ADVERTISEMENT

ಹೊಸ ರೂಪ ಪಡೆದ ‘ಟೌನ್ ರೀಡಿಂಗ್ ರೂಂ’

ಶಶಿಕಾಂತ್ ಎಸ್. ಶೆಂಬೆಳ್ಳಿ
Published 16 ಸೆಪ್ಟೆಂಬರ್ 2018, 9:02 IST
Last Updated 16 ಸೆಪ್ಟೆಂಬರ್ 2018, 9:02 IST
ಹೊಸಪೇಟೆಯ ಟೌನ್ ರೀಡಿಂಗ್ ರೂಂನ ಒಳನೋಟ
ಹೊಸಪೇಟೆಯ ಟೌನ್ ರೀಡಿಂಗ್ ರೂಂನ ಒಳನೋಟ   

ಹೊಸಪೇಟೆ: ಇಲ್ಲಿನ ಮಹಾತ್ಮ ಗಾಂಧಿ ವೃತ್ತ ಸಮೀಪದ ‘ಟೌನ್ ರೀಡಿಂಗ್ ರೂಂ’ಗೆ ನಗರಸಭೆ ಹೊಸ ರೂಪ ನೀಡಿದ್ದು, ಅದರ ಇಡೀ ಚಹರೆಯೇ ಬದಲಾಗಿದೆ.

ಈ ಜಾಗದಲ್ಲಿ ಹಿಂದೆ ಒಂದು ಗ್ರಂಥಾಲಯ ಹಾಗೂ ಖಾಲಿ ಆವರಣ ಇತ್ತು. ಗೂಡಂಗಡಿಗಳು, ತಳ್ಳುಗಾಡಿಗಳನ್ನು ನಿಲ್ಲಿಸಿಕೊಂಡು ಜನ ವ್ಯಾಪಾರ ಮಾಡಿಕೊಂಡಿದ್ದರು. ಸ್ವಚ್ಛತೆ ಸಂಪೂರ್ಣ ಮರೀಚಿಕೆ ಆಗಿತ್ತು. ನಗರದ ಮಧ್ಯ ಭಾಗದಲ್ಲಿ ಇರುವ ಈ ಸ್ಥಳವನ್ನು ಅಭಿವೃದ್ಧಿ ಪಡಿಸಬೇಕೆಂದು ಸಂಘ, ಸಂಸ್ಥೆಗಳು ಹಾಗೂ ಸಾರ್ವಜನಿಕರು ಆಗ್ರಹಿಸಿದ್ದರು. ಅದರಿಂದ ಎಚ್ಚೆತ್ತುಕೊಂಡ ನಗರಸಭೆ ಅದನ್ನೀಗ ಅಭಿವೃದ್ಧಿ ಪಡಿಸಿದೆ.

ನಗರೋತ್ಥಾನ ಯೋಜನೆಯ ಅಡಿ ₹ 2 ಕೋಟಿ ವೆಚ್ಚದಲ್ಲಿ ಅಭಿವೃದ್ಧಿ ಕೆಲಸ ಪೂರ್ಣಗೊಳಿಸಲಾಗಿದೆ. ಎರಡೂ ಬದಿಯಲ್ಲಿ ಒಟ್ಟು 40 ಮಳಿಗೆಗಳನ್ನು ನಿರ್ಮಿಸಲಾಗಿದೆ. ಮಳಿಗೆಗಳಿಗೆ ಹೊಂದಿಕೊಂಡಂತೆ ಅದರ ಹಿಂದಿನ ಭಾಗದಲ್ಲಿ ಮೆಟ್ಟಿಲುಗಳನ್ನು ಮಾಡಲಾಗಿದೆ. ನೆಲಹಾಸು ಹಾಕಲಾಗಿದೆ. ಯಾವುದೇ ರೀತಿಯ ಕಾರ್ಯಕ್ರಮ, ಸಭೆ ಸಮಾರಂಭಗಳಿದ್ದರೆ ಜನ ಮೆಟ್ಟಿಲುಗಳ ಮೇಲೆ ಕುಳಿತುಕೊಂಡು ವೀಕ್ಷಿಸಬಹುದು. ಸುಮಾರು ಎರಡು ಸಾವಿರ ಜನ ಕುಳಿತುಕೊಂಡು ಕಾರ್ಯಕ್ರಮ ನೋಡಬಹುದು. ಮಳೆ, ಬಿಸಿಲಿನಿಂದ ರಕ್ಷಣೆಗೆ ಶೆಡ್‌ ಹಾಕಲಾಗಿದೆ.

