
ಕೂಡ್ಲಿಗಿ: ಒನಕೆ ಓಬವ್ವ ಉತ್ಸವ ತಾಲ್ಲೂಕಿನ ಕೀರಿಟಕ್ಕೆ ಒಂದು ಗರಿಮೆ ಇದ್ದಂತೆ ಎಂದು ಶಾಸಕ ಡಾ. ಶ್ರೀನಿವಾಸ್ ಎನ್.ಟಿ. ಹೇಳಿದರು.
ತಾಲ್ಲೂಕಿನ ಗುಡೇಕೋಟೆಯಲ್ಲಿ ಜ. 31 ಹಾಗೂ ಫೆ. 1ರಂದು ನಡೆಯಲಿರುವ ಒನಕ ಓಬವ್ವ ಉತ್ಸವದ ಲಾಂಛನವನ್ನು ಶುಕ್ರವಾರ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಬಿಡುಗಡೆ ಮಾಡಿ ಮಾತನಾಡಿದ ಅವರು, ‘ಈ ನೆಲದ ಗತವೈಭವವನ್ನು ಸಾರುವ ಈ ಉತ್ಸವವು ನಾಡ ಹಬ್ಬವಿದ್ದಂತೆ. ಆದ್ದರಿಂದ ಸ್ಥಳೀಯರು ಸೇರಿದಂತೆ ಎಲ್ಲರ ಸಹಕಾರದಿಂದ ವಿನೂತನವಾಗಿ ಅದ್ದೂರಿಯಾಗಿ ಆಚರಿಸೋಣ. ಇದಕ್ಕಾಗಿ ₹ 1.5 ಕೋಟಿ ಅನುದಾನಕ್ಕಾಗಿ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗಿದ್ದು, ಶೀಘ್ರದಲ್ಲಿಯೇ ಅನುದಾನ ಬಿಡುಗಡೆಯಾಗಲಿದೆ. ಕಾರ್ಯಕ್ರಮ ವೀಕ್ಷಣೆಗೆ ಬರುವವರಿಗೆ ಯಾವುದೇ ತೊಂದರೆಯಾಗದಂತೆ ಸಾರಿಗೆ ಮತ್ತು ಮೂಲ ಸೌಕರ್ಯ ಒದಗಿಸಲಾಗುವುದು. ಇನ್ನೂ ಉತ್ತಮವಾಗಿ ಕಾರ್ಯಕ್ರಮ ಅಯೋಜಿಸುವ ಬಗ್ಗೆ ಸಲಹೆ ಸೂಚನೆಗಳನ್ನು ಸ್ವೀಕರಿಸಲಾಗುವುದು’ ಎಂದು ಹೇಳಿದರು.
ತಹಶೀಲ್ದಾರ್ ವಿ.ಕೆ. ನೇತ್ರಾವತಿ, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ನರಸಪ್ಪ, ಗುಡೇಕೋಟೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಎನ್. ಕೃಷ್ಣ, ಗ್ಯಾರಂಟಿ ಸಮಿತಿ ತಾಲ್ಲೂಕು ಅಧ್ಯಕ್ಷ ಜಿಲಾನ್, ಮುಖಂಡರಾದ ರಾಘವೇಂದ್ರರಾವ್, ಶಿವಪ್ರಸಾದ್ ಗೌಡ, ಉಪನ್ಯಾಸ ನಾಗರಾಜ ಕೊಟ್ರಪ್ಪಗಳ ಪಾಲ್ಗೊಂಡಿದ್ದರು.
ಒನಕೆ ಓಬವ್ವ ಉತ್ಸವದ ಲಾಂಛನ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.