ADVERTISEMENT

ದಿನಗೂಲಿ ನೌಕರನ ಕೆಲಸ ಕಾಯಂ: ನ್ಯಾಯಮಂಡಳಿ ಆದೇಶಕ್ಕಿಲ್ಲ ಬೆಲೆ

ಕಾಯಂಗೊಳಿಸಲು ಭಾರತೀಯ ಪುರಾತತ್ವ ಸರ್ವೇಕ್ಷಣ ಇಲಾಖೆ ಹಿಂದೇಟು

ಶಶಿಕಾಂತ್ ಎಸ್. ಶೆಂಬೆಳ್ಳಿ
Published 12 ಫೆಬ್ರುವರಿ 2019, 19:45 IST
Last Updated 12 ಫೆಬ್ರುವರಿ 2019, 19:45 IST
–ಎಸ್‌. ವೆಂಕಟೇಶ್‌ ಸ್ವಾಮಿನಾಥನ್‌
–ಎಸ್‌. ವೆಂಕಟೇಶ್‌ ಸ್ವಾಮಿನಾಥನ್‌   

ಹೊಸಪೇಟೆ: ದಿನಗೂಲಿ ನೌಕರನ ಕೆಲಸ ಕಾಯಂಗೊಳಿಸುವಂತೆಕೇಂದ್ರೀಯ ಆಡಳಿತಾತ್ಮಕ ನ್ಯಾಯಮಂಡಳಿ ಆದೇಶ ನೀಡಿ ಎರಡುವರೆ ತಿಂಗಳಾದರೂ ಅದನ್ನು ಪಾಲಿಸಲು ಭಾರತೀಯ ಪುರಾತತ್ವ ಸರ್ವೇಕ್ಷಣ ಇಲಾಖೆ (ಎ.ಎಸ್‌.ಐ.) ಹಂಪಿ ವೃತ್ತ ಹಿಂದೇಟು ಹಾಕುತ್ತಿದೆ.

ದೇವರು ವರ ಕೊಟ್ಟರೂ ಪೂಜಾರಿ ವರ ಕೊಟ್ಟಿಲ್ಲ ಎಂಬಂತಹ ಪರಿಸ್ಥಿತಿ ಸೃಷ್ಟಿಯಾಗಿದ್ದು, ಎ.ಎಸ್‌.ಐ. ದಿನಗೂಲಿ ನೌಕರ ಎಸ್‌. ವೆಂಕಟೇಶ್‌ ಸ್ವಾಮಿನಾಥನ್‌ ಅವರ ಹಲವು ವರ್ಷಗಳ ಹೋರಾಟಕ್ಕೆ ಇನ್ನೂ ಫಲ ಸಿಕ್ಕಿಲ್ಲ.

ನ್ಯಾಯ ಸಿಗದ ಕಾರಣ ವೆಂಕಟೇಶ್‌ ಅವರು ರಾಷ್ಟ್ರಪತಿ ರಾಮನಾಥ್‌ ಕೋವಿಂದ್‌, ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಕಾರ್ಮಿಕ ಇಲಾಖೆಯ ಕಾರ್ಯದರ್ಶಿಗೆ ಪತ್ರ ಬರೆದಿದ್ದಾರೆ. ಈ ಸಂಬಂಧ ಎಲ್ಲರೂ ಇಲಾಖೆಗೆ ಸೂಚನೆ ನೀಡಿದರೂ ಅದನ್ನು ಜಾರಿಗೆ ತರುತ್ತಿಲ್ಲ.

ADVERTISEMENT

’ನವದೆಹಲ್ಲಿಯಲ್ಲಿನ ಇಲಾಖೆ ಪ್ರಧಾನ ನಿರ್ದೇಶಕಿ ಉಷಾ ಶರ್ಮಾ, ಬೆಂಗಳೂರು ವೃತ್ತದ ಸೂಪರಿಟೆಂಡೆಂಟ್‌ ಕೆ. ಮೂರ್ತೇಶ್ವರಿ ಹಾಗೂ ಹಂಪಿ ವೃತ್ತದ ಡೆಪ್ಯುಟಿ ಸೂಪರಿಟೆಂಡೆಂಟ್‌ ಪಿ. ಕಾಳಿಮುತ್ತು ಅವರಿಗೆ ಪತ್ರ ಬರೆದರೂ ಪ್ರಯೋಜನವಾಗಿಲ್ಲ’ ಎನ್ನುತ್ತಾರೆ ವೆಂಕಟೇಶ್‌.

