ADVERTISEMENT

ಎ.ಎಂ.ಸಿ ಪ್ರಕರಣ: ‘ಗಾಲಿ ಲಕ್ಷ್ಮಿ ಅರುಣ, ಸಿಬಿಐಗೆ ನೋಟಿಸ್‌’

​ಪ್ರಜಾವಾಣಿ ವಾರ್ತೆ
Published 17 ಏಪ್ರಿಲ್ 2019, 12:15 IST
Last Updated 17 ಏಪ್ರಿಲ್ 2019, 12:15 IST

ಹೊಸಪೇಟೆ: ‘ಅಸೋಸಿಯೇಟೆಡ್‌ ಮೈನಿಂಗ್‌ ಕಂಪೆನಿ (ಎ.ಎಂ.ಸಿ.) ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿಸಚಿವ ಜನಾರ್ದನ ರೆಡ್ಡಿ ಅವರ ಪತ್ನಿ ಗಾಲಿ ಲಕ್ಷ್ಮಿ ಅರುಣ ಹಾಗೂ ಇತರರ ವಿರುದ್ಧ ದಾವೆ ಹೂಡಬಹುದು ಎಂದು ಹೈಕೋರ್ಟ್‌ ಆದೇಶ ಹೊರಡಿಸಿದೆ’ ಎಂದು ಸಮಾಜ ಪರಿವರ್ತನ ಸಮುದಾಯದ ಮುಖ್ಯಸ್ಥ ಎಸ್‌.ಆರ್‌. ಹಿರೇಮಠ ತಿಳಿಸಿದರು.

ಬುಧವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ‘ಈ ಹಿಂದೆ ವಿಚಾರಣಾ ನ್ಯಾಯಾಲಯವು ಅವರ ಅರ್ಜಿಯನ್ನು ಪುರಸ್ಕರಿಸಿ ಪ್ರಕರಣದಿಂದ ಖುಲಾಸೆಗೊಳಿಸಿತ್ತು. ಇದರ ವಿರುದ್ಧ ನಮ್ಮ ಸಂಘಟನೆ ಮೇಲ್ಮನವಿ ಸಲ್ಲಿಸಿತ್ತು. ಅದನ್ನು ನ್ಯಾಯಾಲಯ ಏ.16ರಂದು ಪುರಸ್ಕರಿಸಿದೆ. ಜತೆಗೆ ಲಕ್ಷ್ಮಿ ಅರುಣ ಹಾಗೂ ಸಿ.ಬಿ.ಐ.ಗೆ. ನೋಟಿಸ್‌ ಕೂಡ ನೀಡಿದೆ. ಅಕ್ರಮ ಗಣಿಗಾರಿಕೆ ವಿರುದ್ಧದ ಹೋರಾಟದಲ್ಲಿ ಇನ್ನೊಂದು ಜಯ ಸಿಕ್ಕಂತಾಗಿದೆ’ ಎಂದು ಹೇಳಿದರು.

‘ಅಕ್ರಮ ಗಣಿಗಾರಿಕೆಗೆ ಸಂಬಂಧಿಸಿದಂತೆ ಜನಾರ್ದನ ರೆಡ್ಡಿ ಸೇರಿದಂತೆ ಹಲವರು ಕೋಟ್ಯಂತರ ರೂಪಾಯಿ ಲೂಟಿ ಹೊಡೆದಿದ್ದಾರೆ. ಎಲ್ಲರಿಗೂ ಶಿಕ್ಷೆಯಾಗಬೇಕು ಎನ್ನುವುದು ನಮ್ಮ ಉದ್ದೇಶ. ನ್ಯಾಯ ಸಿಗುವವರೆಗೆ ನಮ್ಮ ಹೋರಾಟ ಮುಂದುವರಿಯಲಿದೆ. ಈಗಾಗಲೇ ರೆಡ್ಡಿ ಅವರಿಗೆ ಬಳ್ಳಾರಿ ಪ್ರವೇಶದ ಮೇಲೆ ನ್ಯಾಯಾಲಯ ನಿರ್ಬಂಧ ಹೇರಿದೆ. ಒಂದುವೇಳೆ ಅವರಿಗೆ ಹಾಗೆಯೇ ಬಿಟ್ಟಿದ್ದರೆ ಚುನಾವಣೆಗೆ ಸ್ಪರ್ಧಿಸಿ ಗಣಿಗಾರಿಕೆಯಿಂದ ಅಕ್ರಮವಾಗಿ ಗಳಿಸಿದ ಹಣದಿಂದ ಗೆಲ್ಲುತ್ತಿದ್ದರು’ ಎಂದರು.

ADVERTISEMENT

ಸಂವಿಧಾನ ಉಳಿವಿಗೆ ಹೋರಾಟ:

‘ಸಂವಿಧಾನ ಹಾಗೂ ಪ್ರಜಾಸತ್ತಾತ್ಮಕ ಸಂಸ್ಥೆಗಳ ರಕ್ಷಣೆಗೆ ಆಗ್ರಹಿಸಿ ಜನಾಂದೋಲನ ಆರಂಭಿಸಲಾಗಿದೆ. ಈಗಾಗಲೇ ರಾಷ್ಟ್ರಪತಿ ರಾಮನಾಥ್‌ ಕೋವಿಂದ್‌ ಅವರಿಗೆ ಮನವಿ ಪತ್ರ ಸಲ್ಲಿಸಲಾಗಿದೆ. ವಿವಿಧ ಸಂಘ ಸಂಸ್ಥೆಗಳು, ಹೋರಾಟಗಾರರು, ಬರಹಗಾರರು ಬೆಂಬಲ ಸೂಚಿಸಿದ್ದಾರೆ’ ಎಂದು ‘ಸಿಟಿಜನ್ಸ್‌ ಫಾರ್‌ ಡೆಮಾಕ್ರಸಿ’ಯ ಮುಖ್ಯಸ್ಥರೂ ಆಗಿರುವ ಹಿರೇಮಠ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.