆ:

ಪಟ್ಟಣದ ಪಾರ್ಶ್ವನಾಥ ಜೈನ ಬಸದಿಯಲ್ಲಿ ದಸರಾ ಪ್ರಯುಕ್ತ ಪದ್ಮಾವತಿ, ಜ್ವಾಲಾಮಾಲಿನಿ ದೇವಿಗೆ ವಿಶೇಷ ಪೂಜೆ ಸಲ್ಲಿಸಲಾಗುತ್ತಿದೆ. ಶ್ರಾವಕಿಯರು ಒಂಭತ್ತು ದಿನವೂ ದೇವಿಗೆ ಕುಂಕಮಾರ್ಚನೆ ನೆರವೇರಿಸಿ, ಸಾಂಸ್ಕೃತಿಕ ಕಾರ್ಯಕ್ರಮ ನಡೆಸುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.