ADVERTISEMENT

ಅನಾಥ ಕ್ರೀಡಾಂಗಣದಲ್ಲಿ ಆಡಿದವರದ್ದೇ ಆಟ!

ಶಶಿಕಾಂತ್ ಎಸ್. ಶೆಂಬೆಳ್ಳಿ
Published 18 ಆಗಸ್ಟ್ 2019, 19:30 IST
Last Updated 18 ಆಗಸ್ಟ್ 2019, 19:30 IST
ಶುಕ್ರವಾರ ಸಂಜೆ ಸುರಿದ ಮಳೆಯಿಂದ ಹೊಸಪೇಟೆ ತಾಲ್ಲೂಕು ಕ್ರೀಡಾಂಗಣದ ಒಂದು ಭಾಗ ಸಂಪೂರ್ಣ ಜಲಾವೃತವಾಗಿರುವುದು
ಶುಕ್ರವಾರ ಸಂಜೆ ಸುರಿದ ಮಳೆಯಿಂದ ಹೊಸಪೇಟೆ ತಾಲ್ಲೂಕು ಕ್ರೀಡಾಂಗಣದ ಒಂದು ಭಾಗ ಸಂಪೂರ್ಣ ಜಲಾವೃತವಾಗಿರುವುದು   

ಹೊಸಪೇಟೆ: ನಗರದ ಹೃದಯ ಭಾಗದಲ್ಲಿ ತಾಲ್ಲೂಕು ಆಡಳಿತಕ್ಕೆ ಸೇರಿದ ಕ್ರೀಡಾಂಗಣವಿದೆ. ಆದರೆ, ಅದು ಸದ್ಯ ಅನಾಥವಾಗಿದ್ದು, ಅಲ್ಲಿ ಯಾರು, ಏನು ಬೇಕಾದರೂ ಮಾಡಬಹುದು ಎನ್ನುವಂತಹ ಪರಿಸ್ಥಿತಿ ಇದೆ.

ವಿಶಾಲವಾದ ಮೈದಾನ, ಒಳಾಂಗಣ ಕ್ರೀಡಾಂಗಣವು ನೇರವಾಗಿ ಯುವಜನ ಸೇವೆ ಮತ್ತು ಕ್ರೀಡಾ ಇಲಾಖೆಯ ಸುಪರ್ದಿನಲ್ಲಿ ಬರುತ್ತದೆ. ಆದರೆ, ಇಲಾಖೆಯು ಒಳಾಂಗಣ ಕ್ರೀಡಾಂಗಣದ ನಿರ್ವಹಣೆಗೆ ಕೊಟ್ಟಷ್ಟು ಒತ್ತು ಕ್ರೀಡಾಂಗಣಕ್ಕೆ ಕೊಡುತ್ತಿಲ್ಲ. ಇದರ ಪರಿಣಾಮ ಅದು ಅವ್ಯವಸ್ಥೆಯ ಗೂಡಾಗಿದೆ.

ವಿಶಾಲವಾದ ಕ್ರೀಡಾಂಗಣಕ್ಕೆ ಸುತ್ತು ಗೋಡೆ ಇಲ್ಲ. ಯಾರು, ಯಾವಾಗ ಬೇಕಾದರೂ ಮೈದಾನಕ್ಕೆ ಹೋಗಿ ಬರಬಹುದು. ಮನುಷ್ಯರಷ್ಟೇ ಅಲ್ಲ, ಬೀದಿ ನಾಯಿಗಳು, ಬಿಡಾಡಿ ದನಗಳು, ಹಂದಿಗಳು ಸದಾ ಓಡಾಡಿಕೊಂಡಿರುತ್ತವೆ. ಕಾಲೇಜು ರಸ್ತೆಯಿಂದ ವರ್ತುಲ ರಸ್ತೆಗೆ ಸಂಪರ್ಕ ಕಲ್ಪಿಸುವ ಭಾಗದಲ್ಲಿ ಕಾಂಪೌಂಡ್‌ ಇತ್ತು. ಆದರೆ, 2018ರ ಚುನಾವಣೆ ಪ್ರಚಾರ ಸಂದರ್ಭದಲ್ಲಿ ಮೂರು ಕಡೆ ಅದನ್ನು ಒಡೆದು ಹಾಕಲಾಗಿತ್ತು. ಅದಕ್ಕೆ ಸಂಬಂಧಿಸಿದಂತೆ ರಾಜಕೀಯ ಪಕ್ಷಗಳಿಂದ ಠೇವಣಿ ಕೂಡ ಭರಿಸಿಕೊಳ್ಳಲಾಗಿತ್ತು. ಆದರೆ, ಇದುವರೆಗೆ ಅದನ್ನು ದುರಸ್ತಿಗೊಳಿಸಿಲ್ಲ.

