ADVERTISEMENT

ಮೈಲಾರದಲ್ಲಿ ಮರಳಿದ ವೈಭವ

ಕೆ.ಸೋಮಶೇಖರ
Published 7 ಫೆಬ್ರುವರಿ 2023, 19:30 IST
Last Updated 7 ಫೆಬ್ರುವರಿ 2023, 19:30 IST
ಮೈಲಾರ ಜಾತ್ರೆ ಅಂಗವಾಗಿ ಕುದುರೆಕಾರ ಸೇವೆ ಮಂಗಳವಾರ ನಡೆಯಿತು
ಮೈಲಾರ ಜಾತ್ರೆ ಅಂಗವಾಗಿ ಕುದುರೆಕಾರ ಸೇವೆ ಮಂಗಳವಾರ ನಡೆಯಿತು   

ಮೈಲಾರ (ವಿಜಯನಗರ ಜಿಲ್ಲೆ): ಹೂವಿನಹಡಗಲಿ ತಾಲ್ಲೂಕಿನ ಇತಿಹಾಸ ಸುಪ್ರಸಿದ್ಧ ಮೈಲಾರ ಸುಕ್ಷೇತ್ರದಲ್ಲಿ ಮಂಗಳವಾರ ಸಂಜೆ ಲಕ್ಷೋಪ ಲಕ್ಷ ಭಕ್ತರ ಮಧ್ಯೆ ಮೈಲಾರಲಿಂಗೇಶ್ವರ ಸ್ವಾಮಿ ಕಾರಣಿಕ ನುಡಿ ಅನುರಣಿಸಿತು.

ಕೋವಿಡ್ ಹಿನ್ನೆಲೆಯಲ್ಲಿ ಕಳೆದ ಎರಡು ವರ್ಷ ಕಳೆಗುಂದಿದ್ದ ಮೈಲಾರ ಜಾತ್ರೆ ಈ ಬಾರಿ ಮತ್ತೆ ವೈಭವಕ್ಕೆ ಮರಳಿತು. ರಾಜ್ಯ, ಹೊರ ರಾಜ್ಯಗಳಿಂದ ಸುಕ್ಷೇತ್ರಕ್ಕೆ ಆಗಮಿಸಿದ್ದ ಭಕ್ತರು ಸಂಭ್ರಮದಿಂದ ಜಾತ್ರೆಯಲ್ಲಿ ಪಾಲ್ಗೊಂಡು, ಸ್ವಾಮಿಯ ದೈವವಾಣಿ ಆಲಿಸಿದರು.

ವಿಜಯನಗರ ಹಾಗೂ ನೆರೆಯ ಜಿಲ್ಲೆಯ ಕೃಷಿ ಪರಿವಾರಗಳು ಎತ್ತಿನ ಬಂಡಿ, ಟ್ರ್ಯಾಕ್ಟರ್, ಟಾಟಾ ಏಸ್ ಗಳಲ್ಲಿ ಬಂದು ವಾಸ್ತವ್ಯ ಹೂಡಿದ್ದು, ಜಾತ್ರಾ ಮೈದಾನದಲ್ಲಿ ಗ್ರಾಮೀಣ ಸೊಗಡು ಮೇಳೈಸಿದೆ. ಭಾರತ ಹುಣ್ಣಿಮೆ ಆಚರಣೆಗಾಗಿ ಸುಕ್ಷೇತ್ರಕ್ಕೆ ಬಂದಿರುವ ಭಕ್ತರು ಮೈಲಾರ ವ್ಯಾಪ್ತಿಯ ಹೊಲ ಗದ್ದೆಗಳಲ್ಲಿ ಟೆಂಟ್ ಹಾಕಿದ್ದಾರೆ. ತಾವಿರುವ ಜಾಗದಲ್ಲೇ ದೋಣಿ ತುಂಬಿಸುವ ಸಾಂಪ್ರಾದಾಯಿಕ ಆಚರಣೆ ಮೂಲಕ ಮೈಲಾರಲಿಂಗಸ್ವಾಮಿಯ ಸ್ಮರಣೆ ಮಾಡುತ್ತಿದ್ದರು.

ADVERTISEMENT

ಮೂಲಸೌಕರ್ಯ:

ಜಾತ್ರೆಗೆ ಆಗಮಿಸಿದ ಲಕ್ಷಾಂತರ ಭಕ್ತರಿಗೆ ಜಿಲ್ಲಾಡಳಿತವು ಉತ್ತಮ ಮೂಲಸೌಕರ್ಯ ಕಲ್ಪಿಸಿತ್ತು. ಜಾತ್ರಾ ಮೈದಾನದಲ್ಲಿ ವಾಸ್ತವ್ಯ ಹೂಡಿರುವ ಎಲ್ಲ ಭಕ್ತರಿಗೆ ಶುದ್ಧ ಕುಡಿಯುವ ನೀರು, ಶೌಚಾಲಯ ವ್ಯವಸ್ಥೆ ಕಲ್ಪಿಸಲಾಗಿತ್ತು. ಸಾರಿಗೆ, ನೈರ್ಮಲ್ಯ, ಜನಾರೋಗ್ಯ ವ್ಯವಸ್ಥೆ ಉತ್ತಮವಾಗಿತ್ತು.