ಹಂಪಿ ಪವರ್‌ ಹೌಸ್‌ ನಿವಾಸಿಯಾಗಿರುವ ವೆಂಕಟೇಶ್‌ 1986ರಲ್ಲಿ ಎ.ಎಸ್‌.ಐ.ನಲ್ಲಿ ಉತ್ಖನನ ಕಾರ್ಯಕ್ಕೆ ದಿನಗೂಲಿ ನೌಕರರಾಗಿ ಕೆಲಸಕ್ಕೆ ಸೇರಿದ್ದಾರೆ. ಅಂದಿನಿಂದ ಇಂದಿನ ವರೆಗೆ ಅದೇ ಕೆಲಸದಲ್ಲಿ ಮುಂದುವರಿದಿದ್ದಾರೆ. ಇಲಾಖೆಯು 2011ರಲ್ಲಿ 135 ಜನ ದಿನಗೂಲಿ ನೌಕರರನ್ನು ಕಾಯಂ ಮಾಡಿಕೊಳ್ಳಲು ಪ್ರಕ್ರಿಯೆ ಆರಂಭಿಸಿತು. ’ಎಲ್ಲ ಅರ್ಹತೆ ಹೊಂದಿದರೂ ಉದ್ದೇಶಪೂರ್ವಕವಾಗಿ ನನ್ನನ್ನು ಕಡೆಗಣಿಸಲಾಗಿದ್ದು, ಅಂದಿನಿಂದ ಇಂದಿನ ವರೆಗೆ ದಿನಗೂಲಿ ನೌಕರನಾಗಿಯೇ ಕೆಲಸ ನಿರ್ವಹಿಸುವಂತಾಗಿದೆ’ ಎಂದು ವೆಂಕಟೇಶ್‌ ಅಳಲು ತೋಡಿಕೊಂಡರು.

‘ಕೆಲಸಕ್ಕೆ ಸೇರಿದ 1986ನೇ ಸಾಲಿನಲ್ಲಿ 240 ದಿನ ಕೆಲಸ ನಿರ್ವಹಿಸಬೇಕು ಎಂಬ ಮಾನದಂಡ ಆಧರಿಸಿ ದಿನಗೂಲಿ ನೌಕರರ ಸೇವೆ ಕಾಯಂಗೊಳಿಸಲಾಗಿದೆ. ನಾನು 243 ದಿನ ಕೆಲಸ ನಿರ್ವಹಿಸಿದರೂ ನನ್ನನ್ನು ಪರಿಗಣಿಸಲಿಲ್ಲ. ಕೆಲಸ ಮಾಡದೇ ಇರುವವರು, ಒಂದೆರಡು ದಿನ ಕೆಲಸ ನಿರ್ವಹಿಸಿದವರ ಸೇವೆ ಕಾಯಂಗೊಳಿಸಲಾಗಿದೆ. ಅಂದು ನೇಮಕಾತಿ ಪ್ರಕ್ರಿಯೆಗೆ ಇಲಾಖೆ ನೇಮಿಸಿದ ಸಮಿತಿ ಪಾರದರ್ಶಕವಾಗಿ ಕೆಲಸ ನಿರ್ವಹಿಸದೆ ತಪ್ಪು ಎಸಗಿದ್ದರಿಂದ ಹೀಗಾಗಿದೆ’ ಎಂದು ವೆಂಕಟೇಶ್‌ ಹೇಳಿದರು.

‘ಅದನ್ನು ಪ್ರಶ್ನಿಸಿ 2016ರಲ್ಲಿ ಕೇಂದ್ರೀಯ ಆಡಳಿತಾತ್ಮಕ ನ್ಯಾಯಮಂಡಳಿ ಮೊರೆ ಹೋಗಿದ್ದೆ. ನ್ಯಾಯಮಂಡಳಿಯು ಸುದೀರ್ಘ ವಿಚಾರಣೆ ನಡೆಸಿ, ನನ್ನ ಕೆಲಸಕ್ಕೆ ಸೇರಿದ ದಾಖಲೆಗಳನ್ನು ಪರಿಶೀಲಿಸಿದ ನಂತರ, ನೇಮಕ ಪ್ರಕ್ರಿಯೆ ನಡೆದ ದಿನದಿಂದ ಜಾರಿಗೆ ಬರುವಂತೆ ವೆಂಕಟೇಶ್‌ ಅವರಿಗೆ ವೇತನ ಸೇರಿದಂತೆ ಇತರೆ ಭತ್ಯೆ ಕೊಡಬೇಕೆಂದು2018ರ ನವೆಂಬರ್‌ 29ರಂದು ಆದೇಶ ನೀಡಿದೆ.ಹೀಗಿದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲ. ಇದು ನ್ಯಾಯಮಂಡಳಿಗೆ ಮಾಡುತ್ತಿರುವ ಅಪಮಾನ’ ಎಂದು ವೆಂಕಟೇಶ್‌ ಪ್ರತಿಕ್ರಿಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.