ADVERTISEMENT

ಇನ್ನು ವರ್ತುಲ ರಸ್ತೆ ಹಾಗೂ ಕಾಲೇಜು ರಸ್ತೆಯ ಬಳಿ ಕಾಂಪೌಂಡ್‌ ನಿರ್ಮಿಸಿಲ್ಲ. ವರ್ತುಲ ರಸ್ತೆಯ ಬದಿ ಗೂಡಂಗಡಿಗಳು ಇಟ್ಟುಕೊಂಡಿರುವುದರಿಂದ ಜನ ಓಡಾಡಲು ಆಗುವುದಿಲ್ಲ. ಅವುಗಳಿಂದ ನಿತ್ಯ ಉತ್ಪಾದನೆಯಾಗುವ ತ್ಯಾಜ್ಯ ಅಲ್ಲೇ ಸುರಿದು ಹೋಗುತ್ತಿದ್ದಾರೆ. ಇದರಿಂದ ಪರಿಸರ ಕಲುಷಿತಗೊಂಡಿದೆ. ಕಾಲೇಜು ರಸ್ತೆ ಬದಿಯ ಪಾದಚಾರಿ ಮಾರ್ಗದಲ್ಲಿ ದೊಡ್ಡ ಹೊಂಡಗಳು ಬಿದ್ದಿವೆ. ಅಕ್ಕಪಕ್ಕದ ಮನೆಯವರು ರಾತ್ರಿ ವೇಳೆ ಮನೆಯ ಕಸವನ್ನು ಮೈದಾನದೊಳಗೆ ಸುರಿದು ಹೋಗುತ್ತಿದ್ದಾರೆ.

ಕ್ರೀಡಾಂಗಣದ ಸುತ್ತ ಸುಸಜ್ಜಿತವಾದ ಚರಂಡಿ ವ್ಯವಸ್ಥೆ ಇಲ್ಲ. ಸ್ವಲ್ಪ ಮಳೆ ಬಂದರೂ ನೀರು ಆವರಿಸಿಕೊಂಡು, ಕೊಚ್ಚೆಯಾಗುತ್ತದೆ. ನಿತ್ಯ ಬೆಳಿಗ್ಗೆ ಹಾಗೂ ಸಂಜೆಯ ವೇಳೆ ಅನೇಕ ಜನ ವಾಯು ವಿಹಾರಕ್ಕೆ ಬಂದು ಹೋಗುತ್ತಾರೆ. ಹಲವು ಸಲ ಅವರು ಸಹಿ ಸಂಗ್ರಹಿಸಿ, ದೂರು ಕೊಟ್ಟರೂ ಪರಿಸ್ಥಿತಿ ಬದಲಾಗಿಲ್ಲ.

