ಬಳ್ಳಾರಿ: ಪಶ್ಚಿಮ ಘಟ್ಟದಂಥ ಪರಿಸರವನ್ನೇ ಹೋಲುವ ಬಳ್ಳಾರಿ ಜಿಲ್ಲೆಯ ಸಂಡೂರು ತಾಲ್ಲೂಕಿನ ಅರಣ್ಯವನ್ನು ಗಣಿಗಾರಿಕೆಯಿಂದ ರಕ್ಷಿಸಲು ‘ರಾಷ್ಟ್ರೀಯ ಖನಿಜ ನೀತಿ-19’ ಅನ್ನು ಅಸ್ತ್ರವಾಗಿ ಬಳಸಿಕೊಳ್ಳಲು ಅರಣ್ಯ ಇಲಾಖೆ ಮತ್ತು ಸಂಘ ಸಂಸ್ಥೆಗಳು ಚಿಂತನೆ ನಡೆಸಿವೆ.
ಇದರ ಪ್ರಕಾರ, ಈಗಾಗಲೇ ಗಣಿಗಾರಿಕೆ ನಡೆದಿರುವ, ನಡೆಯುತ್ತಿರುವ ಪ್ರದೇಶವನ್ನು ಹೊರತುಪಡಿಸಿ, ಉಳಿದಿರುವ ಅರಣ್ಯವನ್ನು ‘ನೋ ಗೋ ಝೋನ್ (ನಿರ್ಬಂಧಿತ ಪ್ರದೇಶ)’ ಎಂದು ಘೋಷಿಸಲು ಪ್ರಯತ್ನಗಳು ಆರಂಭವಾಗಿವೆ.
ಜಾರ್ಖಂಡ್‌ನ ಕಲ್ಲಿದ್ದಲಿನ ಗಣಿಗಾರಿಕೆಯಿಂದ ಅರಣ್ಯ ಪ್ರದೇಶವನ್ನು ರಕ್ಷಿಕೊಳ್ಳಲು ಈಗಾಗಲೇ ಇಂಥ ‘ನೋ ಗೋ ಝೋನ್’ಗಳನ್ನು ಗುರುತಿಸಲಾಗಿದೆ. ಅದೇ ಮಾದರಿಯನ್ನು ಇಲ್ಲಿಯೂ ಬಳಸಿಕೊಳ್ಳುವುದು ಪರಿಸರ ಪ್ರೇಮಿಗಳು, ಹೋರಾಟಗಾರರು ಮತ್ತು ಅರಣ್ಯ ಇಲಾಖೆಯ ಉದ್ದೇಶವಾಗಿದೆ.
ಸಂಡೂರಿನ ಅರಣ್ಯ ಒಟ್ಟಾರೆ 30 ಸಾವಿರ ಹೆಕ್ಟೇರ್ (74,131 ಎಕರೆ) ಪ್ರದೇಶವನ್ನು ವ್ಯಾಪಿಸಿದೆ. ಇಲ್ಲಿಯೇ ದೇಶದ ಅತ್ಯಂತ ಉತ್ಕೃಷ್ಟ ಕಬ್ಬಿಣ ಮತ್ತು ಮ್ಯಾಂಗನೀಸ್ ಅದಿರು ನಿಕ್ಷೇಪಗೊಂಡಿದೆ. ಇಲ್ಲಿ ಈಗಾಗಲೇ 4,200 ಹೆಕ್ಟೇರ್ (10,378 ಎಕರೆ) ಪ್ರದೇಶದಲ್ಲಿ ಸಕ್ರಿಯ ಗಣಿಗಳಿವೆ. 2,000 ಹೆಕ್ಟೇರ್ (4,942 ಎಕರೆ) ಅರಣ್ಯ ಪ್ರದೇಶ ಈಗಾಗಲೇ ಗಣಿಗಾರಿಕೆ ನಡೆದು ‘ಬ್ರೋಕನ್ ಲ್ಯಾಂಡ್’ ಆಗಿ ಪರಿವರ್ತನೆಗೊಂಡಿದೆ. ಅಂದರೆ ಒಟ್ಟಾರೆ ಅರಣ್ಯದ ಶೇ 20ರಷ್ಟು ಈಗಾಗಲೇ ಗಣಿಗಾರಿಕೆಯಿಂದ ನಾಶವಾಗಿದೆ.
ಇತ್ತೀಚೆಗೆ, ಸಂಡೂರಿನ ಅರಣ್ಯ ಪ್ರದೇಶದ ದಕ್ಷಿಣ ವಲಯದಲ್ಲಿರುವ ದಟ್ಟಾರಣ್ಯದ ಒಟ್ಟು 88 ಹೆಕ್ಟೇರ್ (217.45 ಎಕರೆ) ವ್ಯಾಪ್ತಿಯ ‘ಕುಮಾರಸ್ವಾಮಿ ಐರನ್ ಓರ್’ ಹೆಸರಿನ ಅದಿರು ಬ್ಲಾಕ್ ಅನ್ನು ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಹರಾಜು ಹಾಕಿತ್ತು. ಈ ಬೆಳವಣಿಗೆ ಬಳಿಕ ‘ನೋ ಗೋ ಝೋನ್’ ಚರ್ಚೆ ತೀವ್ರತೆ ಪಡೆದುಕೊಂಡಿದೆ.
