ADVERTISEMENT

ಬಳ್ಳಾರಿ ಶ್ರೀಕನಕ ದುರ್ಗಮ್ಮಗುಡಿ: ಎಲೆಪೂಜೆ ಸೇವೆಗೆ ಸೀಮಿತ

ನವರಾತ್ರಿ ಪ್ರಯುಕ್ತ ಕುಂಭಪೂಜೆ ಇಲ್ಲ

​ಪ್ರಜಾವಾಣಿ ವಾರ್ತೆ
Published 16 ಅಕ್ಟೋಬರ್ 2020, 10:23 IST
Last Updated 16 ಅಕ್ಟೋಬರ್ 2020, 10:23 IST
ಅಮಾವಾಸ್ಯೆ ಪ್ರಯುಕ್ತ ಬಳ್ಳಾರಿಯ ಕನಕದುರ್ಗಮ್ಮ ಗುಡಿಯ ದೇವಿ ಮೂರ್ತಿಯನ್ನು ಶುಕ್ರವಾರ್ ಫಲಪುಷ್ಪಗಳಿಂದ ಅಲಂಕರಿಸಲಾಗಿತ್ತು
ಅಮಾವಾಸ್ಯೆ ಪ್ರಯುಕ್ತ ಬಳ್ಳಾರಿಯ ಕನಕದುರ್ಗಮ್ಮ ಗುಡಿಯ ದೇವಿ ಮೂರ್ತಿಯನ್ನು ಶುಕ್ರವಾರ್ ಫಲಪುಷ್ಪಗಳಿಂದ ಅಲಂಕರಿಸಲಾಗಿತ್ತು   

ಬಳ್ಳಾರಿ: ನಗರದ ಅಧಿದೇವತೆಯಾದ ಕನಕದುರ್ಗಮ್ಮ ಗುಡಿಯಲ್ಲಿ ಶನಿವಾರದಿಂದ ನವರಾತ್ರಿ ಆಚರಣೆ ಆರಂಭವಾಗಲಿದ್ದು, ಕೊರೊನಾ ನಿಯಂತ್ರಣದ ಸಲುವಾಗಿ ದೇವಿಗೆ ಕುಂಭಪೂಜೆ ಮಾಡದಿರಲು ನಿರ್ಧರಿಸಲಾಗಿದೆ. ಎಲೆಪೂಜೆಗಷ್ಟೇ ಸೀಮಿತಗೊಳಿಸಲಾಗಿದ್ದು, ಅನ್ನದಾಸೋಹವನ್ನೂ ನಿಲ್ಲಿಸಲಾಗಿದೆ.

‘ದೇವಿ ದರ್ಶನಕ್ಕೆ ಬರುವ ಭಕ್ತರಿಗೆ ತೀರ್ಥಪ್ರಸಾದಗಳನ್ನು ಕೊಡುವುದಿಲ್ಲ. ತೆಂಗಿನಕಾಯಿ ಸೇವೆಯೂ ಇರುವುದಿಲ್ಲ. ಆದರೆ ದೇವಿಯ ಮೂರ್ತಿಯನ್ನು ವಿವಿಧ ಹೂವು, ಹಣ್ಣು ಹಾಗೂ ಬಂಗಾರದ ಅಭರಣಗಳಿಂದ ಅಲಂಕರಿಸಲಾಗುವುದು ’ ಎಂದು ಗುಡಿಯ ಪ್ರಧಾನ ಅರ್ಚಕ ಪಿ.ಗಾದೆಪ್ಪ ಗುಡಿಯ ಆವರಣದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

‘ನವರಾತ್ರಿ ಪೂಜೆಗೆಂದು ಪ್ರತಿ ವರ್ಷವೂ ವಿವಿಧ ಜಿಲ್ಲೆಗಳ ಸಾವಿರಾರು ಭಕ್ತರು ಗುಡಿಗೆ ಬರುತ್ತಾರೆ. ಈ ಬಾರಿ ಭಕ್ತರಿಗೆ ಮುಕ್ತಪ್ರವೇಶ ಇರುವುದಿಲ್ಲ. ಮಾಸ್ಕ್‌ ಧರಿಸಿದ್ದರಷ್ಟೇ ಪ್ರವೇಶ ನೀಡಲಾಗುವುದು. ಬರುವ ಪ್ರತಿಯೊಬ್ಬರ ಜ್ವರ ತಪಾಸಣೆಯನ್ನೂ ಮಾಡಲಾಗುವುದು’ ಎಂದರು.