ಪ್ರತಿ ವರ್ಷ ಗಣರಾಜ್ಯೋತ್ಸವ ದಿನ, ಸ್ವಾತಂತ್ರ್ಯ ದಿನೋತ್ಸವ ದಿನದಂದು ಎಲ್ಲವೂ ಸುವ್ಯವಸ್ಥಿತವಾಗಿರುತ್ತದೆ. ಅದು ಮುಗಿದ ನಂತರ ಮತ್ತದೇ ಅವ್ಯವಸ್ಥೆಯ ತಾಣವಾಗಿ ಬದಲಾಗುತ್ತದೆ. ವರ್ತುಲ ರಸ್ತೆ, ಕಾಲೇಜು ರಸ್ತೆಗೆ ಹೊಂದಿಕೊಂಡಂತೆ ಕ್ರೀಡಾಂಗಣ ಇರುವುದರಿಂದ ಇಲ್ಲಿರುವ ಅವ್ಯವಸ್ಥೆ ಯಾರ ಗಮನಕ್ಕೂ ಬಂದಿಲ್ಲ ಎಂದು ಹೇಳುವಂತಿಲ್ಲ. ಇದರ ಬಳಿಯಲ್ಲೇ ಅತಿಥಿ ಗೃಹ ಕೂಡ ಇದೆ. ರಾಜಕಾರಣಿಗಳು, ಅಧಿಕಾರಿಗಳು ಇದರ ಸಮೀಪದಿಂದಲೇ ಓಡಾಡುತ್ತಾರೆ. ಇಲ್ಲಿ ನಡೆಯುವ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಾರೆ. ಆದರೆ, ಯಾರೊಬ್ಬರೂ ಮುತುವರ್ಜಿ ವಹಿಸಿ ಅದನ್ನು ಸರಿಪಡಿಸಲು ಮುಂದಾಗಿಲ್ಲ.

ಅಥ್ಲೆಟಿಕ್ಸ್‌ ತರಬೇತುದಾರರಾದ ರೋಹಿಣಿ ಅವರಿಗೆ ಮೌಖಿಕವಾಗಿ ಕ್ರೀಡಾಂಗಣದ ಉಸ್ತುವಾರಿ ವಹಿಸಲಾಗಿದೆ. ಆದರೆ, ಎಲ್ಲ ನಿರ್ಣಯ ಯುವಜನ ಸೇವಾ ಇಲಾಖೆಯೇ ತೆಗೆದುಕೊಳ್ಳುತ್ತದೆ. ಅವರು ಹೆಸರಿಗಷ್ಟೇ ಸೀಮಿತರಾಗಿದ್ದಾರೆ. ಆದರೆ, ನಿತ್ಯದ ಅವ್ಯವಸ್ಥೆಗೆ ಸಂಬಂಧಿಸಿದಂತೆ ಜನ ಅವರನ್ನು ಹೊಣೆಗಾರರಾಗಿ ಮಾಡಿ, ನಿತ್ಯ ಜಗಳವಾಡುವುದು ಸಾಮಾನ್ಯವಾಗಿದೆ.

ಅಂದಹಾಗೆ, ಕ್ರೀಡಾಂಗಣಕ್ಕೆ ಲಕ್ಷಾಂತರ ರೂಪಾಯಿ ಆದಾಯ ಬರುತ್ತದೆ. ಕ್ರೀಡಾ ಚಟುವಟಿಕೆಗಳು, ವಸ್ತು ಪ್ರದರ್ಶನ, ರಾಜಕೀಯ ಪಕ್ಷಗಳ ಸಮಾವೇಶ, ಸಂಘ ಸಂಸ್ಥೆಗಳು ಆಯೋಜಿಸುವ ಕಾರ್ಯಕ್ರಮಗಳಿಂದ ಬಾಡಿಗೆ ಬರುತ್ತದೆ. ಹೀಗಿದ್ದರೂ ಕ್ರೀಡಾಂಗಣದ ನಿರ್ವಹಣೆಗೇಕೇ ಆಸಕ್ತಿ ತೋರುತ್ತಿಲ್ಲ ಎನ್ನುವುದು ಜನರ ಪ್ರಶ್ನೆಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.