ಹಗರಿಬೊಮ್ಮನಹಳ್ಳಿ: ತಾಲ್ಲೂಕಿನ ಮಸಾರಿ ನೆಲ್ಕುದ್ರಿ ಗ್ರಾಮದ ರೈತರೊಬ್ಬರು ಕುಂಬಳಕಾಯಿ ಬೆಳೆದು ಲಕ್ಷಾಂತರ ರೂಪಾಯಿ ಲಾಭ ಗಳಿಸಿದ್ದಾರೆ.
ವಾಣಿಜ್ಯ ಬೆಳೆಗಳಾದ ಶೇಂಗಾ, ಮೆಕ್ಕೆಜೋಳ ಬೆಳೆದು ಅಲ್ಪ ಲಾಭ ಪಡೆದಿದ್ದ ರೈತ ಈಗ ಲಕ್ಷ ಲಕ್ಷ ಎಣಿಸುತ್ತಿದ್ದಾರೆ.
ತಾಲ್ಲೂಕಿನ ಮಸಾರಿ ನೆಲ್ಕುದ್ರಿ ಗ್ರಾಮದಲ್ಲಿ ಮುದೇಗೌಡರ ಬಸವರಾಜ ಅವರು ಕೇವಲ ₹30 ಸಾವಿರ ಖರ್ಚು ಮಾಡಿ ಒಂದೂ ಮುಕ್ಕಾಲು ಎಕರೆ ಜಮೀನಿನಲ್ಲಿ ಸಿಹಿ ಕುಂಬಳ ಬೆಳೆದು ₹4.5ಲಕ್ಷ ಲಾಭ ಗಳಿಸಿದ್ದಾರೆ. ಮೊದಲ ಕಟಾವಿನಲ್ಲಿ 17ಟನ್ ಇಳುವರಿ ಬಂದಿದೆ. ಕೆ.ಜಿ.ಗೆ ₹12 ರ ವರೆಗೂ ಬೆಲೆ ದೊರೆತಿದೆ.
ದಾವಣಗೆರೆಯಿಂದ ತಲಾ 100ಗ್ರಾಂ ಪ್ಯಾಕೆಟ್‌ಗೆ ₹530 ರಂತೆ 20 ಪ್ಯಾಕೆಟ್ ಖರೀದಿಸಿದ್ದಾರೆ. ಜಮೀನು ಮಾಗಿ ಮಾಡಿದ ಬಳಿಕ 3 ಅಡಿ ಅಂತರದಲ್ಲಿ 40 ಸಾಲುಗಳಲ್ಲಿ ಬೀಜಗಳನ್ನು ಊರುವ ಮೂಲಕ ಬಿತ್ತನೆ ಮಾಡಿದ್ದಾರೆ. 6 ದಿನಗಳಲ್ಲಿ ಮೊಳಕೆ ಒಡೆದ ಬಳಿಕ ಒಮ್ಮೆ ನೀರು ಹರಿಸಿ ಒಂದು ಪ್ಯಾಕೆಟ್ ರಾಸಯನಿಕ ಗೊಬ್ಬರ ಹಾಕಿದ್ದಾರೆ, ನಂತರದಲ್ಲಿ ಮೂರು ಬಾರಿ ನೀರು ಹರಿಸಿ ಜತನ ಮಾಡಿದ್ದಾರೆ. ಕೇವಲ 3 ತಿಂಗಳಲ್ಲಿ ಫಲ ಕಟಾವಿಗೆ ಬಂದಿದೆ.
ಬಳ್ಳಿಗಳಲ್ಲಿ ಸುರುಳಿಪೂಚಾ ರೋಗ ತಗುಲದಂತೆ ಮುಂಜಾಗ್ರತಾ ಕ್ರಮವಾಗಿ ಒಮ್ಮೆ ಮಾತ್ರ ಪೌಡರ್ ಔಷಧಿ ಸಿಂಪಡಿಸಿದ್ದಾರೆ. ಕಟಾವಿಗೆ ಮಾತ್ರ ಕೂಲಿ ಆಳುಗಳಿಗೆ ₹5 ಸಾವಿರ ನೀಡಿದ್ದಾರೆ. ಸ್ಥಳಕ್ಕೆ ಖರೀದಿದಾರರೇ ಬಂದು ತಮ್ಮ ವಾಹನಕ್ಕೆ ತುಂಬಿಸಿಕೊಂಡು ಹೋಗುವುದರಿಂದ ಮಾರುಕಟ್ಟೆಯ ಕಿರಿಕಿರಿ ಇಲ್ಲ. ಪಟ್ಟಣದಲ್ಲಿ ತೂಕ ಮಾಡಿಸಿದ ಸ್ಥಳದಲ್ಲಿಯೇ ರೈತರಿಗೆ ಸಂಪೂರ್ಣ ಮೊತ್ತ ಪಾವತಿಯಾಗುತ್ತದೆ.
‘ಮಸಾರಿ ನೆಲ್ಕುದ್ರಿಯಲ್ಲಿ ಬೆಳೆದ ಸಿಹಿ ಕುಂಬಳಕಾಯಿಗೆ ಕೋಲ್ಕತ್ತ ಮತ್ತು ಮುಂಬೈ ಮಾರುಕಟ್ಟೆಯಲ್ಲಿ ಭಾರಿ ಬೇಡಿಕೆ ಇದೆ. ಅಲ್ಲಿ ಯಥೇಚ್ಛವಾಗಿ ಊಟಕ್ಕೆ ಬಳಸುತ್ತಾರೆ ಎನ್ನುತ್ತಾರೆ ಗ್ರಾಮದ ರೈತ ಕಡ್ಲಿ ಪರಮೇಶ್.
ಗ್ರಾಮದಲ್ಲಿ ಈಗ 25ಕ್ಕೂ ಹೆಚ್ಚು ರೈತರು ನೂರಾರು ಎಕರೆಯಲ್ಲಿ ಕುಂಬಳ ಬೆಳೆದು ಲಾಭದ ಹಾದಿಯಲ್ಲಿದ್ದಾರೆ. ದಿನದಿಂದ ದಿನಕ್ಕೆ ಬೆಳೆಗಾರರ ಸಂಖ್ಯೆಯೂ ಹೆಚ್ಚುತ್ತಿದೆ.
ಮೊದಲು ಶೇಂಗಾ ಮೆಕ್ಕೆಜೋಳ ಬೆಳೆದು ಅಲ್ಪ ಲಾಭಕ್ಕಷ್ಟೇ ತೃಪ್ತಿ ಪಡುತ್ತಿದ್ದೆವು. ಕೂಲಿಗೆ ಸಮವಾಗುತ್ತಿತ್ತು. ಕಳೆದ ವರ್ಷ ಬರಗಾಲದಿಂದ ಕೃಷಿ ಕೈ ಹಿಡಿಯಲಿಲ್ಲ ಈ ಬಾರಿ ಕುಂಬಳ ಬೆಳೆಯಿಂದ ಅಧಿಕ ಲಾಭ ಸಿಕ್ಕಿದ್ದು ತುಂಬಾ ಖುಷಿ ಇದೆ.
–ಮುದೇಗೌಡರ ಬಸವರಾಜಪ್ಪ, ಅಧಿಕ ಲಾಭ ಗಳಿಸಿದ ರೈತ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.