ಇಲಾಖೆ ಸಮ್ಮತಿ ಸಾಕು
ಸಂಡೂರಿನ ಅರಣ್ಯವನ್ನು ಅಭಯಾರಣ್ಯವೆಂದು ಘೋಷಿಸುವ ಚಿಂತನೆ ಮೊದಲಿಗೆ ಇತ್ತು. ಆದರೆ, ಇದು ಸರ್ಕಾರದ ಹಂತದ ತೀರ್ಮಾನವಾದ ಕಾರಣ ಎಲ್ಲರನ್ನೂ ಒಮ್ಮತಕ್ಕೆ ತರುವುದು ಕಷ್ಟ. ಆದರೆ, ‘ನೋ ಗೋ ಝೋನ್’ ಘೋಷಣೆಯು ಇಲಾಖಾ ಹಂತದ ತೀರ್ಮಾನವಾಗಿದ್ದು, ಸಚಿವರ ನಿರ್ಧಾರವೇ ಅಂತಿಮವಾಗಲಿದೆ ಎಂದು ಮೂಲಗಳು ಹೇಳಿವೆ.
Quote - ಖನಿಜ ನೀತಿ ಜಾರಿಗೆ ಸರ್ಕಾರ ಸಚಿವರು ಅಧಿಕಾರಿಗಳಿಗೆ ಮುಖ್ಯವಾಗಿ ಜನರಿಗೆ ಇಚ್ಛಾಶಕ್ತಿ ಇರಬೇಕು. ಸಂಡೂರಿನ ಅರಣ್ಯ ಉಳಿಸಲು ಈ ನೀತಿಯ ಅಡಿಯಲ್ಲೇ ಆಂದೋಲನ ನಡೆಯಬೇಕು.– ಎಸ್. ಆರ್. ಹಿರೇಮಠ ಮುಖ್ಯಸ್ಥ ಸಮಾಜ ಪರಿವರ್ತನಾ ಸಮುದಾಯ
ಏನಿದೆ ಖನಿಜ ನೀತಿಯಲ್ಲಿ?
ಕೇಂದ್ರ ಸರ್ಕಾರ 2019ರಲ್ಲಿ ರೂಪಿಸಿರುವ ರಾಷ್ಟ್ರೀಯ ಖನಿಜ ನೀತಿಯ 6.10ನೇ ಅಧ್ಯಾಯವು ಸುಸ್ಥಿರ ಗಣಿಗಾರಿಕೆ ಮತ್ತು ಅದಕ್ಕಾಗಿ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಸ್ಪಷ್ಟವಾಗಿ ಹೇಳಿದೆ. ಪರಿಸರ ಸೂಕ್ಷ್ಮ ಎಂದು ಗುರುತಿಸಲಾದ ಜೈವಿಕವಾಗಿ ಶ್ರೀಮಂತವಾಗಿರುವ ಪ್ರದೇಶದಲ್ಲಿ ಗಣಿಗಾರಿಕೆ ಕೈಗೊಳ್ಳಬಾರದು. ಸರ್ಕಾರವು ಅಂಥ ಪ್ರದೇಶಗಳನ್ನು ಗುರುತಿಸಬೇಕು. ಗಣಿಗಾರಿಕೆಗೆ ‘ನಿಷೇಧಿತ ಪ್ರದೇಶ’ ಅಥವಾ ‘ನೋ ಗೋ ಝೋನ್ (ನಿರ್ಬಂಧಿತ ಪ್ರದೇಶ) ಎಂದು ಘೋಷಿಸಬೇಕು. ಅಭಿವೃದ್ಧಿ ಮತ್ತು ಪರಿಸರದ ನಡುವೆ ಸಮತೋಲನ ಸಾಧಿಸಲು ಯಾವುದೇ ರೀತಿಯ ಸಂಘರ್ಷ ತಪ್ಪಿಸಲು ವಿಶೇಷ ಗಣಿಗಾರಿಕೆ ವಲಯ (ಇಎಂಝಡ್)ಗಳನ್ನು ಪ್ರತ್ಯೇಕವಾಗಿ ರಚಿಸಬೇಕು. ಮಾಲಿನ್ಯ ಇಂಗಾಲ ಮತ್ತು ಕಾರ್ಯಾಚರಣೆ ವೆಚ್ಚ ಕಡಿಮೆ ಮಾಡಲು ಗಣಿಗಾರಿಕೆ ಸ್ಥಳಗಳಲ್ಲಿ ನವೀಕರಿಸಬಹುದಾದ ಇಂಧನ ಮೂಲಗಳ ಬಳಕೆಯನ್ನು ಪ್ರೋತ್ಸಾಹಿಸಬೇಕು. ಗಣಿಗಾರಿಕೆ ಕಾರ್ಯಾಚರಣೆಗಳಲ್ಲಿ ತೊಡಗಿರುವ ಎಲ್ಲಾ ಕಾರ್ಮಿಕರಿಗೆ ಪರಿಸರ ಸಮಸ್ಯೆಗಳ ಸೂಕ್ತ ತರಬೇತಿ ನೀಡಬೇಕು ಎಂದು ಅದರಲ್ಲಿ ಹೇಳಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.