ADVERTISEMENT

ದೀಪ ಬೆಳಗುವಿಕೆ: ‘ನವರಾತ್ರಿಯ ಅಂಗವಾಗಿಯೇ ದೇವಸ್ಥಾನದ ಮುಂಭಾಗದ ಸ್ತಂಬದಲ್ಲಿ ದೀಪವನ್ನು ಬೆಳಗಲಾಗುವುದು. ಆ ದೀಪವು 9 ದಿನಗಳ ಕಾಲ ಆರದಂತೆ ನೋಡಿಕೊಳ್ಳಲಾಗುವುದು’ ಎಂದು ಹೇಳಿದರು. ಅರ್ಚಕ ದಿವಾಕರ್, ಚಂದ್ರಕಲಾ, ಧಾರ್ಮಿಕ ದತ್ತಿ ಇಲಾಖೆ ಅಧಿಕಾರಿ ಹನುಮಂತಪ್ಪ ಉಪಸ್ಥಿತರಿದ್ದರು.

ಪಂಚಲೋಹ ಕವಚ ಅರ್ಪಣೆ ಇಂದು

‘ನವರಾತ್ರಿ ಅಂಗವಾಗಿ ನಗರದ ಪಟೇಲ್‌ ನಗರದ ದುರ್ಗಾ ಕಾಲೊನಿಯಲ್ಲಿರುವ ಸಣ್ಣ ದುರ್ಗಮ್ಮ ಗುಡಿಯಲ್ಲಿ ವಿಶೇಷ ಪೂಜೆಗಳು ಅ.17ರಿಂದ ಆರಂಭವಾಗಲಿದ್ದು, ಅಂದುದೇವಸ್ಥಾನದ ಗರ್ಭಗುಡಿ ಬಾಗಿಲಿಗೆ ಪಂಚಲೋಹ ಕವಚವನ್ನು ಅರ್ಪಿಸಲಾಗುವುದು’ ಎಂದು ದೇವಸ್ಥಾನ ಟ್ರಸ್ಟ್ ಅಧ್ಯಕ್ಷ ಮೀನಳ್ಳಿ ತಾಯಣ್ಣ ತಿಳಿಸಿದರು.

‘ಅ.26ರವರೆಗೆ ದೇವಿಯ ಮೂರ್ತಿಗೆ ವಿಶೇಷ ಅಲಂಕಾರ ಮಾಡಲಾಗುವುದು. ಪ್ರತಿದಿನ ಬೆಳಿಗ್ಗೆ 5.30ರಿಂದ ವಿಶೇಷ ಪೂಜೆ, ಎಲೆಪೂಜೆ, ಕುಂಕುಮ ಅರ್ಚನೆ ನಡೆಯಲಿದೆ. ಸಂಜೆ ಲಲಿತ ಸಹಸ್ರನಾಮ, ರಾತ್ರಿ ಮಹಾಮಂಗಳರಾತಿ ಬಳಿಕ ವಿಶೇಷ ಪಂಚಾಮೃತ ಅಭಿಷೇಕ ನಡೆಯಲಿದೆ’ ಎಂದು ಗುಡಿಯ ಆವರಣದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

’ಅ.24ರಂದು ಶನಿವಾರ ಬೆಳಿಗ್ಗೆ 6 ಗಂಟೆಯಿಂದ ಚಂಡಿಹೋಮ ಹಾಗೂ 10 ಗಂಟೆಯಿಂದ ವಿಶೇಷ ಅಭಿಷೇಕ, ಅಲಂಕಾರ ನಡೆಯಲಿದೆ.ಪ್ರತಿ ಕುಟುಂಬದ ಇಬ್ಬರಿಗೆ ಮಾತ್ರ ಗುಡಿಗೆ ಬರಲು ಅವಕಾಶ ನೀಡಲಾಗುವುದು. ವೃದ್ಧರು ಹಾಗೂ ಮಕ್ಕಳು ಬರುವಂತಿಲ್ಲ. ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು. ದೇವಸ್ಥಾನದ ಒಳಗೆ ಹಾಗೂ ಹೊರಗೆ ಪ್ರಸಾದ ಹಂಚಲು ಅವಕಾಶವಿಲ್ಲ’ ಎಂದರು.

ಮುಖಂಡರಾದ ಸಿ.ಎಸ್.ಸತ್ಯನಾರಾಯಣ, ಕಾರ್ಯದರ್ಶಿ ರಮೇರ್ಶ, ಚೆಂಚಯ್ಯ, ತಿಪ್ಪಣ್ಣ, ಕೃಷ್ಣ, ರಾಮು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.