ADVERTISEMENT

ಹೂವಿನಹಡಗಲಿ: ಶಿಥಿಲ ಕಟ್ಟಡ, ಅಂಗಳ ಜಲಾವೃತ

ತಳವಾರ ದೊಡ್ಡ ವೆಂಕಟಪ್ಪ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ದುಃಸ್ಥಿತಿ

ಕೆ.ಸೋಮಶೇಖರ
Published 1 ಜೂನ್ 2023, 23:44 IST
Last Updated 1 ಜೂನ್ 2023, 23:44 IST
ಹೂವಿನಹಡಗಲಿ ಟಿಡಿವಿ ಶಾಲೆಯ ಚಾವಣಿ ಸಿಮೆಂಟ್ ಪದರ ಕಳಚಿ ಬಿದ್ದು, ಕಬ್ಬಿಣದ ಸರಳುಗಳು ಕಾಣಿಸುತ್ತಿವೆ
ಹೂವಿನಹಡಗಲಿ ಟಿಡಿವಿ ಶಾಲೆಯ ಚಾವಣಿ ಸಿಮೆಂಟ್ ಪದರ ಕಳಚಿ ಬಿದ್ದು, ಕಬ್ಬಿಣದ ಸರಳುಗಳು ಕಾಣಿಸುತ್ತಿವೆ   

ಹೂವಿನಹಡಗಲಿ: ಶಿಥಿಲ ಕಟ್ಟಡ, ಸೋರುವ ಕೊಠಡಿಗಳು, ಮುರಿದ ಕಿಟಕಿ ಬಾಗಿಲು, ಸಣ್ಣ ಮಳೆಗೂ ಜಲಾವೃತಗೊಳ್ಳುವ ಶಾಲಾ ಅಂಗಳ… ಇದು ಪಟ್ಟಣದ ತಳವಾರ ದೊಡ್ಡ ವೆಂಕಟಪ್ಪ (ಟಿಡಿವಿ) ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ದುಃಸ್ಥಿತಿ.

ದೇಶಕ್ಕೆ ಸ್ವಾತಂತ್ರ್ಯ ಸಿಗುವ ಒಂದು ವರ್ಷ ಮುನ್ನ (1946) ಸ್ಥಾಪನೆಯಾದ ಈ ಶಾಲೆ ಐತಿಹಾಸಿಕ ಮಹತ್ವ ಹೊಂದಿದೆ. 90 ಚದರ ಅಡಿಯ ನಿವೇಶನದಲ್ಲೇ ನೆಲ ಅಂತಸ್ತು, ಮೊದಲ ಮಹಡಿಯಲ್ಲಿ ಒಟ್ಟು 14 ಕೊಠಡಿಗಳಿವೆ. ನೆಲ ಅಂತಸ್ತಿನ 6 ಕೊಠಡಿಗಳು ಬೀಳುವ ಶಿಥಿಲಗೊಂಡಿವೆ. ಮೊದಲ ಮಹಡಿಯ ಎರಡು ಕೊಠಡಿಗಳು ಸಣ್ಣ ಮಳೆಗೂ ಸೋರುತ್ತಿವೆ. ಮಹಡಿಯ ಮೆಟ್ಟಿಲುಗಳಿಗೂ ರಕ್ಷಣೆ ಇಲ್ಲ. ಕೊಠಡಿಗಳತ್ತ ಹೋಗದಂತೆ ಮಕ್ಕಳನ್ನು ತಡೆಯುವುದೇ ಶಿಕ್ಷಕರಿಗೆ ದೊಡ್ಡ ಕೆಲಸವಾಗಿದೆ. ಎರಡೆರಡು ತರಗತಿಯ ಮಕ್ಕಳನ್ನು ಒಂದೇ ಕೊಠಡಿಯಲ್ಲಿ ಕೂರಿಸಿ ಶಿಕ್ಷಕರು ಪಾಠ ಮಾಡುತ್ತಿದ್ದಾರೆ.

‘ಶಿಥಿಲ ಕಟ್ಟಡ ತೆರವುಗೊಳಿಸಿ, ಹೊಸ ಕಟ್ಟಡ ನಿರ್ಮಿಸಿಕೊಡುವಂತೆ ಹಲವು ಬಾರಿ ಮನವಿ ಮಾಡಿದರೂ ಯಾರೂ ಸ್ಪಂದಿಸಿಲ್ಲ’ ಎಂದು ಎಸ್.ಡಿ.ಎಂ.ಸಿ. ಪದಾಧಿಕಾರಿಗಳು ಆರೋಪಿಸಿದ್ದಾರೆ.

ADVERTISEMENT

‘ಮಳೆಯ ನೀರು ಹೊರಗೆ ಹರಿಯಲು ಮಾರ್ಗವೇ ಇಲ್ಲದಂತೆ ಕಟ್ಟಡ ನಿರ್ಮಾಣವಾಗಿದೆ. ಕುಡಿಯುವ ನೀರಿನ ಸಂಪಿಗೂ ಮಳೆಯ ನೀರು ಸೇರ್ಪಡೆಯಾಗಿ ನೀರು ಕಲುಷಿತಗೊಳ್ಳುತ್ತದೆ. ಬೇರೆ ಸ್ಥಳದಲ್ಲಿ ಟ್ಯಾಂಕ್ ನಿರ್ಮಿಸಿ ಹೆಚ್ಚುವರಿ ನಳಗಳ ಸಂಪರ್ಕ ನೀಡುವ ಮನವಿಗೆ ಪುರಸಭೆಯವರು ಸ್ಪಂದಿಸಿಲ್ಲ’ ಎಂದು ಶಿಕ್ಷಕರು ದೂರುತ್ತಿದ್ದಾರೆ.

ಶಾಲೆಯಲ್ಲಿ 1ರಿಂದ 7ನೇ ತರಗತಿವರೆಗೆ 180 ವಿದ್ಯಾರ್ಥಿಗಳು ಓದುತ್ತಿದ್ದು, ಈ ಸಂಖ್ಯೆ 200 ದಾಟುವ ನಿರೀಕ್ಷೆಯಿದೆ.

ಶಾಲಾ ಕೊಠಡಿಗಳೆಲ್ಲ ಶಿಥಿಲವಾಗಿರುವುದರಿಂದ ಹೊಸ ಕಟ್ಟಡ ನಿರ್ಮಿಸಿಕೊಡುವಂತೆ ಐದು ವರ್ಷದಿಂದ ಮನವಿ ಸಲ್ಲಿಸುತ್ತಿದ್ದರೂ ಮಂಜೂರಾತಿ ಸಿಕ್ಕಿಲ್ಲ

-ಆರ್.ಗಿರಿಜಮ್ಮ ಮುಖ್ಯಶಿಕ್ಷಕಿ

‘ವಿವೇಕ’ ಯೋಜನೆಯಡಿ ಒಂದು ಕೊಠಡಿ ಮಂಜೂರಾಗಿದೆ. ಹೆಚ್ಚುವರಿ ಕೊಠಡಿ ಶೌಚಾಲಯ ಮೂಲಸೌಕರ್ಯಕ್ಕೆ ಬೇರೆ ಯೋಜನೆಗಳಲ್ಲಿ ಪ್ರಸ್ತಾವ ಸಲ್ಲಿಸಿದ್ದೇವೆ

-ಶಂಕರ್ ಎನ್. ಹಳ್ಳಿಗುಡಿ ಕ್ಷೇತ್ರ ಶಿಕ್ಷಣಾಧಿಕಾರಿ ಹೂವಿನಹಡಗಲಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.