ADVERTISEMENT

ಬಳ್ಳಾರಿಯಲ್ಲಿ 247 ವಿವಿ ಪ್ಯಾಟ್‌ ಬದಲು

​ಪ್ರಜಾವಾಣಿ ವಾರ್ತೆ
Published 24 ಏಪ್ರಿಲ್ 2019, 14:07 IST
Last Updated 24 ಏಪ್ರಿಲ್ 2019, 14:07 IST
ಡಾ.ವಿ.ರಾಮಪ್ರಸಾದ್‌ ಮನೋಹರ್
ಡಾ.ವಿ.ರಾಮಪ್ರಸಾದ್‌ ಮನೋಹರ್   

ಬಳ್ಳಾರಿ: ‘ಮತದಾನದ ವೇಳೆ ತಾಂತ್ರಿಕ ದೋಷ ಕಾಣಿಸಿಕೊಂಡ ಕಾರಣ ಕ್ಷೇತ್ರದಲ್ಲಿ 247 ವಿವಿ ಪ್ಯಾಟ್‌ಗಳನ್ನು ಬದಲಾವಣೆ ಮಾಡಲಾಯಿತು’ ಎಂದು ಜಿಲ್ಲಾ ಚುನಾವಣಾಧಿಕಾರಿ ಡಾ.ವಿ.ರಾಮಪ್ರಸಾದ್‌ ಮನೋಹರ್‌ ತಿಳಿಸಿದರು.

ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘5 ಬ್ಯಾಲೆಟ್‌ ಯೂನಿಟ್‌ ಮತ್ತು 5 ಕಂಟ್ರೋಲ್ ಯೂನಿಟ್‌ಗಳನ್ನೂ ಬದಲಾಯಿಸಲಾಯಿತು’ ಎಂದರು.

‘6,317 ಸಿಬ್ಬಂದಿಗೆ ಅಂಚೆ ಮತಪತ್ರಗಳನ್ನು ನೀಡಲಾಗಿದ್ದು, ಇದುವರೆಗೆ 852 ಮತಪತ್ರಗಳು ಮಾತ್ರ ದೊರಕಿವೆ. ಮೇ 23ರಂದು ಮತ ಎಣಿಕೆ ಆರಂಭವಾಗು ಎಂಟು ಗಂಟೆ ಮುಂಚಿನ ಅವಧಿಯವರೆಗೂ ಮತಪತ್ರಗಳನ್ನು ಸಲ್ಲಿಸಲು ಅವಕಾಶವಿದೆ’ ಎಂದರು.

ADVERTISEMENT

‘ವಿಧಾನಸಭಾ ಕ್ಷೇತ್ರವಾರು ಸರಾಸರಿ ಮತದಾನಕ್ಕಿಂತಲೂ ಶೇ 15ಕ್ಕಿಂತ ಹೆಚ್ಚು ಮತದಾನ 21 ಮತಗಟ್ಟೆಗಳಲ್ಲಿ ನಡೆದಿದೆ. ಶೇ 15ಕ್ಕಿಂತ ಕಡಿಮೆ ಮತದಾನ 34 ಮತಗಟ್ಟೆಗಳಲ್ಲಿ ನಡೆದಿದೆ’ ಎಂದು ಮಾಹಿತಿ ನೀಡಿದರು.

‘ಕ್ಷೇತ್ರದಲ್ಲಿ ಅಕ್ರಮ ಮದ್ಯ ಪ್ರಕರಣಗಳು ಸೇರಿ 991 ಚುನಾವಣೆ ನೀತಿ ಸಂಹಿತೆ ಉಲ್ಲಂಘನೆ ಪ್ರಕರಣಗಳನ್ನು ದಾಖಲಿಸಲಾಗಿದೆ. ಕಂಪ್ಲಿಯಲ್ಲಿ ಅಕ್ರಮವಾಗಿ ನಾಡ ಬಂದೂಕು ಮತ್ತು ಗುಂಡುಗಳನ್ನು ವಶಪಡಿಸಿಕೊಂಡು, ವ್ಯಕ್ತಿಯೊಬ್ಬರನ್ನು ಬಂಧಿಸಲಾಗಿದೆ. ಒಟ್ಟಾರೆ ₨ 27,90 ಲಕ್ಷವನ್ನು ವಶಪಡಿಸಿಕೊಳ್ಳಲಾಗಿದೆ’ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ ತಿಳಿಸಿದರು.

‘ಮತಯಂತ್ರಗಳನ್ನು ಇಡಲಾಗಿರುವ ಆರ್‌ವೈಎಂ ಎಂಜಿನಿಯರಿಂಗ್‌ ಕಾಲೇಜಿನ ಭದ್ರತಾ ಕೊಠಡಿಗಳಿಗೆ ಕೇಂದ್ರ ಸಶಸ್ತ್ರ ಮೀಸಲು ಪಡೆ, ಜಿಲ್ಲಾ ಸಶಸ್ತ್ರ ಮೀಸಲು ಪಡೆ ಮತ್ತು ಪೊಲೀಸ್‌ ಸಿಬ್ಬಂದಿಯ ಕಾವಲನ್ನು ನಿಯೋಜಿಸಲಾಗಿದೆ. 100 ಮಂದಿ ಎರಡು ಪಾಳಿಗಳಲ್ಲಿ ಕಾರ್ಯ ನಿರ್ವಹಿಸಲಿದ್ದಾರೆ’ ಎಂದು ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.