ADVERTISEMENT

ಹಳೆಯ ಗ್ರಂಥಾಲಯವಿದ್ದ ಕಟ್ಟೆಗೆ ವೇದಿಕೆಯ ಸ್ವರೂಪ ನೀಡಲಾಗಿದೆ. ಅಲ್ಲಲ್ಲಿ ಸ್ಪೀಕರ್‌ಗಳನ್ನು ಜೋಡಿಸುವ ಕೆಲಸ ಇನ್ನಷ್ಟೇ ಪೂರ್ಣಗೊಳ್ಳಬೇಕಿದೆ. ಅದಾದ ನಂತರ ಯಾರು ಬೇಕಾದವರೂ ನಗರಸಭೆಗೆ ಬಾಡಿಗೆ ಪಾವತಿಸಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬಹುದು. ಈ ಹಿಂದೆ ಇದೇ ಭಾಗದಲ್ಲಿ ರಸ್ತೆಯ ಪಕ್ಕ ಸಣ್ಣ ಕೆಲಸಗಳನ್ನು ಮಾಡಿಕೊಂಡಿದ್ದ ವ್ಯಾಪಾರಿಗಳಿಗೆ ಮಳಿಗೆ ಹಂಚಿಕೆ ಮಾಡಲು ತೀರ್ಮಾನಿಸಲಾಗಿದೆ.

‘ನಗರದ ಮಧ್ಯಭಾಗದಲ್ಲಿ ಟೌನ್‌ ರೀಡಿಂಗ್‌ ರೂಂ ಇರುವುದರಿಂದ ಯಾವುದೇ ರೀತಿಯ ಕಾರ್ಯಕ್ರಮ ಆಯೋಜಿಸಿದರೆ ಜನ ಬಂದು ಹೋಗುವುದಕ್ಕೆ ಬಹಳ ಅನುಕೂಲವಾಗುತ್ತದೆ. ಈ ದೃಷ್ಟಿಯಿಂದಲೇ ಅದನ್ನು ಅಭಿವೃದ್ಧಿ ಪಡಿಸಲಾಗಿದೆ. ರೀಡಿಂಗ್‌ ರೂಂ ಹಾಗೂ ಅದಕ್ಕೆ ಹೊಂದಿಕೊಂಡಂತೆ ನಿರ್ಮಿಸಿರುವ ಮಳಿಗೆಗಳಿಂದ ಬರುವ ಕಾಯಂ ಆದಾಯದಿಂದ ನಿರ್ವಹಣೆ ಮಾಡಲಾಗುವುದು’ ಎಂದು ನಗರಸಭೆ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್‌ ಸೈಯದ್‌ ಮನ್ಸೂರ್‌ ಅಹಮ್ಮದ್‌ ತಿಳಿಸಿದರು.

‘ನಗರಸಭೆಗೆ ಸೇರಿದ ಕೋಟ್ಯಂತರ ರೂಪಾಯಿ ಬೆಲೆಬಾಳುವ ಆಸ್ತಿ ನಿರ್ಲಕ್ಷ್ಯಕ್ಕೆ ಒಳಗಾಗಿತ್ತು. ಅದನ್ನು ಅಭಿವೃದ್ಧಿ ಪಡಿಸಿರುವುದು ಸಂತಸದ ವಿಷಯ. ಆಟೋಟ, ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬಹುದು. ಎಲ್ಲಕ್ಕಿಂತ ಮುಖ್ಯವಾಗಿ ಜನರಿಗೆ ಹೋಗಿ ಬರಲು ಬಹಳ ಅನುಕೂಲವಾಗುತ್ತದೆ. ನಗರದ ಹೃದಯ ಭಾಗದಲ್ಲಿರುವುದೇ ಅದಕ್ಕೆ ಮುಖ್ಯ ಕಾರಣ’ ಎಂದು ಸ್ಥಳೀಯ ನಿವಾಸಿ ಶಫಿ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.