ಕಾರಣಿಕ ನುಡಿ ಆಲಿಸಿದ ಗಣ್ಯರು:

ಕಾಗಿನೆಲೆ ಕನಕ ಪೀಠದ ನಿರಂಜನಾನಂದಪುರಿ ಸ್ವಾಮೀಜಿ, ಶಾಸಕ ಪಿ.ಟಿ.ಪರಮೇಶ್ವರ ನಾಯ್ಕ, ಸಂಸದ ವೈ.ದೇವೇಂದ್ರಪ್ಪ, ಮಾಜಿ ಶಾಸಕರಾದ ಬಿ.ಚಂದ್ರನಾಯ್ಕ, ಬಸವರಾಜ ಶಿವಣ್ಣನವರ, ಸಫಾಯಿ ಕರ್ಮಚಾರಿ ಅಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷ ಎಚ್.ಹನುಮಂತಪ್ಪ, ಜಿಲ್ಲಾಧಿಕಾರಿ ಟಿ.ವೆಂಕಟೇಶ, ಜಿ.ಪಂ ಸಿಇಒ ಸದಾಶಿವ ಪ್ರಭು, ಬಳ್ಳಾರಿ ವಲಯದ ಐಜಿ ಲೋಕೇಶ್ ಕುಮಾರ್‌ ಬಿ.ಎಸ್‌., ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶ್ರೀಹರಿಬಾಬು ಬಿ.ಎಲ್., ಹರಪನಹಳ್ಳಿ ಉಪವಿಭಾಗಾಧಿಕಾರಿ ಟಿ.ವಿ.ಪ್ರಕಾಶ್, ಧಾರ್ಮಿಕ ದತ್ತಿ ಇಲಾಖೆಯ ಸಹಾಯಕ ಆಯುಕ್ತ ಎಂ.ಎಚ್.ಪ್ರಕಾಶರಾವ್, ತಹಶೀಲ್ದಾರ್ ಕೆ.ಶರಣಮ್ಮ, ತಾ.ಪಂ. ಇಒ ಎಸ್.ಎಸ್.ಪ್ರಕಾಶ, ದೇವಸ್ಥಾನ ಸಮಿತಿ ಕಾರ್ಯನಿರ್ವಾಹಕ ಅಧಿಕಾರಿ ಬಿ.ಎಂ.ಕೃಷ್ಣಪ್ಪ, ಗ್ರಾ.ಪಂ. ಅಧ್ಯಕ್ಷ ನಾಗಪ್ಪ ದೇವರಗುಡ್ಡ ಸೇರಿದಂತೆ ಇತರೆ ಗಣ್ಯರು ಕಾರಣಿಕ ನುಡಿ ಆಲಿಸಿದರು.

ಟ್ರಾಫಿಕ್ ಕಿರಿಕಿರಿ:

ಕಾರಣಿಕ ಜರುಗಿದ ಬಳಿಕ ವಾಹನಗಳು ಏಕಕಾಲಕ್ಕೆ ಹೊರಟಿದ್ದರಿಂದ ಡೊಂಬರಹಳ್ಳಿ ರಸ್ತೆ, ಹಾವೇರಿ, ಹಡಗಲಿ ರಸ್ತೆಯಲ್ಲಿ ಸಂಚಾರ ದಟ್ಟಣೆ ಉಂಟಾಗಿದ್ದರಿಂದ ಭಕ್ತರು ತೊಂದರೆ ಅನುಭವಿಸಿದರು.

ಇಷ್ಟಾರ್ಥ ಸಿದ್ಧಿಗಾಗಿ ಪ್ರಾರ್ಥಿಸಿ ದೇವಸ್ಥಾನ ಹಾಗೂ ಡೆಂಕನಮರಡಿಯಲ್ಲಿ ಭಕ್ತರು ನಾನಾ ಬಗೆಯ ಹರಕೆ ತೀರಿಸಿದರು. ದೋಣಿಸೇವೆ, ಕುದುರೆಕಾರ ಸೇವೆ, ದೀವಟಿಗೆ ಸೇವೆ, ದೀಡು ನಮಸ್ಕಾರ, ಜವುಳ, ಹಣ್ಣು ತುಪ್ಪ ಅರ್ಪಣೆ ಸೇವೆ, ಛತ್ರಿ, ಚಾಮರ ಮುಂತಾದ ಹರಕೆಗಳನ್ನು ಅಹೋರಾತ್ರಿ ಕೈಗೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.